ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಕೊಡಿಸಿಲ್ಲವೆಂದು ವಿಷ ಸೇವಿಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

Last Updated 18 ಆಗಸ್ಟ್ 2020, 8:59 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಸಾಗಡೆ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

'ಆನ್ ಲೈನ್ ಪಾಠ ಕೇಳಲು ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಈ ರೀತಿ‌ ಮಾಡಿಕೊಂಡಿದ್ದಾಳೆ' ಎಂದು ಆಕೆಯ ತಂದೆ ಪೊಲೀಸರಿಗೆ ದೂರು‌ ನೀಡಿದ್ದಾರೆ. ಸೋಮವಾರ ಸಾಯಂಕಾಲ ಈ ಘಟನೆ ನಡೆದಿದೆ.

ಸಾಗಡೆ ಗ್ರಾಮದ ನಿವಾಸಿ ರಾಜೇಶ್, ಪದ್ಮಾ ದಂಪತಿ ಮಗಳು ಹರ್ಷಿತಾ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಒಂಬತ್ತನೇ ತರಗತಿ ತೇರ್ಗಡೆಯಾಗಿ, ಈ ವರ್ಷ 10ನೇ ತರಗತಿಗೆ ಆಕೆ ದಾಖಲಾಗಿದ್ದಳು.

'ಸ್ನೇಹಿತರ ಬಳಿ ಮೊಬೈಲ್ ಇದೆ. ತನಗೂ ಮೊಬೈಲ್ ಬೇಕು ಎಂದು ಮನೆಯಲ್ಲಿ ಹಟ ಮಾಡುತ್ತಿದ್ದಳು. ವೃತ್ತಿಯಲ್ಲಿ ಟೈಲರ್ ಆಗಿರುವ ರಾಜೇಶ್ ಅವರು, ಆರ್ಥಿಕವಾಗಿ ಸಬಲರಾಗಿರಲಿಲ್ಲ. ಸ್ವಲ್ಪ ದಿನಗಳ ನಂತರ ಮೊಬೈಲ್ ತೆಗೆದುಕೊಡುವುದಾಗಿ ಭರವಸೆ‌ ನೀಡಿದ್ದರು' ಎಂದು ಗ್ರಾಮಸ್ಥರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಇದಕ್ಕೆ ಒಪ್ಪದ ಹರ್ಷಿತಾ, ಬೆಳೆಗಳಿಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದಾಳೆ ಎಂದು ಅವರು ಮಾಹಿತಿ‌ ನೀಡಿದರು.

ತೀವ್ರವಾಗಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು‌ ತಕ್ಷಣ ಕಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು.

'ಆನ್ ಲೈನ್ ಪಾಠ ಕೇಳಲು ಮೊಬೈಲ್ ಕೊಡಿಸುವಂತೆ ಹರ್ಷಿತಾ ಕೇಳಿದ್ದಳು. ದುಡ್ಡು ಬಂದ ನಂತರ‌‌ ಕೊಡಿಸುವುದಾಗಿ ಹೇಳಿದ್ದೆ ಎಂಬುದಾಗಿ ಹರ್ಷಿತಾ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು‌ ಚಾಮರಾಜನಗರ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಲೋಹಿತ್ ಕುಮಾರ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಆನ್ ಲೈನ್ ತರಗತಿ ಇರಲಿಲ್ಲ

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಸಾಗಡೆ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಗಜೇಂದ್ರ ಅವರು, 'ನಾವು ಆನ್ ಲೈನ್ ತರಗತಿ ಮಾಡುತ್ತಿರಲಿಲ್ಲ. ವಿದ್ಯಾಗಮ‌ ಕಾರ್ಯಕ್ರಮದ ಅಡಿಯಲ್ಲಿ ಊರಿಗೆ ಹೋಗಿ ಮಕ್ಕಳನ್ನು ಒಂದೆಡೆ‌ ಸೇರಿಸಿ ಪಾಠ ಮಾಡುತ್ತಿದ್ದೆವು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT