ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯಿಸಿ ಪ್ರತಿಭಟನೆ

ಬಿರುಕು ಬಿಟ್ಟಿರುವ ಮನೆಯ ಗೋಡೆ: ಕ್ರಮಕ್ಕೆ ಹುಲ್ಲೇಪುರ ಗ್ರಾಮಸ್ಥರ ಆಗ್ರಹ
Published 10 ನವೆಂಬರ್ 2023, 13:52 IST
Last Updated 10 ನವೆಂಬರ್ 2023, 13:52 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಗಣಿಗಾರಿಕೆಯಿಂದ ಗ್ರಾಮಕ್ಕೆ ಆಗುತ್ತಿರುವ ಅಪಾಯಗಳನ್ನು ತಡೆಗಟ್ಟಲು ಕರಿಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಹುಲ್ಲೇಪುರ ಗ್ರಾಮಸ್ಥರು ಕರಿಕಲ್ಲು ತುಂಬಿದ ಲಾರಿಯನ್ನು ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಸನಿಹದಲ್ಲಿ ಅಲ್ಪಾ ಸಂಸ್ಥೆ ಹೆಸರಿನಲ್ಲಿ 20 ವರ್ಷಗಳಿಂದ ಕರಿಕಲ್ಲು ಕ್ವಾರಿ ನಡೆಸುತ್ತಿದ್ದಾರೆ. ಕ್ವಾರಿಯು ಗ್ರಾಮದ ಸನಿಹದಲ್ಲಿರುವುದರಿಂದ ಮನೆಗಳಿಗೆ ಹಾನಿಯಾಗುತ್ತಿದೆ. ಈಗಾಗಲೇ ಗೋಡೆಗಳು ಬಿರುಕು ಬಿಟ್ಟಿವೆ. ಕ್ವಾರಿಯಲ್ಲಿ ನೀರು ಬಂದಿರುವುದರಿಂದ ಗ್ರಾಮಕ್ಕೆ ಅಂತರ್ಜಲ ಕಡಿಮೆಯಾಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಗಣಿಗಾರಿಕೆಯಿಂದ ಶಬ್ದ ಹಾಗೂ ಪರಿಸರ ಮಾಲಿನ್ಯವಾಗುತ್ತಿದೆ ಎಂದು ದೂರಿದರು.

ಅತಿಯಾದ ಬಾರದ ಕರಿಕಲ್ಲು ತುಂಬಿದ ಲಾರಿಗಳು ರಾತ್ರಿ ಹಗಲು ಎನ್ನದೇ ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮುಖ್ಯ ರಸ್ತೆಗಳನ್ನು ತಲುಪುವ 3 ಕಿ.ಮೀ ವರೆಗೆ ಹಳ್ಳ, ಕೊರಕಲು ಹಾಗೂ ಗುಂಡಿಗಳು ಉಂಟಾಗಿವೆ. ಗ್ರಾಮಕ್ಕೆ ವಾಹನದಲ್ಲಿ ಬರುವ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಮಳೆಗಾಲವಾಗಿರುವುದರಿಂದ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತು ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಅತಿಯಾದ ಬಾರದಿಂದ ಸಂಚರಿಸುವ ಲಾರಿಗಳಿಂದ ಗ್ರಾಮವು ಅಪಾಯ ಎದುರಿಸಬೇಕಾಗಿದೆ ಎಂದರು.

ಅಕ್ಕಪಕ್ಕದ ಜಮೀನುಗಳಿಗೆ ಕರಿಕಲ್ಲು ಕ್ವಾರಿಯ ದೂಳು ತುಂಬುವುದರಿಂದ ಬೆಳೆ ನಷ್ಟವಾಗಿದೆ. ಇದರಿಂದ ಕೆಲವು ರೈತರು ವ್ಯವಸಾಯ ಬಿಟ್ಟಿದ್ದಾರೆ. ಜತೆಗೆ ಅಂತರ್ಜಲವು ಕಡಿಮೆಯಾಗಿ ಪಂಪ್‍ಸೆಟ್‍ಗಳಲ್ಲಿ ನೀರು ಬಾರದೇ ವ್ಯವಸಾಯಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಗಣಿಗಾರಿಕೆ ಸ್ಥಗಿತಗೊಳಿಸಿ ಗ್ರಾಮಕ್ಕೆ ಆಗುತ್ತಿರುವ ಅಪಾಯವನ್ನು ತಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಸಿದ್ದರಾಜು, ಗೋವಿಂದಶೆಟ್ಟಿ, ಮಹೇಶ್, ಮಹದೇವಶೆಟ್ಟಿ, ಕುಮಾರ್, ಶಶಿಧರ್, ಮಂಜು, ಪ್ರಕಾಶ್, ಬಸವರಾಜು, ದೊರೆಸ್ವಾಮಿ, ನಾಗೇಂದ್ರಸ್ವಾಮಿ, ಮಹೇಶ್, ಚಿನ್ನಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT