ಶನಿವಾರ, ಮೇ 21, 2022
20 °C
12 ಕ್ಷೇತ್ರಗಳಿಗೆ ಚುನಾವಣೆ; ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್‌, ಬಿಜೆಪಿ ಬೆಂಬಲಿತರು

ಚಾ.ನಗರ ಎಪಿಎಂಸಿ; ಬಿರುಸಿನ ಪೈಪೋಟಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಇದೇ 17ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ.  

ಎಪಿಎಂಸಿಯ 14 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಈ ಪೈಕಿ 12 ಚುನಾವಣಾ ಕ್ಷೇತ್ರಗಳಾಗಿದ್ದು, ಇನ್ನೆರಡು ಕ್ಷೇತ್ರಗಳ ಪೈಕಿ ಒಂದು ಕೃಷಿ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಪ್ರತಿನಿಧಿ ಕ್ಷೇತ್ರ ಹಾಗೂ ಇನ್ನೊಂದು ಕೃಷಿ ಸಹಕಾರ ಸಂಸ್ಕರಣ ಸಂಘಗಳ ಪ್ರತಿನಿಧಿ ಕ್ಷೇತ್ರ. 

12 ಕ್ಷೇತ್ರಗಳ ಪೈಕಿ ಹರವೆ, ಉಡಿಗಾಲ ಹಾಗೂ ಚಾಮರಾಜನಗರ ವರ್ತಕರ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಇದ್ದಾರೆ. ಇಲ್ಲೆಲ್ಲ ಎರಡೂ ಪಕ್ಷಗಳ ಬೆಂಬಲಿತ ಹುರಿಯಾಳುಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 

ಪ್ರತಿಷ್ಠೆಯ ಕಣ: ಚಾಮರಾಜನಗರ ಏಪಿಎಂಸಿಯ ಕಳೆದ ಸಾಲಿನ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಬಹುಮತ ಹೊಂದಿದ್ದರು. ಒಂಬತ್ತು ಸ್ಥಾನಗಳನ್ನು ಅವರು ಗೆದ್ದಿದ್ದರೆ, ಬಿಜೆಪಿ ಬೆಂಬಲಿತರು ಎರಡು ಸ್ಥಾನಗಳಲ್ಲಿ ಜಯಗಳಿಸಿದ್ದರು. 

ಈ ಬಾರಿಯ ಚುನಾವಣೆಯನ್ನು ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಶಾಸಕರು, ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಪಕ್ಷ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ. 

ಎಪಿಎಂಸಿ ಕಾಯ್ದೆ ಜಾರಿಯಾದಾಗಿನಿಂದ ಎಪಿಎಂಸಿಗಳಿಗೆ ಹೆಚ್ಚಿನ ಅಧಿಕಾರವೂ ಇಲ್ಲ. ಆದಾಯವೂ ಬರುತ್ತಿಲ್ಲ. ಹಾಗಾಗಿ, ನಿರ್ದೇಶಕರ ಸ್ಥಾನಕ್ಕೆ ಸ್ಪ‍ರ್ಧಿಸಲು ಬಹುತೇಕರು ಆಸಕ್ತಿ ತೋರಿಲ್ಲ. ಎಪಿಎಂಸಿ ಚುನಾವಣೆಯು ಪಕ್ಷಗಳ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಹಾಗಿದ್ದರೂ, ರಾಜಕೀಯ ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಮಾಡುತ್ತವೆ. ಎರಡೂ ಪಕ್ಷಗಳ ಮುಖಂಡರು ಹಲವು ಅಭ್ಯರ್ಥಿಗಳನ್ನು ಮನವೊಲಿಸಿ ನಾಮಪತ್ರ ಸಲ್ಲಿಸುವಂತೆ ಮಾಡಿದ್ದಾರೆ. 

ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಬಾರಿಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.  ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು, ಮುಖಂಡರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. 

ಇತ್ತ ಬಿಜೆಪಿ ಕೂಡ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಶ್ರಮ ಹಾಕುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಎಪಿಎಂಸಿಯಲ್ಲೂ ಅಧಿಕಾರ ಹಿಡಿಯಬೇಕು ಎಂದು ಪಣ ತೊಟ್ಟಿದೆ. ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಮುಖಂಡರು ಅಭ್ಯರ್ಥಿಗಳ ಪರವಾಗಿ ಬಿರು ಬಿಸಿಲಿನಲ್ಲೂ ಪ್ರಚಾರ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆ, ಕೃಷಿ ಸಮ್ಮಾನ್‌, ಕೃಷಿ ಸಿಂಚಾಯಿ, ಬೇವಿನ ಎಣ್ಣೆ ಲೇಪಿತ ರಸಗೊಬ್ಬರ ಪೂರೈಕೆ.. ಮುಂತಾದ ಯೋಜನೆಗಳನ್ನು ಪ್ರಸ್ತಾಪಿಸಿ ಬಿಜೆಪಿ ಮುಖಂಡರು ಮತ ಕೇಳುತ್ತಿದ್ದರೆ, ರಾಜ್ಯದಲ್ಲಿ ಇನ್ನೂ ಎಪಿಎಂಸಿ ಕಾಯ್ದೆ ವಾಪಸ್‌ ಮಾಡದೇ ಇರುವುದರಿಂದ ಎಪಿಎಂಸಿಗಳಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ಮುಖಂಡರು ಮತಯಾಚನೆ ಮಾಡುತ್ತಿದ್ದಾರೆ.

ಮತದಾರರು: ಎಪಿಎಂಸಿ ಚುನಾವಣೆಯಲ್ಲಿ ರೈತರೇ ಮತದಾರರು. ಜಮೀನಿಗೆ ಸಂಬಂಧಿಸಿದ ಪಹಣಿ, ಖಾತೆ ಹೊಂದಿರುವವರು ಈ ಚುನಾವಣೆಯಲ್ಲಿ ಮತದಾನ ಮಾಡಬಹುದು. ತಾಲ್ಲೂಕು ಆಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ, 12 ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,49,665 ಮತದಾರರಿದ್ದಾರೆ. ಚುನಾವಣೆಗಾಗಿ 135 ಮತಗಟ್ಟೆಗಳನ್ನು ಗುರುತಿಸಲಾಗಿದೆ. 

ಗೊಂದಲ: ಮತದಾರರ ಪಟ್ಟಿಯಲ್ಲಿ ಯಾವಾಗಲೂ ಗೊಂದಲ ಇರುತ್ತದೆ ಎಂದು ಹೇಳುತ್ತಾರೆ ಪಕ್ಷಗಳ ಮುಖಂಡರು. ಎರಡು– ಮೂರು ಕಡೆ ಜಮೀನು ಹೊಂದಿರುವ ರೈತರ ಹೆಸರುಗಳು ಆ ಭಾಗದ ಮತಪತ್ರಗಳಲ್ಲಿ ಇರುತ್ತವೆ. ಹೀಗಾಗಿ ಕಳ್ಳ ಮತದಾನದ ಸಾಧ್ಯತೆಯೂ ಇರುತ್ತದೆ ಎಂಬುದು ಅವರ ವಾದ.

ಕೇಂದ್ರ, ರಾಜ್ಯ ಸರ್ಕಾರಗಳ ರೈತ ಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಎಲ್ಲ ಕ್ಷೇತ್ರಗಳಲ್ಲೂ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.
ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಕಳೆದ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರು. ಈ ಬಾರಿಯೂ ನಮ್ಮ ಬೆಂಬಲಿತರೇ ಗೆಲ್ಲಲಿದ್ದು, ಎಪಿಎಂಸಿ ಅಧಿಕಾರವನ್ನು ಮತ್ತೆ ಹಿಡಿಯುತ್ತೇವೆ.
ಬಿ.ಕೆ.ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು