ಬುಧವಾರ, ಜುಲೈ 28, 2021
23 °C
ಪ್ರಕರಣಗಳ ಸಂಖ್ಯೆ 205ಕ್ಕೆ, ಬುಧವಾರ 17 ಮಂದಿಗೆ ಸೋಂಕು ಪತ್ತೆ, ಐದು ಮಂದಿ ಗುಣಮುಖ

ಚಾಮರಾಜನಗರದಲ್ಲಿ ಕೋವಿಡ್‌–19 ಅಜೇಯ ದ್ವಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌–19 ಪ್ರಕರಣಗಳ ಸಂಖ್ಯೆ ದ್ವಿಶತಕ ದಾಟಿದೆ.

ಬುಧವಾರ 17 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 205ಕ್ಕೆ ಏರಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಐವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕು ಮುಕ್ತರಾದವರ ಸಂಖ್ಯೆ 116ಕ್ಕೆ ಏರಿದೆ.

ಸದ್ಯ ಜಿಲ್ಲೆಯಲ್ಲಿ 86 ಸಕ್ರಿಯ ಪ್ರಕರಣಗಳಿವೆ. ಮೂವರು ಮೃತಪಟ್ಟಿದ್ದು, ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೊಳ್ಳೇಗಾಲ ತಾಲ್ಲೂಕಿನಲ್ಲಿ 10, ಚಾಮರಾಜನಗರ ತಾಲ್ಲೂಕಿನಲ್ಲಿ ಐದು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. 17 ಸೋಂಕಿತರಲ್ಲಿ ಎಂಟು ಮಂದಿ ಬೆಂಗಳೂರು ಹಾಗೂ ಮೈಸೂರಿಗೆ ಹೋಗಿ ಬಂದವವರು. ಒಬ್ಬರು ರಾಜಸ್ಥಾನದಿಂದ ಬಂದಿದ್ದಾರೆ. ನಾಲ್ಕು ಮಂದಿ ಸೋಂಕಿತರ ಸಂಪರ್ಕಿತರು. ಉಳಿದವರ ಸೋಂಕಿನ ಮೂಲ ಗೊತ್ತಾಗಿಲ್ಲ. 

ಕೊಳ್ಳೇಗಾಲ ತಾಲ್ಲೂಕು: ಬಂಡಳ್ಳಿಯ 44 ವರ್ಷ ಪುರುಷ, ಪಾಳ್ಯದ 16 ವರ್ಷದ ಬಾಲಕಿ, ಇಕ್ಕಡಹಳ್ಳಿಯ 16 ವರ್ಷದ ಬಾಲಕ, ಹರಳೆಯ 35 ವರ್ಷದ ಯುವಕ (ನಾಲ್ವರೂ ಬೆಂಗಳೂರಿನಿಂದ ಬಂದವರು) ಹರಳೆಯ 45 ವರ್ಷದ ಪುರುಷ (ಮೈಸೂರಿನಿಂದ ಬಂದವರು), ಕೊಳ್ಳೇಗಾಲದ 35 ವರ್ಷದ ಮಹಿಳೆ (ರಾಜಸ್ಥಾನದಿಂದ ಬಂದವರು), ಹರಳೆಯ 32 ವರ್ಷದ ಮಹಿಳೆ, 12 ವರ್ಷದ ಬಾಲಕ ಮತ್ತು 65 ವರ್ಷದ ಮಹಿಳೆ (ಮೂವರೂ ಜಿಲ್ಲೆಯ ರೋಗಿ ಸಂಖ್ಯೆ 205ರ ಸಂಪರ್ಕಿತರು), ಮಲ್ಲಹಳ್ಳಿ ಮಾಳದ 45 ವರ್ಷದ ಮಹಿಳೆ (ಮೂಲ ಗೊತ್ತಾಗಿಲ್ಲ).

ಚಾಮರಾಜನಗರ ತಾಲ್ಲೂಕು: ಚಾಮರಾಜನಗರ 58 ವರ್ಷದ ಪುರುಷ, ನಾಗವಳ್ಳಿಯ 45 ವರ್ಷದ ಪುರುಷ (ಮೂಲ ಗೊತ್ತಾಗಿಲ್ಲ), ಬಾಗಳಿಯ 45 ವರ್ಷದ ಪುರುಷ, ವಿ.ಸಿ.ಹೊಸೂರಿನ 29 ವರ್ಷದ ಯುವಕ, ಅಂಕುಶರಾಯನಪುರದ 25 ವರ್ಷದ ಮಹಿಳೆ (ಮೂವರೂ ಬೆಂಗಳೂರಿನಿಂದ ಬಂದವರು),  

ಗುಂಡ್ಲುಪೇಟೆ ತಾಲ್ಲೂಕು: ಜಾಕೀರ್‌ ಹುಸೇನ್‌ ನಗರದ 65 ವರ್ಷದ ಮಹಿಳೆ (ಸೋಂಕಿನ ಮೂಲ ಗೊತ್ತಾಗಿಲ್ಲ), ಗುಂಡ್ಲುಪೇಟೆಯ 45 ವರ್ಷದ ಪುರುಷ (ರೋಗಿ ಸಂಖ್ಯೆ 28914ರ ಸಂಪರ್ಕಿತ).

70 ವರ್ಷದ ವೃದ್ಧರೊಬ್ಬರು ಸೇರಿದಂತೆ ಐವರು ಸೋಂಕು ಮುಕ್ತರಾಗಿ ಬುಧವಾರ ಮನೆಗೆ ತೆರಳಿದ್ದು, ಎಲ್ಲರೂ ಗುಂಡ್ಲುಪೇಟೆಯರೇ.

ದಾಖಲೆಯ ಪರೀಕ್ಷೆ: ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ, ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆ 5 ಗಂಟೆಯವರೆಗೆ ಕೋವಿಡ್‌–ಪ್ರಯೋಗಾಲಯದಲ್ಲಿ 1,208 ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 1,190 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಒಂದೇ ದಿನದ ಅವಧಿಯಲ್ಲಿ ಇಷ್ಟು ಪ್ರಮಾಣದಲ್ಲಿ ಪರೀಕ್ಷೆ ನಡೆಯುತ್ತಿರುವುದು ಇದೇ ಮೊದಲು. 

ಕುಂಭೇಶ್ವರ ಕಾಲೊನಿಯಲ್ಲಿ ವ್ಯಕ್ತಿ ಸಾವು: ಕೋವಿಡ್‌ ಕಾರಣ ಅಲ್ಲ

‌ಈ ಮಧ್ಯೆ, ಚಾಮರಾಜನಗರ ತಾಲ್ಲೂಕಿನ ಕುಂಭೇಶ್ವರ ಕಾಲೊನಿಯಲ್ಲಿ ಮಂ‌ಗಳವಾರ ರಾತ್ರಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ, ಕಾಲೊನಿ ನಿವಾಸಿ ಶಂಕರ್‌ (38) ಮೃತಪಟ್ಟವರು. ಇವರಲ್ಲೂ ಸೋಂಕು ಕಂಡು ಬಂದಿದೆ ಎಂಬ ವದಂತಿ ಬುಧವಾರ ಬೆಳಿಗ್ಗೆ ಹರಡಿತ್ತು. 

ಜ್ವರಕ್ಕಾಗಿ ಚಿಕಿತ್ಸೆ ಪಡೆಯಲು ಅವರು ಜಿಲ್ಲಾಸ್ಪತ್ರೆಗೆ ಬಂದಿದ್ದಾಗ, ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಬರುವವರೆಗೆ ಮನೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಎರಡು ದಿನಗಳಿಂದ ಅವರು ಮನೆಯಲ್ಲೇ ಇದ್ದರು. ಅನಾರೋಗ್ಯ ತೀವ್ರಗೊಂಡು ಮಂಗಳವಾರ ರಾತ್ರಿ ಮೃತಪಟ್ಟರು. 

ಮಧ್ಯಾಹ್ನದ ಹೊತ್ತಿಗೆ ಅವರ ಗಂಟಲು ದ್ರವದ ಮಾದರಿಯ ವರದಿ ಬಂತು. ಅದು ನೆಗೆಟಿವ್‌ ಆಗಿದ್ದರಿಂದ ಕೋವಿಡ್‌ನಿಂದಾಗಿ ಅವರು ಮೃತಪಟ್ಟಿಲ್ಲ ಎಂದು ಸ್ಪಷ್ಟವಾಯಿತು. 

ಶಂಕರ್‌ ಅವರು ಜ್ವರದಿಂದ ಬಳಲುತ್ತಿದ್ದುದು ನಿಜ. ಅವರಿಗೆ ಕುಡಿಯುವ ಚಟ ಇತ್ತು. ಅವರು ಕೋವಿಡ್–19ಗೆ ತುತ್ತಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು