ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ‘ಸರಳ ದಸರಾ’ಗೆ ಸಾಂಪ್ರದಾಯಿಕ ಚಾಲನೆ

Last Updated 17 ಅಕ್ಟೋಬರ್ 2020, 9:09 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಹಾವಳಿಯ ನಡುವೆಯೇ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರಳ ದಸರಾವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ ಅವರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೀಪ ಬೆಳಗಲಾಯಿತು. ದೇವಾಲಯದ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು.

ನಂತರ ನಂದಿ ಧ್ವಜಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಸರಳ ದಸರಾಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಗೊರವರ ಕಲಾವಿದರು ನೃತ್ಯ ಪ್ರದರ್ಶನ ನೀಡಿದರೆ, ಮಂಗಳವಾದ್ಯಗಳ ಹಿಮ್ಮೇಳದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ದೇವಾಲಯದ ವೇದಿಕೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿ, ‘ದಸರಾ ನಮ್ಮ ಹೆಮ್ಮೆಯ ಹಬ್ಬ. ಮೈಸೂರಿಗೆ ಹೊಂದಿಕೊಂಡಂತೆ ಇರುವ ನಮ್ಮ ಜಿಲ್ಲೆಗೂ ದಸರಾಗೂ ಅವಿನಾಭವ ನಂಟಿದೆ. ಮೈಸೂರಿನ ಮಹಾರಾಜರು ಜನಿಸಿದ ಊರು ಇದು. ಪ್ರತಿ ವರ್ಷ ಸಡಗರ ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಿಸುತ್ತಿದ್ದೆವು’ ಎಂದರು.

‘ಆದರೆ, ಈ ವರ್ಷ ಕೋವಿಡ್‌ ಕಾರಣದಿಂದ ಸಡಗರ ಮಾಯವಾಗಿದೆ. ಸರಳವಾಗಿ ಆಚರಿಸುತ್ತಿರುವುದರಿಂದ ಬೇಸರವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ’ ಎಂದು ಅವರು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2013ರಲ್ಲಿ ಜಿಲ್ಲೆಯಲ್ಲೂ ದಸರಾ ಆಚರಿಸಲು ತೀರ್ಮಾನಿಸಿತ್ತು. ಒಂದು ಕೋಟಿ ಅನುದಾನವನ್ನೂ ನೀಡಿತ್ತು. ಅದ್ಧೂರಿಯಾಗಿ ನಡೆಸಲಾಗುತ್ತಿತ್ತು’ ಎಂದರು.

‘ಆದರೆ, ಈ ವರ್ಷ ದೇಶ, ರಾಜ್ಯ ಜಿಲ್ಲೆಯನ್ನು ಕೋವಿಡ್‌–19 ಮಹಾಮಾರಿ ಕಾಡುತ್ತಿದೆ. ಹಾಗಾಗಿ ಕಾರ್ಯಕ್ರಮಗಳನ್ನು ಎಚ್ಚರಿಕೆಯಿಂದ ನಡೆಸಬೇಕಾದ ಅಗತ್ಯವಿದೆ’ ಎಂದರು.

ಕೋವಿಡ್‌ ಕಾರಣದಿಂದ ಈ ವರ್ಷ ದಸರಾ ಆಚರಣೆ ಬೇಡ ಎಂದು ಹೇಳಿದ್ದೆವು. ಹಾಗಿದ್ದರೂ, ಸಂಪ್ರದಾಯವನ್ನು ಬಿಡಬಾರದು ಎಂಬ ಕಾರಣಕ್ಕೆ ಸರ್ಕಾರ ಸರಳವಾಗಿ ಆಚರಿಸಲು ತೀರ್ಮಾನಿಸಿತ್ತು. ಮುಖ್ಯಮಂತ್ರಿ ಅವರು ₹36 ಲಕ್ಷ ಅನುದಾನ ಬಿಡುಗಡೆ ಮಾಡಿರುವುದು ಸಂತಸದ ವಿಚಾರ’ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವೀಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಇದ್ದರು.

ನಾಲ್ಕು ದಿನಗಳ ಕಾಲ ದಸರಾ ಆಚರಣೆ ನಡೆಯಲಿದ್ದು, ಪ್ರತಿ ದಿನ ಸಂಜೆ 7ರಿಂದ 8 ಗಂಟೆವರೆಗೆ ಒಂದು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT