ಭಾನುವಾರ, ಸೆಪ್ಟೆಂಬರ್ 20, 2020
21 °C
ಎಂಜಿನಿಯರಿಂಗ್‌ ಕಾಲೇಜಿನ ಕೋವಿಡ್‌ ಕೇರ್‌ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ

ಅವ್ಯವಸ್ಥೆ ದೂರು; ಅಧಿಕಾರಿಗಳಿಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಗುಣಮಟ್ಟದ ಆಹಾರವನ್ನು ಸಮಯಕ್ಕೆ ಸರಿಯಾಗಿ ಪೂರೈಸಲಾಗುತ್ತಿಲ್ಲ, ಇತರ ವ್ಯವಸ್ಥೆಗಳು ಸರಿ ಇಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಗುರುವಾರ ಅಧಿಕಾರಿಗಳೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ದೂರುಗಳು ಕೇಳಿ ಬಂದಿರುವ ಸಂಬಂಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಅವರು, ಸೋಂಕಿತರಿಗೆ ಮಾಡಲಾಗುತ್ತಿರುವ ವ್ಯವಸ್ಥೆಗಳಲ್ಲಿ ಯಾವುದೇ ಲೋಪ ಆಗಬಾರದು ಎಂದು ತಾಕೀತು ಮಾಡಿದ್ದಾರೆ. ದೂರುಗಳು ಬಂದರೆ, ತಕ್ಷಣ ಪರಿಹರಿಸಬೇಕು ಎಂದೂ ಅವರು ಸೂಚಿಸಿದ್ದಾರೆ. 

ಎಂಜಿನಿಯರಿಂಗ್‌ ಕಾಲೇಜಿನಲ್ಲಿ, ಮೂರು ಹಂತಗಳಲ್ಲಿ ಒಟ್ಟು 450 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರ ಸ್ಥಾಪಿಸಲಾಗಿದೆ. 175ಕ್ಕೂ ಹೆಚ್ಚು ಮಂದಿ ಸೋಂಕಿತರು ಇಲ್ಲಿದ್ದಾರೆ. ನಾಲ್ಕೈದು ದಿನಗಳಿಂದ ಅಲ್ಲಿನ ಅವ್ಯವಸ್ಥೆ ಬಗ್ಗೆ ಸೋಂಕಿತರು, ಅಲ್ಲಿನ ಸಿಬ್ಬಂದಿ, ಅಧಿಕಾರಿಗಳಿಗೆ ದೂರಿದ್ದರು. ಮಾಧ್ಯಮ ಪ್ರತಿನಿಧಿಗಳಿಗೂ ಕರೆ ಮಾಡಿ ಅಲವತ್ತುಕೊಂಡಿದ್ದರು. ‌

‘ಗುಣಮಟ್ಟದ ಆಹಾರ ನೀಡಲಾಗುತ್ತಿಲ್ಲ, ಆಹಾರ ವಸ್ತುಗಳನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿಕೊಡಲಾಗುತ್ತಿದೆ’ ಎಂದು ಸಂತ್ರಸ್ತರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ‘ಕೋವಿಡ್‌ ಕೇಂದ್ರದ ಆಹಾರಕ್ಕೆ ಆಕ್ಷೇಪ’ ಎಂಬ ತಲೆಬರಹದ ಅಡಿ ‘ಪ್ರಜಾವಾಣಿ’ಯ ಆಗಸ್ಟ್‌ 2ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. 

ದೂರುಗಳೇನು?: ಆಹಾರದ ಗುಣಮಟ್ಟ ಸರಿಇಲ್ಲ. ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಕೊಡಲಾಗುತ್ತಿದೆ. 150 ಜನರಿಗೆ ಎರಡೇ ಶೌಚಾಲಯಗಳಿವೆ, ಸ್ನಾನದ ಕೊಠಡಿಯಲ್ಲಿ ನೀರು ಕಟ್ಟಿಕೊಂಡು ಇದೆ. ಬಿಸಿನೀರು ಸೌಲಭ್ಯ ಇಲ್ಲ. ವೈದ್ಯರು, ನರ್ಸ್‌ಗಳು ಯಾರೂ ಇಲ್ಲ, ಸರಿಯಾಗಿ ಮಾತ್ರೆಗಳನ್ನೂ ಕೊಡುತ್ತಿಲ್ಲ ಎಂದು ಸೋಂಕಿತರು ದೂರಿದ್ದರು. ಎರಡು ದಿನಗಳ ಹಿಂದೆ ಅಲ್ಲಿನ ಸಿಬ್ಬಂದಿಯೊಂದಿಗೆ ವಾಗ್ವಾದವನ್ನೂ ನಡೆಸಿದ್ದರು. 

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಸೋಂಕಿತರಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಎಂಜಿನಿಯರಿಂಗ್‌ ಕಾಲೇಜಿನ ಕೋವಿಡ್‌ ಕೇಂದ್ರದಲ್ಲಿ 175ಕ್ಕಿಂತ ಹೆಚ್ಚು ಜನರು ಇದ್ದಾರೆ. ಹಾಗಾಗಿ, ಸಣ್ಣ ಪುಟ್ಟ ಲೋಪಗಳಿರಬಹುದು. ಅದನ್ನು ಪರಿಹರಿಸಲಾಗುವುದು. ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದೇನೆ’ ಎಂದರು. 

ಸಹಕಾರ ನೀಡಬೇಕು: ‘ಜಿಲ್ಲಾಡಳಿತ ಎಲ್ಲ ಎಚ್ಚರಿಕೆ ತೆಗೆದುಕೊಂಡು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಕೇಂದ್ರದಲ್ಲಿರುವ ಜನರಿಂದಲೂ ಸಹಕಾರ ಸಿಗಬೇಕು. ಅನಗತ್ಯವಾಗಿ ನೀರು ಬಳಕೆ ಮಾಡಬಾರದು. ಬಳಸಿದ ನಂತರ ಗೀಸರ್‌ ಅನ್ನು ಆಫ್‌ ಮಾಡಬೇಕು. ಸ್ವಚ್ಛತೆ ಕಾಪಾಡುವಲ್ಲಿ ಅವರ ಪಾತ್ರವೂ ಇದೆ. ದಿನಕ್ಕೆ ಎರಡು ಪಾಳಿಯಲ್ಲಿ ಶೌಚಾಲಯ, ಸ್ನಾಹಗೃಹಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಚಿಕಿತ್ಸೆ ಪಡೆಯುವವರು ಕೂಡ ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸಬೇಕು’ ಎಂದು ಅವರು ಹೇಳಿದರು. 

‘ಸರ್ಕಾರದ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಲು ಆದ್ಯತೆ ನೀಡಲಾಗುತ್ತಿದೆ. ಕೆಲವರು ನಿಗದಿಗಿಂತ ಹೆಚ್ಚು ಆಹಾರ ಕೇಳಿದಾಗ, ಪೂರೈಸಲು ಕಷ್ಟವಾಗುತ್ತದೆ. ಒಬ್ಬರಿಗೆ ನೀಡಿದರೆ ಉಳಿದವರಿಗೂ ಕೊಡಬೇಕು. ವಾಸ್ತವವಾಗಿ ನಾವು ಕೊಡುತ್ತಿರುವ ಆಹಾರ ಬಹುತೇಕರಿಗೆ ಹೆಚ್ಚಾಗುತ್ತಿದೆ. ಹಲವರು ನನಗೆ ಇದನ್ನು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಆಹಾರ ನೀಡಲು ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು. 

ಕಾಡುತ್ತಿದೆಯೇ ಸಿಬ್ಬಂದಿ ಕೊರತೆ?
ಕೋವಿಡ್‌ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆಯಲ್ಲಿ ಸಿಬ್ಬಂದಿಯ ಕೊರತೆ ಕಾಡುತ್ತಿದೆಯೇ ಎಂಬ ಪ್ರಶ್ನೆಯೂ ಈಗ ಎದ್ದಿದೆ. ನರ್ಸ್‌ಗಳನ್ನು, ವೈದ್ಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಜಿಲ್ಲಾಡಳಿದ ಮುಂದಾಗಿದ್ದರೂ, ಕೋವಿಡ್‌–19 ಕರ್ತವ್ಯಕ್ಕೆ ಬರಲು ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಕೇರ್‌ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಹಿಂಜರಿಯುತ್ತಿದ್ದು, ಇದು ಕೂಡ ಜಿಲ್ಲಾಡಳಿತ‌ಕ್ಕೆ ತಲೆ ನೋವಾಗಿ ಪರಿಣಮಿಸಿದೆ. 

ಆದರೆ, ಸಿಬ್ಬಂದಿ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

‘ಕೋವಿಡ್‌ ಕೇಂದ್ರಕ್ಕೆ ವೈದ್ಯರೊಬ್ಬರನ್ನು ನೋಡೆಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಒಬ್ಬರು ಉಸ್ತುವಾರಿಯನ್ನೂ ನಿಯೋಜಿಸಲಾಗಿದೆ. ಆಹಾರ ವ್ಯವಸ್ಥೆಗೆ ಆಹಾರ ಇಲಾಖೆಯ ಉಪನಿರ್ದೇಶಕರನ್ನು ನಿಯೋಜಿಸಲಾಗಿದೆ. ಎಲ್ಲ ಕೆಲಸಕ್ಕೂ ತಂಡಗಳನ್ನು ರಚಿಸಲಾಗಿದೆ. ರೂಪಿಸಲಾಗಿರುವ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಕೆಳ ಹಂತದಲ್ಲಿ ಕೆಲವು ಬಾರಿ ಲೋಪ ಆಗಬಹುದು’ ಎಂದು ಅವರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು