ಭಾನುವಾರ, ನವೆಂಬರ್ 29, 2020
24 °C

ಗುಂಡ್ಲುಪೇಟೆ ಕೋವಿಡ್‌ ಆಸ್ಪತ್ರೆಗೆ ಡಿಸಿ ಭೇಟಿ, ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್‌ಗೆ (ಡಿಸಿಹೆಚ್‌ಸಿ) ಹಾಗೂ ತಾಯಿ ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಗುಂಡ್ಲುಪೇಟೆಯಲ್ಲಿ ಇತ್ತೀಚೆಗೆ ಆರಂಭಿಸಲಾಗಿರುವ ಕೋವಿಡ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸಾ ಸೌಲಭ್ಯಗಳನ್ನು ಜಿಲ್ಲಾಧಿಕಾರಿ ಅವರು ಪರಿಶೀಲಿಸಿದರು. ಕೋವಿಡ್-19 ದೃಢಪಟ್ಟಿದ್ದರೂ ತೀವ್ರ ರೋಗ ಲಕ್ಷಣಗಳು ಇಲ್ಲದಿರುವವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರ ಸಂಖ್ಯೆ ಹಾಗೂ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರಗಳ ಬಗ್ಗೆ ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿಯಿಂದ ಅವರು ಮಾಹಿತಿ ಪಡೆದರು. 

ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆ ಹೇಗೆ ಮಾಡಲಾಗುತ್ತಿದೆ? ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ವ್ಯವಸ್ಥೆ ಅಗತ್ಯವಿದೆ? ರೋಗಿಗಳ ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ನಡೆದಿದೆಯೇ ಎಂಬ ಬಗ್ಗೆಯೂ ಪ್ರಶ್ನಿಸಿದರು. ಹೋಂ ಐಸೊಲೇಷನ್‌ನಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮೂಲಕ ಹೇಗೆ ನಿಗಾ ವಹಿಸಲಾಗುತ್ತಿದೆ ಎಂಬ ಬಗ್ಗೆಯೂ ಪರಾಮರ್ಶೆ ನಡೆಸಿದರು.

ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರ ಆರೈಕೆಗೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಡಾ.ಎಂ.ಆರ್.ರವಿ ಅವರು, ಆರೋಗ್ಯ ಸುಧಾರಣೆಗೆ ಲಭ್ಯವಿರುವ ಇತರೆ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದರು. ತುರ್ತು ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ವೈದ್ಯಾಧಿಕಾರಿಗಳು ಹಾಗೂ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದರು.

ಬಳಿಕ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿ ಒದಗಿಸಲಾಗಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು. ‘ಆಸ್ಪತ್ರೆಗೆ ಬರುವವರು ಕುಳಿತುಕೊಳ್ಳಲು ಮತ್ತಷ್ಟು ಸ್ಥಳವಕಾಶ ಕಲ್ಪಿಸಬೇಕು. ಹೊರರೋಗಿಗಳಾಗಿ ಬರುವವರಿಗೂ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್, ಡಾ.ರವೀಂದ್ರ ಇತರರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.