ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಜಿಲ್ಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು: ಸೋಮಣ್ಣ

ವೇದಿಕೆಯಲ್ಲಿ ಅಹಿತಕರ ಘಟನೆ– ಕಪ್ಪು ಬಟ್ಟೆ ಪ್ರದರ್ಶನ, ಜಿಲ್ಲಾಡಳತಕ್ಕೆ ಮುಜುಗರ
Last Updated 28 ಸೆಪ್ಟೆಂಬರ್ 2022, 5:46 IST
ಅಕ್ಷರ ಗಾತ್ರ

ಚಾಮರಾಜನಗರ: ‘ಆರ್ಥಿಕವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು ಶೀಘ್ರ ಜಾರಿಗೆ ತರಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದರು.

ಜಿಲ್ಲಾ ದಸರಾ ಮಹೋತ್ಸವದ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಐಎಎಸ್‌, ಐಪಿಎಸ್‌, ಕೆಎಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು. ಶೀಘ್ರದಲ್ಲಿ ಅದು ಉದ್ಘಾಟನೆಗೊಳ್ಳಲಿದೆ’ ಎಂದರು.

‘ದಸರಾ ಐತಿಹಾಸಿಕ ಹಾಗೂ ಪಾರಂಪರಿಕ ಹಬ್ಬವಾಗಿದೆ. ನಮ್ಮ ಪೂರ್ವಜರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ದಸರಾ ಆಚರಣೆ ಅವಶ್ಯ. ಜನರಲ್ಲಿ ನಾವೆಲ್ಲಾ ಒಂದೇ ಎನ್ನುವ ಐಕ್ಯತಾ ಭಾವನೆ ಮೂಡಿಸುವುದೇ ಆಚರಣೆಯ ಉದ್ದೇಶ.ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ದಸರಾ ಆಚರಿಸುತ್ತಿರುವುದು ವಿಶೇಷ. ಎಲ್ಲರೂ ಸೇರಿ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕಾಗಿದೆ’ ಎಂದರು.

‘ಈ ಬಾರಿ ಮಳೆ ಅನಾಹುತದಿಂದ ಸಾಕಷ್ಟು ತೊಂದರೆಯಾಗಿತ್ತು. ಹಾಗಾಗಿ, ದಸರಾ ಆಚರಿಸಬೇಕೇ ಬೇಡವೇ ಎಂದು ಚರ್ಚೆಯಾಗಿತ್ತು. ಆದರೆ, ಇದು ಪಾರಂಪರಿಕ ಹಬ್ಬವಾಗಿರುವುದರಿಂದ ಆಚರಿಸಲೇ ಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು’ ಎಂದರು.

‘ಮಳೆಯಿಂದಾಗಿ ಸಂತ್ರಸ್ತರಾಗಿದ್ದ 3,415 ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಲಾಗಿದೆ. 3,214 ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗಿದೆ. ಮನೆ ಹಾನಿ, ಬೆಳೆಹಾನಿ ಪರಿಹಾರವನ್ನೂ ಶೀಘ್ರ ನೀಡಲಾಗುವುದು’ ಎಂದರು.

‘ಜಿಲ್ಲೆಯ ಮಂತ್ರಿಗಳು, ಜನಪ್ರತಿನಿಧಿಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ಅಧಿಕಾರಿಗಳೂ ಇದರಲ್ಲಿ ಪಾಲುದಾರರಾಬೇಕು. ಆದರೆ, ಜಿಲ್ಲೆಯಲ್ಲಿ ಶೇ 5ರಿಂದ ಶೇ 10ರಷ್ಟು ಅಧಿಕಾರಿಗಳು ಮಾತ್ರ ಇಲ್ಲಿ ವಾಸಿಸುತ್ತಿದ್ದಾರೆ. ಉಳಿದವರೆಲ್ಲ ಮೈಸೂರು, ಬೇರೆ ಕಡೆಗಳಲ್ಲಿ ಇದ್ದಾರೆ. ಹಲವು ಬಾರಿ ನಾನು ಮನವಿ ಮಾಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ’ ಎಂದರು.

ಶಾಸಕ ಎನ್.ಮಹೇಶ್ ಮಾತನಾಡಿ, ‘ಚಾಮರಾಜನಗರ ಮೈಸೂರಿನ ಅವಿಭಾಜ್ಯ ಅಂಗ. ನಾವೆಲ್ಲರೂ ಮೈಸೂರಿನ ಪರಂಪರೆಗೆ ಸೇರಿದವರು. ದಸರಾ ಪಾರಂಪರಿಕ ಹಬ್ಬವನ್ನು ಎಲ್ಲ ತಾಲ್ಲೂಕುಗಳಲ್ಲಿಯೂ ಆಚರಿಸಲಾಗುತ್ತಿದೆ. ಮೈಸೂರಿನ ಅರಸರ ಪರಂಪರೆಯಾಗಿರುವ ನಾಡಹಬ್ಬ ದಸರಾವನ್ನು ಎಲ್ಲರೂ ಗೌರವಿಸಬೇಕು’ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ನಾಡಹಬ್ಬ ದಸರಾವನ್ನು ಜಾನಪದ ಕಲೆಗಳ ನೆಲೆವೀಡು. ಚಾಮರಾಜನಗರ ಜಿಲ್ಲೆಯಲ್ಲಿ ಏಳು ವರ್ಷಗಳಿಂದ ಆಚರಿಸಲಾಗುತ್ತಿದೆ. ಮೈಸೂರು ದಸರಾವನ್ನು ಪ್ರತಿಯೊಬ್ಬರು ನೋಡಲು ಸಾಧ್ಯವಾಗುವಂತೆ ಈ ಭಾಗಕ್ಕೂ ವಿಸ್ತರಿಸಲಾಗಿದೆ’ ಎಂದು ತಿಳಿಸಿದರು.

ಶಾಸಕ ಸಿ.ಎಸ್.ನಿರಂಜನಕುಮಾರ್, ವಿಧಾನ ಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ನಗರಸಭೆ 12ನೇ ವಾರ್ಡ್ ಸದಸ್ಯ ಅಬ್ರಾರ್ ಅಹಮದ್, ಸದಸ್ಯರಾದ ಮಹೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿ.ಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್‌ಪಿ .ಪಿ.ಶಿವಕುಮಾರ್, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್. ಸುಂದರರಾಜು, ಉಪವಿಭಾಗಾಧಿಕಾರಿ ಗೀತಾಹುಡೇದ, ತಹಶೀಲ್ದಾರ್ ಬಸವರಾಜು ಇತರರು ಇದ್ದರು.

ಚಾಮರಾಜೇಶ್ವರನಿಗೆ ವಿಶೇಷ ಪೂಜೆ

ಇದಕ್ಕೂ ಮೊದಲು ಮಂಗಳವಾರ ಬೆಳಿಗ್ಗೆ ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.

ಶಾಸಕ ಸಿ‌.ಪುಟ್ಟರಂಗಶೆಟ್ಟಿ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾಧಿಕಾರಿ‌ ಚಾರುಲತಾ ಸೋಮಲ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ತಹಶೀಲ್ದಾರ್‌ ಬಸವರಾಜು, ನಗರಸಭಾ ಸದಸ್ಯರು ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಲಾಯಿತು.

ಬಳಿಕ, ಚಾಮರಾಜೇಶ್ವರ ಸ್ವಾಮಿಯ ಉತ್ಸವ ‌ಮೂರ್ತಿಯ ಎದುರು ದೀಪ ಬೆಳಗಿದರು. ಆ ಬಳಿಕ ಚಾಮುಂಡೇಶ್ವರಿ, ಕೆಂಪನಂಜಾಂಬ ದೇವಿಗೂ ಪೂಜೆ ಸಲ್ಲಿಸದರು.

ನಂತರ ಶಾಸಕ ಪುಟ್ಟರಂಗಶೆಟ್ಟಿ, ನಗರಸಭೆಯ ಅಧ್ಯಕ್ಷೆ ಆಶಾ ಇತರರು ಜನನ ಮಂಟಪಕ್ಕೆ ತೆರಳಿ ಚಾಮರಾಜ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಅಧಿಕಾರಿಗಳಿಗೆ ತರಾಟೆ

ವೇದಿಕೆ ಸಮಾರಂಭದಲ್ಲಿ ನಾಡಗೀತೆ ಆಗುತ್ತಲೇ ಮಾತನಾಡಿದ ಸಚಿವ ಸೋಮಣ್ಣ ಅವರು, ವೇದಿಕೆಯಲ್ಲಿ ಹಾಗೂ ಮುಂಭಾಗದಲ್ಲಿ ಜನರು ಅಧಿಕಾರಿಗಳು ನಿಂತಿರುವುದನ್ನು ಕಂಡು ಸಿಡಿಗೊಂಡರು.

ದೇವಸ್ಥಾನಕ್ಕೆ ಅಳವಡಿಸಿದ್ದ ವಿದ್ಯುತ್‌ ದೀಪಗಳನ್ನು ಉರಿಸದೇ ಇದ್ದುದಕ್ಕೆ ಹಾಗೂ ವೇದಿಕೆಯಯಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಮಾಡದೇ ಇದ್ದುದಕ್ಕೆ ಸೆಸ್ಕ್‌ ಅಧಿಕಾರಿಗಳು, ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕಾರ್ಯಕ್ರಮದ ನಂತರ ಎಲ್ಲರೂ ನನ್ನನ್ನು ಭೇಟಿಯಾಗಬೇಕು. ಇನ್ನು ಮುಂದೆ ಹೀಗಾಗಬಾರದು. ಅತ್ಯಂತ ವ್ಯವಸ್ಥಿತವಾಗಿ ಸಭೆ ನಡೆಯಬೇಕು’ ಎಂದು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕೂಡ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT