ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ

ಮೂರು ದಿನಗಳ ಪ್ರದರ್ಶನಕ್ಕೆ ಚಾಲನೆ, ಸೆಲ್ಫೀ ಪಾಯಿಂಟ್‌, ಪುನೀತ್ ಪ್ರತಿಕೃತಿ ಆಕರ್ಷಣೆ
Last Updated 28 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಹೂವಿನ ಗೋಪುರ, ಸೇವಂತಿಗೆಯ ಆನೆ, ಮರಿಯಾನೆ, ಪುನೀತ್‌ ರಾಜ್‌ಕುಮಾರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಕೃತಿಗಳು, ಹೂವುಗಳಲ್ಲಿ ಮೂಡಿದ ತ್ರಿವರ್ಣ ಧ್ವಜ ತರಹೇವಾರಿ ತರಕಾರಿಗಳು, ಕೃಷಿ ಉತ್ಪನ್ನಗಳು, ಕೃಷಿ ವಿಧಾನದ ಮಾದರಿಗಳು, ಕಲ್ಲಂಗಡಿ, ವಿವಿಧ ತರಕಾರಿಗಳಲ್ಲಿ ಕೆತ್ತಿರುವ ಗಣ್ಯರ ಮುಖಗಳು, ಪ್ರಾಣಿ ಪಕ್ಷಿಗಳ ಪ್ರತಿಕೃತಿಗಳು, ಕೊನೆಗೊಂದು ಸೆಲ್ಫಿ ಪಾಯಿಂಟ್‌....

ಜಿಲ್ಲಾ ದಸರಾ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ತಕ್ಷಣಕ್ಕೆ ನೋಡುಗರ ಸೆಳೆಯುವ ಅಂಶಗಳಿವು.

ಎರಡು ವರ್ಷಗಳ ಹಿಂದೆ ನಡೆದಿದ್ದ ಫಲಪುಷ್ಪ ಪ್ರದರ್ಶನದಷ್ಟು ವಿಶೇಷಗಳು ಇಲ್ಲದಿದ್ದರೂ, ಜನರನ್ನು ಸೆಳೆಯುವಂತಿದೆ.

ಪ್ರವೇಶ ದ್ವಾರದಲ್ಲೇ ಕೇಸರಿ, ಬಿಳಿ ಹಾಗೂ ಹಸಿರು ಹೂಗಳಲ್ಲಿ ಮಾಡಿದ್ದ ತ್ರಿವರ್ಣ ಧ್ವಜ ವೀಕ್ಷಕರಲ್ಲಿ ದೇಶ ಪ್ರೇಮ ಮೂಡಿಸುತ್ತದೆ. ಪಲಪುಷ್ಬ ಪ್ರದರ್ಶನ ವೀಕ್ಷಿಸಲು ಬಂದಿದ್ದವರು ಧ್ವಜಕ್ಕೆ ಸೆಲ್ಯೂಟ್‌ ಹೊಡೆಯುತ್ತಿದ್ದರು!

ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಗೋಪುರದ ಬೃಹತ್‌ ಪ್ರತಿಕೃತಿ ಜನರನ್ನು ಸ್ವಾಗತಿಸುತ್ತದೆ. ಗೋಪುರದ ಒಳಗಡೆ ಇರುವ ರಂಗನಾಥಸ್ವಾಮಿಯ ಪ್ರತಿಕೃತಿ ಭಯ ಭಕ್ತಿ ಮೂಡಿಸುತ್ತದೆ.ಒಳಗಡೆ ಹೋಗುತ್ತಿದ್ದಂತೆಯೇ ಹೂವುಗಳಿಂದ ಮಾಡಿದ ಆನೆ ಸೇರಿದಂತೆ ವಿವಿಧ ಪ್ರಾಣಿಗಳು, ಸಿರಿಧಾನ್ಯಗಳಿಂದ ಬಿಡಿಸಿದ ರಂಗೋಲಿ ಆಕರ್ಷಿಸುತ್ತದೆ.

ವಿವಿಧ ಕೃಷಿ ವಿಧಾನಗಳನ್ನು ವಿವರಿಸುವ ತಾಕುಗಳ ಮಾದರಿಗಳು ಕೃಷಿಕರಿಗೆ ಮಾಹಿತಿ ಪೂರ್ಣವಾಗಿವೆ. ಜಿಲ್ಲೆಯ ರೈತರು ಬೆಳೆದಿರುವ ವಿವಿಧ ತರಕಾರಿಗಳು, ಹಣ್ಣುಗಳು, ಇತರೆ ಕೃಷಿ ಉತ್ಪನ್ನಗಳು ಆಕರ್ಷಕವಾಗಿವೆ.

ಎಲ್ಲವನ್ನೂ ನೋಡಿ ಹೊರಗಡೆ ಬಂದಾಗ ಮಾವಿನ ಹಣ್ಣಿನ ಹೂವಿನ ಆಕಾರವನ್ನು ಹಿನ್ನೆಲೆಯಲ್ಲಿ ಹೊಂದಿರುವ ಸೆಲ್ಫೀ ಪಾಯಿಂಟ್‌ ಯುವ ಜನರನ್ನು ಸೆಳೆಯುತ್ತದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಉಪವಿಭಾಗಾಧಿಕಾರಿ ಗೀತಾ ಗುಡೇದಾ ಅವರು ಸೆಲ್ಫೀ ತೆಗೆದುಕೊಂಡು ನಗು ಬೀರಿದರು.

ಪ್ರದರ್ಶನ ಮಳಿಗೆಗಳು: ಫಲಪುಷ್ಪ ಪ್ರದರ್ಶನ ನಡೆಯುವ ಸ್ಥಳದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನೂ ತೆರೆಯಲಾಗಿದೆ. ಇಲಾಖೆಗಳ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಇಲ್ಲಿವೆ.

ಕೃಷಿ ಇಲಾಖೆಯು ಸಾವಯವ ಕೃಷಿ ಬೆಳೆಗಳು, ನೀರಿನ ಸಂಗ್ರಹ ಹಾಗೂ ಕೃಷಿ ಹೊಂಡದ ಮಾದರಿಯನ್ನು ಪ್ರದರ್ಶಿಸಿದೆ. ಪಶು ಇಲಾಖೆಯು ದೇಸಿ ತಳಿಯ ಹಸುಗಳನ್ನು ಪ್ರದರ್ಶನಕ್ಕಿಟ್ಟಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯು ತನ್ನ ಮಳಿಗೆಯ ಮೂಲಕ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದೆ. ರೇಷ್ಮೆ ಇಲಾಖೆಯು ಹಿಪ್ಪುನೇರಳೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿದೆ. ತೋಟಗಾರಿಕಾ ಇಲಾಖೆಯು ಎರೆಹುಳು ಘಟಕ, ಜೇನು ಸಾಕಾಣಿಕೆಯ ವಿವರಗಳನ್ನು ಪ್ರಾಯೋಗಿಕವಾಗಿ ತೋರಿಸಲು ವ್ಯವಸ್ಥೆ ಮಾಡಿದೆ. ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆಯು ಮಳಿಗೆಗಳನ್ನು ತೆರೆದಿವೆ.

ಹಲವು ಸ್ವಸಹಾಯ ಸಂಘಗಳು ಮಳಿಗೆಗಳನ್ನು ತೆರೆದಿದ್ದು, ತಮ್ಮ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿವೆ.ಅಮೃತ ಭೂಮಿಯ ನೈಸರ್ಗಿಕ ಕೃಷಿ ಮಳಿಗೆ, ಕೈಮಗ್ಗ, ಜವಳಿ ಉತ್ಪನ್ನಗಳ ಮಳಿಗೆಗೆಗಳುಜನರನ್ನು ಆಕರ್ಷಿಸುತ್ತಿವೆ.

ಮೊದಲ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ ಜನರ ಸಂಖ್ಯೆ ಕಡಿಮೆ ಇತ್ತು. ಇನ್ನೆರಡು ದಿನಗಳಲ್ಲಿ ಹೆಚ್ಚು ಜನರು ಭೇಟಿ ನಿಡುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

ಹಣ್ಣು, ತರಕಾರಿಗಳಲ್ಲಿ ವೈವಿಧ್ಯ ಚಿತ್ತಾರ

ಕಲ್ಲಂಗಡಿ, ಕುಂಬಳಕಾಯಿ ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಕೆತ್ತಿರುವ ಗಣ್ಯರ ಚಿತ್ರಗಳು, ಪ್ರಾಣಿ ಪಕ್ಷಿಗಳ ಕಲಾಕೃತಿಗಳು ಫಲ ಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆ.ಹರೀಶ್‌ ಬ್ರಹ್ಮಾವರ ಎಂಬ ಕಲಾವಿದ ಇದರ ರೂವಾರಿ.

ಕಲ್ಲಂಗಡಿ ಹಣ್ಣಿನಲ್ಲಿ ರಾಷ್ಟ್ರನಾಯಕರು, ಚಿತ್ರ ತಾರೆಯರು, ಜ್ಞಾನಪೀಠ ಪ್ರಶಸ್ತಿ ಪುರಸ್ಕತರು, ಕ್ರೀಡಾಪಟುಗಳ ಮುಖವನ್ನು ಸುಂದರವಾಗಿ ಕೆತ್ತಲಾಗಿದೆ.ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಕುವೆಂಪು, ಡಾ.ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಶಂಕರ್‌ನಾಗ್‌ ಸೇರಿದಂತೆ ಹಲವರ ಚಿತ್ರ ಕಲ್ಲಂಗಡಿ ಹಣ್ಣಿನಲ್ಲಿ ಮೂಡಿದೆ.

ಕುಂಬಳಕಾಯಿ, ಸೋರೆಕಾಯಿ, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ನವಿಲು, ಮೊಸಳೆ ಮೀನು, ಹಾಯಿ ದೋಣಿ, ಪೆಂಗ್ವಿನ್‌ ಶಿವಲಿಂಗ, ಗಣೇಶ ಸೇರಿದಂತೆ ವಿವಿಧ ಆಕರ್ಷಕ ಕಲಾಕೃತಿಗಳನ್ನು ರಚಿಸಲಾಗಿದೆ. ಯುವಕ ಯುವತಿಯರು, ಮಹಿಳೆಯರನ್ನು ಈ ಕಲಾಕೃತಿಗಳು ಆಕರ್ಷಿಸಿದವು.

ಕರಾವಳಿ ಭಾಗದ ಬ್ರಹ್ಮಾವರದವರಾದ ಹರೀಶ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಕ್ಯಾಟರಿಂಗ್‌ ಮಾಡುತ್ತಿದ್ದ ಅವರು ತರಕಾರಿ ಕತ್ತರಿಸುವಾಗ ವಿವಿಧ ಬೊಂಬೆಗಳ ಚಿತ್ರಗಳನ್ನು ಬಿಡಿಸುವುದನ್ನು ಅಭ್ಯಾಸ ಮಾಡಿದ್ದರು. ಈಗ ಅದೇ ಕಸುಬಾಗಿ ವಿವಿಧ ರಾಜ್ಯಗಳಲ್ಲಿ ನಡೆಯುವ ಫಲ ಪುಷ್ಬ ಪ್ರದರ್ಶನದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ.

‘ಈ ಕಲೆಯನ್ನು ಯಾರ ನೆರವಿಲ್ಲದೆ ಕಲಿತಿರುವೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಣ್ಣು ಹಾಗೂ ತರಕಾರಿಗಳಲ್ಲಿ ಚಿತ್ರ ಬಿಡಿಸುವ ಶಿಬಿರ ಏರ್ಪಡಿಸಿ, ತರಬೇತಿ ನೀಡುತ್ತಿದ್ದೇನೆ’ ಎಂದು ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT