ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೊರವರ ಕುಣಿತದಲ್ಲಿ ಹೊಸ ಹೆಸರು ಶಂಕರ್‌

ದಿ.ಪುಟ್ಟಮಲ್ಲೇಗೌಡರ ಗರಡಿಯಲ್ಲಿ ಬೆಳೆದ ಕಲಾವಿದ, ವಿವಿಧೆಡೆ ಪ್ರದರ್ಶನ
ಮಹದೇವ್‌ ಹೆಗ್ಗವಾಡಿಪುರ
Published 27 ಡಿಸೆಂಬರ್ 2023, 7:51 IST
Last Updated 27 ಡಿಸೆಂಬರ್ 2023, 7:51 IST
ಅಕ್ಷರ ಗಾತ್ರ

ಸಂತೇಮರಹಳ್ಳಿ/ಚಾಮರಾಜನಗರ: ಗೊರವರ ಕುಣಿತ ಜಿಲ್ಲೆಯಲ್ಲೇ ಹುಟ್ಟಿ ಬೆಳೆದ ವಿಶಿಷ್ಟ ಕಲೆ. 

ಹಲವಾರು ಕಲಾವಿದರು ಈ ಕುಣಿತದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಈಗ ಇದೇ ಸಾಲಿಗೆ ಚಾಮರಾಜನಗರದ ರಾಮಸಮುದ್ರದ ಶಂಕರ್‌ ಕೂಡ ಸೇರಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಲ್ಲೂ ಪ್ರದರ್ಶನ ನೀಡಿ, ಗೊರವರ ಕುಣಿತವನ್ನು ದೇಶದೆಲ್ಲೆಡೆ ಪಸರಿಸುತ್ತಿದ್ದಾರೆ. 

ಗೊರವರ ಕುಣಿತದಲ್ಲಿ ಗುರುತಿಸಿಕೊಂಡಿರುವ ಕುಟುಂಬದಿಂದ ಬಂದವರು ಶಂಕರ್‌. ಖ್ಯಾತ‌ ಗೊರವರ ಕಲಾವಿದ ದಿವಂಗತ ಪುಟ್ಟಮಲ್ಲೇಗೌಡರು ಇವರ ದೊಡ್ಡಪ್ಪ (ತಂದೆಯ ಅಣ್ಣ). ಗುರುಗಳು ಕೂಡ ಹೌದು.   

ದೊಡ್ಡಪ್ಪನ ಮಾರ್ಗದರ್ಶನದಲ್ಲೇ ಗೊರವರ ಕುಣಿತದಲ್ಲಿ ಪರಿಣತಿ ಸಾಧಿಸಿರುವ ಶಂಕರ್‌ ಈಗ ದೊಡ್ಡ ಕಲಾವಿದೆ. ಕಲೆಯಲ್ಲೇ ಪೂರ್ಣವಾಗಿ ತೊಡಗಿಕೊಂಡಿದ್ದಾರೆ. 

ಜಿಲ್ಲೆಯ ಗೊರವರ ಕುಣಿತ ಕಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 12 ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 12 ಜನರ ತಂಡ ಕಟ್ಟಿ 3 ತಿಂಗಳ ತರಬೇತಿ ನೀಡಿತ್ತು. ಅದರಲ್ಲಿ ಶಂಕರ್ ಕೂಡ ಒಬ್ಬರು. ಪುಟ್ಟಮಲ್ಲೇಗೌಡರೇ ತರಬೇತಿ ನೀಡಿದ್ದರು. ಶಿಸ್ತು, ಬದ್ಧತೆಯಿಂದ ಕಲೆಯನ್ನು ಕಲಿತಿರುವ ಶಂಕರ್‌ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕಾಯಂ ಆಹ್ವಾನ ಇರುತ್ತದೆ. 

ವಿವಿಧೆಡೆ ಪ್ರದರ್ಶನ: ಪ್ರತಿವರ್ಷ ನಡೆಯುವ ದಸರಾ ಕಾರ್ಯಕ್ರಮ ಸೇರಿದಂತೆ, ಕನ್ನಡ ರಾಜ್ಯೋತ್ಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಬಸವೇಶ್ವರ ಜಯಂತಿ ವಾಲ್ಮೀಕಿ, ಭಗೀರಥ  ಜಯಂತಿಗಳು, ಖಾಸಗಿಯಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮೈಸೂರಿನಲ್ಲಿ ನಡೆಯುವ ದಸರಾ ಜಂಬೂ ಸವಾರಿಯಲ್ಲೂ ಪ್ರತಿವರ್ಷ ತಪ್ಪದೇ ಹೆಜ್ಜೆಹಾಕುತ್ತಿದ್ದಾರೆ. ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಬೆಟ್ಟ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳಲ್ಲಿ ನಡೆಯುವ ದೇವರ ಉತ್ಸವಗಳಲ್ಲೂ ಶಂಕರ್‌ ನೃತ್ಯ ಮಾಡುತ್ತಾರೆ.

ಬೆಂಗಳೂರು, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯುವ ಸ್ಥಳೀಯ ಉತ್ಸವಗಳು, ರಾಜ್ಯೋತ್ಸವಗಳು, ಮೆರವಣಿಗೆಗಳು, ರಾಜಕೀಯ ಕಾರ್ಯಕ್ರಮಗಳು, ಗಣೇಶ ಉತ್ಸವಗಳು ಸೇರಿದಂತೆ ಅಲ್ಲಿನ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ಗೊರವರ ಕುಣಿತವನ್ನು ಜನಪ್ರಿಯಗೊಳಿಸಿದ್ದಾರೆ. 

‌ದೆಹಲಿ, ನಾಗಪುರ, ಮುಂಬೈ, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌ ಸೇರಿದಂತೆ ಹೊರ ರಾಜ್ಯಗಳಲ್ಲೂ ಪ್ರದರ್ಶನ ನೀಡಿ, ಅಲ್ಲಿನ ಜನರಿಗೂ ಅಪರೂಪದ ಕಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 

ಚಲನಚಿತ್ರಗಳಾದ ಜನುಮದ ಜೋಡಿ, ದಾಯಾದಿ, ಪ್ರೇಮಾಚಾರಿ, ಬಾವ ಬಾಮೈದ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳು ಅವರನ್ನು ಅಭಿನಂದಿಸುವ ಮೂಲಕ ಕಲೆಗೆ ಪ್ರೋತ್ಸಾಹ ನೀಡಿವೆ. 

ಶಂಕರ್‌
ಶಂಕರ್‌

ಕಲಾರಾಧನೆ ಕುಟುಂಬದ ಕಲಾವಿದ  ಹೊರ ಜಿಲ್ಲೆ, ರಾಜ್ಯಗಳಲ್ಲೂ ಪ್ರದರ್ಶನ ಹಲವು ಚಲನಚಿತ್ರಗಳಲ್ಲೂ ನಟನೆ

‘ಸರ್ಕಾರದ ಪ್ರೋತ್ಸಾಹ ಬೇಕು’ ‘ಜಿಲ್ಲೆಯ ವಿಶಿಷ್ಟ ಕಲೆ ಗೊರವರ ಕುಣಿತವನ್ನು ಉಳಿಸಿ ಬೆಳೆಸಲು ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು’ ಎಂದು ಹೇಳುತ್ತಾರೆ ಶಂಕರ್‌.  ‘ನಮ್ಮ ಜಿಲ್ಲೆಯಲ್ಲಿ ಗೊರವರ ಕುಣಿತ ತುಂಬಾ ಹೆಸರು ಗಳಿಸಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂಬುದು ಅವರ ಮಾತು.  ‘ಈಗ ಹುಡುಗರು ಆಸಕ್ತಿಯಿಂದ ಕಲಿಯಲು ಬರುತ್ತಿದ್ದಾರೆ. ಜತೆಗೆ ಸರ್ಕಾರವು ಈ ಕಲೆಯ ಉಳಿವಿಗಾಗಿ ಪ್ರೋತ್ಸಾಹ ನೀಡಬೇಕು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT