ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಎಂದು ಕಳೆದೀತು ಆತಂಕದ ಕರಿಛಾಯೆ?

ಇಂಡಿಗನತ್ತ, ಮೆಂದರೆ ಗ್ರಾಮಗಳು ಮೇಲ್ನೋಟಕ್ಕೆ ಸಹಜಸ್ಥಿತಿಯತ್ತ
ಜಿ.ಪ್ರದೀಪ್‌ಕುಮಾರ್‌
Published 21 ಮೇ 2024, 5:38 IST
Last Updated 21 ಮೇ 2024, 5:38 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಲೋಕಸಭಾ ಚುನಾವಣೆಯ ಮತದಾನದ ದಿನ (ಏ.26) ಘರ್ಷಣೆ ಸಂಭವಿಸಿದ್ದ ಇಂಡಿಗನತ್ತ ಗ್ರಾಮದಲ್ಲಿ ಮೇಲ್ನೋಟಕ್ಕೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವಂತೆ ಕಂಡರೂ, ಇಂಡಿಗನತ್ತ ಹಾಗೂ ಮೆಂದರೆ ಗ್ರಾಮಸ್ಥರನ್ನು ಆತಂಕದ ಕರಿಛಾಯೆ ಆವರಿಸಿದೆ. 

ಘಟನೆ ನಡೆಯುವವರೆಗೂ ಅನ್ಯೋನ್ಯವಾಗಿ ಬಾಳ್ವೆ ಮಾಡುತ್ತಿದ್ದ ಎರಡೂ ಗ್ರಾಮದವರ ನಡುವೆ, ಘಟನೆಯ ನಂತರ ಉಂಟಾಗಿರುವ ಬಿರುಕು ಇನ್ನೂ ಕೂಡಿಲ್ಲ. ಜಿಲ್ಲಾಡಳಿತದ ಅಧಿಕಾರಿಗಳು, ಮುಖಂಡರು ಸಾಮರಸ್ಯ ಬೆಸೆಯಲು ಪ್ರಯತ್ನಿಸುತ್ತಿದ್ದರೂ, ಅದಕ್ಕೆ ಇನ್ನೂ ಪೂರ್ಣ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. 

ಮೂವರನ್ನು ಬಿಟ್ಟು ಎಲ್ಲರೂ ವಾಪಸ್‌: ಘರ್ಷಣೆ, ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಂಡಿಗನತ್ತ ಗ್ರಾಮದ 20 ಮಹಿಳೆಯರು ಸೇರಿದಂತೆ 45 ಮಂದಿ ಗ್ರಾಮಸ್ಥರು ಜಾಮೀನು ಪಡೆದು ಜೈಲಿಂದ ಬಿಡುಗಡೆಯಾಗಿ ಕುಟುಂಬ ಸೇರಿದ್ದಾರೆ. ಅವರ ಬರುವಿಕೆಯೊಂದಿಗೆ, ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಇತರರು ಕೂಡ ಮನೆಗಳಿಗೆ ವಾಪಸ್‌ ಆಗಿದ್ದಾರೆ. ಆದರೆ, ಮೂವರು ವಾಪಸ್‌ ಆಗಿಲ್ಲ. 

‘ಜಾಮೀನು ಪಡೆದವರಲ್ಲಿ ಎಲ್ಲರೂ ಸೋಮವಾರ ಮನೆಗಳನ್ನು ಸೇರಿದ್ದಾರೆ. ಘಟನೆ ನಡೆದ ಬಳಿಕ ಊರು ತೊರೆದಿರುವ ಮೂವರು ಇನ್ನೂ ಬಂದಿಲ್ಲ. ಅವರೆಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಇಲ್ಲ’ ಎಂದು ಬೇಡಗಂಪಣ ಸಮುದಾಯದ ಮುಖಂಡ ಕೆ.ವಿ.ಮಾದೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಇನ್ನೂ ಭಯ: ಘರ್ಷಣೆಯಲ್ಲಿ ಏಟು ತಿಂದಿರುವ ಮೆಂದರೆ ಗ್ರಾಮದ ಜನರು ಇನ್ನೂ ಭಯದಿಂದ ಮುಕ್ತರಾಗಿಲ್ಲ. ಅವರು ಮಹದೇಶ್ವರ ಬೆಟ್ಟ ಸೇರಿದಂತೆ ಎಲ್ಲಿಗೆ ಹೋಗುವುದಿದ್ದರೂ, ಇಂಡಿಗನತ್ತ ಗ್ರಾಮದ ಮೂಲಕವೇ ಬರಬೇಕಾಗಿದೆ. ಭಯದಲ್ಲೇ ಓಡಾಡುತ್ತಿದ್ದಾರೆ. ಘಟನೆ ನಡೆದು ತಿಂಗಳಾಗುತ್ತಾ ಬಂದರೂ ಎರಡೂ ಗ್ರಾಮದವರು ಇನ್ನೂ ಮುಕ್ತಮನಸ್ಸಿನಿಂದ ಮಾತುಕತೆ ಆಡುತ್ತಿಲ್ಲ. ಮೆಂದರೆ ಗ್ರಾಮದ ಸೋಲಿಗರು ಇಂಡಿಗನತ್ತ ಗ್ರಾಮದವರ ಜಮೀನಿನಲ್ಲೇ ಕೂಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಈಗ ಕೂಲಿಯೂ ಇಲ್ಲದಂತಾಗಿದೆ.  

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಘಟನೆ ನಡೆದು ತಿಂಗಳಾಗುತ್ತಾ ಬಂದರೂ ಸ್ಥಳೀಯ ಶಾಸಕರು, ಸಚಿವರು ಗ್ರಾಮಕ್ಕೆ ನೀಡದಿರುವುದಕ್ಕೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. 

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಪೊಲೀಸರು, ವಿವಿಧ ಇಲಾಖೆಗಳ ಅಧಿಕಾರಿಗಳು ಇಂಡಿಗನತ್ತ, ಮೆಂದರೆ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ ಗತಿಗಳನ್ನು ಪರಿಶೀಲಿಸಿ, ಗ್ರಾಮಸ್ಥರನ್ನು ಮಾತನಾಡಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ, ಜನಪ್ರತಿನಿಧಿಗಳು ಯಾರೂ ಬಂದಿಲ್ಲ. 

ನೀತಿಸಂಹಿತೆಯ ನೆಪವೊಡ್ಡಿ ಗ್ರಾಮದಿಂದ ಅವರು ದೂರ ಉಳಿದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಗೊತ್ತಾಗುತ್ತಲೇ ಎರಡು ದಿನಗಳಿಂದ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಗಳಿಗೆ ಭೇಟಿ ನೀಡುವುದಕ್ಕೆ ಆರಂಭಿಸಿದ್ದಾರೆ. 

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಹಾಗೂ ಮುಖಂಡರು ಭಾನುವಾರ ಇಂಡಿಗನತ್ತ, ಮೆಂದರೆಗೆ ಭೇಟಿ ನೀಡಿದ್ದಾರೆ. ಹನೂರು ಮಾಜಿ ಶಾಸಕ ಆರ್‌.ನರೇಂದ್ರ ಸೋಮವಾರ ಮಹದೇಶ್ವರ ಬೆಟ್ಟದಲ್ಲಿ ಮೆಂದರೆ ಹಾಡಿ ಜನರನ್ನು ಭೇಟಿ ಮಾಡಿದ್ದಾರೆ. 

‘ಆಕಸ್ಮಿಕವಾಗಿ ಅನಾಹುತ ನಡೆದು ಹೋಗಿದೆ. ಎರಡೂ ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳನ್ನು ಬಿಟ್ಟರೆ ಸರ್ಕಾರದ ಪ್ರತಿನಿಧಿಗಳು ಯಾರೂ ಬಂದು ಗ್ರಾಮಸ್ಥರನ್ನು ಮಾತನಾಡಿಸುವ, ಧೈರ್ಯ ತುಂಬುವ ಕೆಲಸ ಮಾಡಿಲ್ಲ’ ಎಂದು ಕೆ.ವಿ.ಮಾದೇಶ್‌ ದೂರಿದರು. 

ಪ್ರಕರಣ ವಾಪಸ್‌ಗೆ ಆಗ್ರಹ: ಈ ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ದಾಖಲಿಸಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು ಎಂಬ ಕೂಗು ಕೂಡ ಕೇಳಿಬರಲು ಆರಂಭಿಸಿದೆ. 

ಮತಗಟ್ಟೆ ಧ್ವಂಸ, ಇವಿಎಂಗೆ ಹಾನಿ ಮಾಡಿರುವ ಪ್ರಕರಣ ಗಂಭೀರವಾಗಿದ್ದು, ಇತ್ಯರ್ಥಗೊಳ್ಳಲು ದಶಕಗಳ ಕಾಲ ಹಿಡಿಯಲಿದೆ. ಗ್ರಾಮಸ್ಥರು ಬಡವರಾಗಿದ್ದು ನ್ಯಾಯಾಲಯಗಳಿಗೆ ಓಡಾಡಲು ಖರ್ಚು ಮಾಡಲು ಶಕ್ತರಲ್ಲ. ಅವರ ಸ್ಥಿತಿಗತಿಗಳನ್ನು ಪರಿಶೀಲಿಸಿ ಮಾನವೀಯ ನೆಲೆಯಲ್ಲಿ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂಬುದು ಮುಖಂಡರ ಒತ್ತಾಯ.

‘ಮೂಲಸೌಕರ್ಯಗಳನ್ನು ನೀಡಿ ಎಂದು ಒತ್ತಾಯಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ಆಕಸ್ಮಿಕವಾಗಿ ಈ ಘಟನೆ ನಡೆದು ಹೋಯಿತು. ಗ್ರಾಮಸ್ಥರ ಉದ್ದೇಶ ಇದಾಗಿರಲಿಲ್ಲ. ಬಡವರಾದ ಗ್ರಾಮಸ್ಥರಿಗೆ ಪ್ರಕರಣವನ್ನು ಎದುರಿಸುವಷ್ಟು ಶಕ್ತಿ ಇಲ್ಲ. ಖರ್ಚು ಮಾಡಲು ಹಣವಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಇದನ್ನೆಲ್ಲ ಪರಿಗಣಿಸಿ, ಅವರ ಕಷ್ಟಗಳನ್ನು ಅರಿತು ಪ್ರಕರಣವನ್ನು ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಮಾದೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡೂ ಗ್ರಾಮಗಳಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳುತ್ತಿದೆ. ಗ್ರಾಮಸ್ಥರಲ್ಲಿ ಸಾಮರಸ್ಯ ಮೂಡಿಸಲು ನಿರಂತರವಾಗಿ ಯತ್ನಿಸುತ್ತಿದ್ದೇವೆ

-ಕೆ.ವಿ.ಮಾದೇಶ್‌ ಮುಖಂಡ

‘ಪಾಲಾರ್‌ಗೆ ಸ್ಥಳಾಂತರಿಸಿ’

ಮೆಂದರೆ ಗ್ರಾಮಸ್ಥರು ಸೋಮವಾರ ಮಹದೇಶ್ವರಬೆಟ್ಟದಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.  ‘ಗ್ರಾಮದಲ್ಲಿ ಸಮುದಾಯದ ಜನರು ಕಡಿಮೆ ಸಂಖ್ಯೆಯಲ್ಲಿ ಇದ್ದೇವೆ. ಮತದಾನದ ದಿನ ನಮ್ಮ ಮೇಲೆ ನಡೆದ ಹಲ್ಲೆಯಿಂದಾದ ನೋವು ಇನ್ನೂ ಮಾಸಿಲ್ಲ. ಅವರು ಮತ್ತೆ ಗಲಾಟೆ ಮಾಡುತ್ತಾರೆ ಎಂಬ ಭಯ ಇದೆ. ಹೀಗಾಗಿ ನಮಗೆ ರಕ್ಷಣೆ ಬೇಕು. ನಮ್ಮ ಸಮುದಾಯದವರು ಪಾಲಾರ್‌ನಲ್ಲಿ ಇದ್ದಾರೆ ನಮ್ಮನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು’ ಎಂದು ಮನವಿ ಮಾಡಿದರು.  ನರೇಂದ್ರ ಮಾತನಾಡಿ ‘ಇಂಡಿಗನತ್ತ ಗ್ರಾಮದ ಮತಗಟ್ಟೆ ದ್ವಂಸ ಪ್ರಕರಣ ಆಕಸ್ಮಿಕವಾಗಿ ನಡೆದಿದೆ. ಆ ತಪ್ಪಿಗೆ ಈಗಾಗಲೇ ಶಿಕ್ಷೆ ಅನುಭವಿಸಿದ್ದಾರೆ. ಮತ್ತೆ ಅವರು ನಿಮ್ಮ ಜೊತೆ ಗಲಾಟೆ ಮಾಡಲು ಬರುವುದಿಲ್ಲ. ನೀವು ಧೈರ್ಯದಿಂದ ಇರಿ. ನಿಮ್ಮ ಜೊತೆ ನಾನಿದ್ದೇನೆ. ನಿಮಗೆ ಸದಾ ಬೆಂಬಲವಾಗಿರುತ್ತೇನೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಸಚಿವರನ್ನು ಕರೆತಂದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ನೀವು ಸ್ಥಳಾಂತರವಾಗಲೇ ಬೇಕೆಂದರೆ ನೀವು ಮನವಿಯನ್ನು ನೀಡಿ. ಸರ್ಕಾರಕ್ಕೆ ಕಳುಹಿಸಿ ಅಲ್ಲಿ ಒಪ್ಪಿಗೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳೋಣ’ ಎಂದು ಧೈರ್ಯ ತುಂಬಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಇದ್ದರು. 

ನೀತಿ ಸಂಹಿತೆ ಮುಗಿದ ಬಳಿಕ ಭೇಟಿ:

ಸಚಿವರ ಭರವಸೆ ಚಾಮರಾಜನಗರ: ಈ ಮಧ್ಯೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಇಂಡಿಗನತ್ತ ಮತ್ತು ಮೆಂದರೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಲಾಗುವುದು. ಅವರ ಸಮಸ್ಯಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಭರವಸೆ ನೀಡಿದ್ದಾರೆ. ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಸತ್ಯ ಶೋಧನಾ ವರದಿ ಸಿದ್ಧಪಡಿಸಿದ್ದ ಪುನರ್ಚಿತ್ ಸಂಸ್ಥೆಯ ವೀರಭದ್ರ ನಾಯಕ್ ಪಿಯುಸಿಎಲ್‌ನ ಅಬ್ರಹಾಂ ಡಿಸಿಲ್ವ ಮತ್ತು ಸಿಮಹದೇವಯ್ಯ ಅವರು ಸೋಮವಾರ ಚಾಮರಾಜನಗರದಲ್ಲಿ ಇಬ್ಬರು ಸಚಿವರು ಹನೂರು ಶಾಸಕ ಮಂಜುನಾಥ್ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರಿಗೆ ವರದಿ ಪ್ರತಿಯನ್ನು ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.  ಈ ಸಂದರ್ಭದಲ್ಲಿ ಇಬ್ಬರೂ ಸಚಿವರು ಚುನಾವಣಾ ಫಲಿತಾಂಶ ಬಂದ ನಂತರ ಗ್ರಾಮಗಳಿಗೆ ಭೇಟಿ ನೀಡುವ ಭರವಸೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT