ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಕಚೇರಿಗಳು ಆಗಬೇಕಿದೆ ಇನ್ನಷ್ಟು ಜನಸ್ನೇಹಿ

ಜಿಲ್ಲೆಯಲ್ಲಿ ಇ–ಆಫೀಸ್‌ ಯಶಸ್ವಿ ಅನುಷ್ಠಾನ, ಬಹುತೇಕ ಕಡೆಗಳಲ್ಲಿಲ್ಲ ಇಲ್ಲ ಮೂಲಸೌಕರ್ಯ
Published 25 ಡಿಸೆಂಬರ್ 2023, 7:47 IST
Last Updated 25 ಡಿಸೆಂಬರ್ 2023, 7:47 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರದ ಸೇವೆಗಳನ್ನು ಒದಗಿಸುವ ಕಚೇರಿಗಳು ಜನರ ಸ್ನೇಹಿಯಾಗಿಲ್ಲದಿರುವುದರಿಂದ ಕಚೇರಿಗಳಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. 

ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಕುಡಿಯುವ ನೀರು, ಶೌಚಾಲಯಗಳಂತಹ ಮೂಲ ಸೌಕರ್ಯ ಇಲ್ಲ. ಬಹುತೇಕ ಕಚೇರಿಗಳು ವೃದ್ಧರು, ಅಂಗವಿಕಲ ಸ್ನೇಹಿ ವಾತಾವರಣ ಹೊಂದಿಲ್ಲ. 

ಗ್ರಾಮ ಒನ್‌, ಕರ್ನಾಟಕ ಒನ್‌, ಸೇವಾ ಸಿಂಧು ಕೇಂದ್ರಗಳು ಆರಂಭವಾದ ನಂತರ, ಸಣ್ಣ ಪುಟ್ಟ ಕೆಲಸಕ್ಕೂ ಜನರು ಸರ್ಕಾರಿ ಕಚೇರಿಗಳಿಗೆ ಬರುವುದು ಈಗ ಕಡಿಮೆಯಾಗಿದೆ. ಈಗ ಸರ್ಕಾರ ಇ–ಆಫೀಸ್‌ ವ್ಯವಸ್ಥೆಯನ್ನೂ ಜಾರಿಗೆ ತಂದಿದೆ. ಕಂದಾಯ ಇಲಾಖೆ ಇದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದೆ.  ಹಾಗಿದ್ದರೂ, ಪ್ರಮುಖ ಕೆಲಸಗಳಿಗಾಗಿ ಜನರು ಹಿರಿಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಗಳಂತಹ ಕನಿಷ್ಠ ಸೌಲಭ್ಯಗಳು ಇರಬೇಕು. ಬಹುತೇಕ ಕಚೇರಿಗಳಲ್ಲಿ ಈ ಸೌಲಭ್ಯಗಳಿಲ್ಲ.   

ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಡಳಿತ ಭವನವು ಜಿಲ್ಲೆಯ ಮಟ್ಟಿಗೆ ಇರುವ ಅತ್ಯಂತ ಸುಸಜ್ಜಿತ ಕಟ್ಟಡ. ಇದು ವಿಶಾಲವಾಗಿದ್ದು ಬಹುತೇಕ ಎಲ್ಲ ಜನಸ್ನೇಹಿ ಸೌಕರ್ಯಗಳಿವೆ. ಆದರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನೆಲ ಮಹಡಿ, ಮೊದಲ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಜಾಗ ನಿಗದಿಪಡಿಸಲಾಗಿದೆ. ಆದರೆ ಇನ್ನೂ ಶುದ್ಧ ನೀರಿನ ಘಟಕ ಅಳವಡಿಸಿಲ್ಲ. ಹಾಗಾಗಿ, ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಟಬೇಕಾಗಿದೆ.

ಕಟ್ಟಡದಲ್ಲಿರುವ ಶೌಚಾಲಯಗಳ ನಿರ್ವಹಣೆ ಇತ್ತೀಚೆಗೆ ಉತ್ತಮವಾಗಿದೆ. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಇದೆ. ಕೆಲವು ಇಲಾಖೆಗಳ ಮುಖ್ಯಸ್ಥರ ಕಚೇರಿಗಳಲ್ಲಿ ಈ ವ್ಯವಸ್ಥೆ ಇಲ್ಲ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಅಧಿಕಾರಿಗಳ ಭೇಟಿಗೆ ಬರುವವರಿಗೆ ಆಸನ ವ್ಯವಸ್ಥೆ ಇದೆ. ಆದರೆ ಅಂಗವಿಕಲರಿಗೆ ಪೂರಕವಾದ ವಾತಾವರಣ ಇಲ್ಲ. ರ‍್ಯಾಂಪ್‌, ಲಿಫ್ಟ್‌ ಇಲ್ಲ. ನಗರಸಭೆಯಲ್ಲೂ ಇದೇ ಪರಿಸ್ಥಿತಿ.

ಚಾಮರಾಜನಗರ ತಾಲ್ಲೂಕು ಕಚೇರಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇದೆ. ‘ಪ್ರಜಾವಾಣಿ’ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀರು ಬರುತ್ತಿರಲಿಲ್ಲ. 

ತಾಲ್ಲೂಕು ಕಚೇರಿಗೆ ಭೇಟಿ ನೀಡಿದವರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಆವರಣದಲ್ಲಿ ನಗರಸಭೆಯ ಸಾರ್ವಜನಿಕ ಶೌಚಾಲಯ ಇದೆ. ಬಳಕೆಗೆ ಯೋಗ್ಯವಾಗಿಲ್ಲ. ಅಶುಚಿತ್ವ ತಾಂಡವವಾಡುತ್ತಿದೆ. ಕಚೇರಿಗೆ ಬರುವ ಜನರು ಮೂತ್ರ ಮಾಡಲು ಕಚೇರಿ ಹಿಂಭಾಗದ ಬಯಲನ್ನೇ ಅವಲಂಬಿಸಬೇಕಿದೆ.

ಕೊಳ್ಳೇಗಾಲದಲ್ಲಿರುವ ಉಪವಿಭಾಗಾಧಿಕಾರಿ, ತಾಲ್ಲೂಕು ಕಚೇರಿಯಲ್ಲಿ ತಕ್ಕ ಮಟ್ಟಿನ ಸೌಲಭ್ಯಗಳಿವೆ. ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ.  ನಗರಸಭೆ ಕಚೇರಿಯಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ರ‍್ಯಾಂಪ್‌, ಲಿಫ್ಟ್‌ಗಳಿಲ್ಲ.      

ಶೌಚಾಲಯ, ವಿಶ್ರಾಂತಿ ತಾಣಗಳದ್ದೇ ಚಿಂತೆ

ಯಳಂದೂರು ತಾಲ್ಲೂಕಿನ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇನ್ನೂ ಉಳಿದಿದೆ. ಬಳಕೆಯಾಗದ ಶೌಚಾಲಯ, ಸ್ವಚ್ಛತೆ ಕಾಣದ ಹೊರಾಂಗಣ, ವಿಶ್ರಮಿಸಲು ಬೇಕಾದ ಸುಸಜ್ಜಿತ ಸ್ಥಳವೇ ಇಲ್ಲವಾಗಿದೆ. ಬಹುತೇಕ ಕಚೇರಿಗಳಲ್ಲಿ ಹಳೆಯ ವಸ್ತುಗಳನ್ನು ತುಂಬಿ, ಸೊಳ್ಳೆ ಉತ್ಪದನಾ ತಾಣವಾಗಿ ಬದಲಾಗಿದೆ.

ತಾಲ್ಲೂಕು ಕಚೇರಿ ಚಾವಡಿ ಕೆಲವು ಸ್ಥಳಗಳು ಸಾರ್ವಜನಿಕರಿಗೆ ಬಳಕೆಯಾಗುತ್ತಿದ್ದು, ಉತ್ತಮ ಸೇವೆಗೆ ಬೇಕಾದ ಕುರ್ಚಿ ಮೇಜು ಒದಗಿಸಲಾಗಿದೆ. ಅಂಗವಿಕಲ ಸ್ನೇಹಿ ವಾತಾವರಣವನ್ನು ನಿರ್ಮಿಸಲಾಗಿದೆ. ಕೆಲವು ಇಲಾಖೆಗಳಲ್ಲಿ ಕುಂದುಕೊರತೆಗಳಿವೆ. 

ತಪ್ಪದ ಪರದಾಟ

ಹನೂರು ತಾಲ್ಲೂಕು ರಚನೆಯಾಗಿ ಐದು ವರ್ಷಗಳಾದರೂ ಸಾರ್ವಜನಿಕರು ಸರ್ಕಾರಿ ಕೆಲಸಗಳನ್ನು ಮಾಡಿಸಲು ಇನ್ನೂ ಪರದಾಡಬೇಕಿದೆ.

2018ರಲ್ಲಿ ಹನೂರು ಪ್ರತ್ಯೇಕ ತಾಲ್ಲೂಕು ಕೇಂದ್ರವಾಗಿ ರಚನೆಯಾಯಿತು. ತಾತ್ಕಾಲಿಕವಾಗಿ ಹಳೆ ಪ್ರವಾಸಿ ಮಂದಿರ ಕೊಠಡಿಯಲ್ಲಿ ಆರಂಭವಾದ ತಾಲ್ಲೂಕು ಕಚೇರಿ, ಇಂದಿಗೂ ಅದೇ ಕೊಠಡಿಯೊಳಗೆ ಮುಂದುವರೆಯುತ್ತಿದೆ. ಕಚೇರಿಗೆ ಬರುವ ಜನರು ಕುಡಿಯುವ ನೀರು, ಶೌಚಾಲಯವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಕಚೇರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಾಕಷ್ಟು ಪ್ರತಿಭಟನೆ, ಹೋರಾಟಗಳು ಆಗಿವೆ. ಇಷ್ಟಾದರೂ ಪ್ರಯೋಜನವಾಗಿಲ್ಲ. 

ಪಟ್ಟಣದಲ್ಲಿರುವ ಉಪ ನೋಂದಣಿ ಕಚೇರಿಯಲ್ಲೂ ಇದೇ ಸ್ಥಿತಿ. ದಿನನಿತ್ಯ ನೂರಾರು ಜನರು ಕಚೇರಿಗೆ ನೋಂದಣಿ ಕಾರ್ಯಕ್ಕೆ ಬರುತ್ತಾರೆ. ಆದರೆ ಜನರಿಗೆ ಕುಳಿತುಕೊಳ್ಳಲು ಸ್ಥಳ, ಶೌಚಾಲಯ ವ್ಯವಸ್ಥೆಯಿಲ್ಲದೇ ಬಯಲು ಶೌಚಾಲಯವನ್ನೇ ಆಶ್ರಯಿಸಬೇಕಿದೆ.

ಉದ್ಘಾಟನೆಗೊಳ್ಳದ ಶೌಚಾಲಯ: ತಾಲ್ಲೂಕು ಕಚೇರಿ ಬಳಿ ₹3.5 ಲಕ್ಷ ವೆಚ್ಚದಲ್ಲಿ ಶೌಚಾಲ ನಿರ್ಮಿಸಲಾಗಿದೆ. ನಿರ್ಮಾಣವಾಗಿ ವರ್ಷ ಕಳೆಯುತ್ತಿದ್ದರೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ.

ಆಸನಗಳಿಲ್ಲ, ನೀರೂ ಇಲ್ಲ

ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತವೆ. ತಾಲ್ಲೂಕು ಕಚೇರಿ ಸಂಕೀರ್ಣದಲ್ಲಿ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಸೀಮಿತವಾದ ಕುರ್ಚಿಗಳಷ್ಟೇ ಇದೆ. ಉಪ ನೋಂದಣಿ ಕಚೇರಿಯಲ್ಲಿ ಬಿಟ್ಟು ಬೇರೆ ಇಲಾಖೆಯ ಬಳಿ ಅಷ್ಟಾಗಿ ಕುರ್ಚಿಗಳಿಲ್ಲ. 

ತಾಲ್ಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ಬದಲಾದಂತೆ ವ್ಯವಸ್ಥೆಗಳು ಬದಲಾಗುತ್ತದೆ. ಹಿಂದೆ ಇಬ್ಬರು ತಹಶೀಲ್ದಾರ್‌ಗಳು ಕಚೇರಿ ಆವರಣಕ್ಕೆ ತಂತಿ ಬೇಲಿ ಅಳವಡಿಸಿದ್ದರು.  ಇದರಿಂದಾಗಿ ಸಾರ್ವಜನಿಕ ವಾಹನಗಳು  ಹೊರಗೆ ನಿಲ್ಲಿಸಬೇಕಿತ್ತು. ಸದ್ಯ ತಂತಿ ಬೇಲಿ ತೆಗೆಸಿ ವಾಹನ ನಿಲುಗಡೆಗೆ ಅವಕಾಶವಾಗಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ.  ಸಾರ್ವಜನಿಕರು ಮರದ ಕೆಳಗೆ, ಕಟ್ಟಡದ ಬಳಿ ಕೂರಬೇಕಾದ ಪರಿಸ್ಥಿತಿ ಇದೆ.

ನಿರ್ವಹಣೆ:ಸೂರ್ಯನಾರಾಯಣ ವಿ. 

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಮಲ್ಲೇಶ ಎಂ., ಬಿ.ಬಸವರಾಜು

ಯಳಂದೂರು ತಾಲ್ಲೂಕು ಕಚೇರಿಯಲ್ಲಿ ಅಂಗವಿಕಲರೊಬ್ಬರು ಅರ್ಜಿ ಬರೆಯಲು ಪ್ರಯಾಸ ಪಡುತ್ತಿರುವುದು
ಯಳಂದೂರು ತಾಲ್ಲೂಕು ಕಚೇರಿಯಲ್ಲಿ ಅಂಗವಿಕಲರೊಬ್ಬರು ಅರ್ಜಿ ಬರೆಯಲು ಪ್ರಯಾಸ ಪಡುತ್ತಿರುವುದು
ಹನೂರು ತಾಲ್ಲೂಕು ಕಚೇರಿ ಬಳಿ ಇರುವ ಶೌಚಾಲಯ ಇನ್ನೂ ಉದ್ಘಾಟನೆಯಾಗಿಲ್ಲ
ಹನೂರು ತಾಲ್ಲೂಕು ಕಚೇರಿ ಬಳಿ ಇರುವ ಶೌಚಾಲಯ ಇನ್ನೂ ಉದ್ಘಾಟನೆಯಾಗಿಲ್ಲ
ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ದ್ವಿಚಕ್ರವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದು
ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ದ್ವಿಚಕ್ರವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದು
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಕುಡಿಯುವ ನೀರಿನ ಸೌಲಭ್ಯ ಇನ್ನೂ ಕಲ್ಪಿಸಿಲ್ಲ
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಕುಡಿಯುವ ನೀರಿನ ಸೌಲಭ್ಯ ಇನ್ನೂ ಕಲ್ಪಿಸಿಲ್ಲ
ಸಿದ್ದರಾಜು
ಸಿದ್ದರಾಜು
ರಾಜೇಶ್‌
ರಾಜೇಶ್‌
ರಮೇಶ್‌
ರಮೇಶ್‌
ಮಹೇಶ್‌
ಮಹೇಶ್‌
ಡಿ.ಪಿ.ರಾಜು
ಡಿ.ಪಿ.ರಾಜು
ಚಿಕ್ಕತಾಯಮ್ಮ
ಚಿಕ್ಕತಾಯಮ್ಮ
ಸಿ.ಟಿ.ಶಿಲ್ಪಾ ನಾಗ್‌
ಸಿ.ಟಿ.ಶಿಲ್ಪಾ ನಾಗ್‌

ಜನರು ಏನಂತಾರೆ? ಅಂಗವಿಕಲ ಸ್ನೇಹಿ ಸೌಕರ್ಯ ಇಲ್ಲ ಜಿಲ್ಲಾಡಳಿತ ಭವನ ಬಿಟ್ಟು ಬೇರೆ ಯಾವ ಸರ್ಕಾರಿ ಕಚೇರಿಗಳಲ್ಲೂ ಅಂಗವಿಕಲರಿಗೆ ಅನುಕೂಲವಾಗುವಂತಹ ಸೌಲಭ್ಯ ಇಲ್ಲ. ಜಿಲ್ಲಾಡಳಿತ ಭವನದಲ್ಲೂ ಅಂಗವಿಕಲರಿಗಾಗಿ ಶೌಚಾಲಯ ಇದ್ದರೂ ಅದು ಬಳಕೆಯಲ್ಲಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ರ‍್ಯಾಂಪ್‌ ಇಲ್ಲ ಲಿಫ್ಟ್‌ ಇಲ್ಲ. ಚಾಮರಾಜನಗರ ನಗರಸಭೆಯಲ್ಲೂ ರ‍್ಯಾಂಪ್‌ ಲಿಫ್ಟ್‌ ಇಲ್ಲ. ತಾಲ್ಲೂಕು ಕಚೇರಿಯಲ್ಲೂ ಭೂ ಮಾಪನ ವಿಭಾಗಕ್ಕೆ ಅಂಗವಿಕಲರಿಗೆ ಹೋಗಲು ಸಾಧ್ಯವಿಲ್ಲ. ಇಡೀ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಇದೆ. ಶಾಲಾ ಕಾಲೇಜುಗಳಲ್ಲೂ ರ‍್ಯಾಂಪ್‌ ಸೌಲಭ್ಯವಿಲ್ಲ. ನಾವು ನಿರಂತರವಾಗಿ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಸ್ಪಂದನೆ ಇಲ್ಲ. – ಎಂ.ರಮೇಶ್‌ ಜಿಲ್ಲಾ ಅಂಗವಿಕಲರ  ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆಸನಗಳ ವ್ಯವಸ್ಥೆ ಇಲ್ಲ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ದೂರು ನೀಡಲು ಕಾಯಬೇಕಾದ ಪರಿಸ್ಥಿತಿ ಬಂದರೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಸಕಾಲದಲ್ಲಿ ಸಿಗುವುದಿಲ್ಲ. ಕಚೇರಿಗೆ ಅಲೆಯುವುದು ತಪ್ಪುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಾರ್ವಜನಿಕರಿಗೆ ಸ್ಪಂದಿಸುವ ಗುಣ ಅಧಿಕಾರಿಗಳಿಗೆ ಇಲ್ಲ. ಕಡತಗಳ ವಿಲೇವಾರಿ ನಿಧಾನವಾಗುತ್ತಿದೆ. –ಡಿ.ಪಿ.ರಾಜು ದೇಶವಳ್ಳಿ ಚಾಮರಾಜನಗರ ತಾಲ್ಲೂಕು  ಶೌಚಾಲಯಕ್ಕೆ ಹೊಸ ರೂಪ ನೀಡಬೇಕು ಯಳಂದೂರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶೌಚಾಲಯ ಇದ್ದು ಪೊದೆ ಗಿಡಗಳಿಂದ ಆವೃತ್ತವಾಗಿದೆ. ಕಮೋಡ್ ಸೇರಿದಂತೆ ಇತರೆ ಪರಿಕರಗಳು ಉಪಯೋಗವಾಗುತ್ತಿಲ್ಲ. ಪ್ರಮುಖವಾಗಿ ನೀರಿನ ಕೊರತೆ ಇದೆ. ಸರ್ಕಾರಿ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚ ಗೃಹ ನಿರ್ಮಿಸಬೇಕಿದೆ. –ಮಹೇಶ್ ದುಗ್ಗಹಟ್ಟಿ ಯಳಂದೂರು ತಾಲ್ಲೂಕು ವೃದ್ಧರು ಅಂಗವಿಕಲ ಸ್ನೇಹಿ ವಾತಾವರಣ ಇರಲಿ ಬಹುತೇಕ ಕಚೇರಿಗಳಲ್ಲಿ ಅಂಗವಿಕಲರು ಮತ್ತು ವೃದ್ಧರ ಸಂಚಾರಕ್ಕೆ ಬೇಕಾದ ವಾತಾವರಣ ಇಲ್ಲ. ಕುಳಿತುಕೊಳ್ಳಲು ಮತ್ತು ಅವರ ಕೆಲಸವನ್ನು ಶೀಘ್ರವಾಗಿ ಮಾಡಿಕೊಡುವ ದಿಕ್ಕಿನಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಬೇಕಾಗಿದೆ. ಕಚೇರಿಗಳ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಡುವ ಬಗ್ಗೆ ಆಲೋಚಿಸಬೇಕಿದೆ. –ಚಿಕ್ಕತಾಯಮ್ಮ ಕೊಮಾರನಪುರ ಯಳಂದೂರು ತಾಲೂಕು ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಬೇಕು ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳಿಗಾಗಿ ಬರುವ ಜನರಿಗೆ ಕೆಲಸಗಳು ವಿಳಂಬವಾಗುತ್ತಿರುವುದು ಒಂದೆಡೆಯಾದರೆ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಬಳಲುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. –ಸಿದ್ದರಾಜು ಹನೂರು ಆಸನಗಳ ವ್ಯವಸ್ಥೆ ಮಾಡಿ ಪ್ರತಿ ನಿತ್ಯ ಕಚೇರಿಗೆ ಸಾವಿರಾರು ಸಾರ್ವಜನಿಕರು ಕೆಲಸ ನಿಮಿತ್ತ ಬರುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಕೆಲಸ ಆಗುವುದಿಲ್ಲ ದಿನಗಟ್ಟಲೆ ಕಾಯಬೇಕಿದೆ. ವಯಸ್ಸಾದವರು ಅಂಗವಿಕಲರಿಗೆ ಆವರಣದಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು. – ರಾಜೇಶ್ ಗುಂಡ್ಲುಪೇಟೆ 

ಕಡತಗಳ ಶೀಘ್ರ ವಿಲೇವಾರಿಗೆ ಇ–ಆಫೀಸ್‌ ಜನಸ್ನೇಹಿ ವ್ಯವಸ್ಥೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು ‘ಕಂದಾಯ ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಇ–ಆಫೀಸ್‌ ವ್ಯವಸ್ಥೆ ಅನುಷ್ಠಾನಗೊಳಿಸಿದ್ದೇವೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯಲ್ಲಿ ಹೋಬಳಿ ಮಟ್ಟದಲ್ಲೂ ಇ–ಆಫೀಸ್‌ ವ್ಯವಸ್ತೆ ಜಾರಿಗೆ ಬಂದಿದೆ. ಇತರ ಹಲವು ಇಲಾಖೆಗಳೂ ಇದನ್ನು ಅನುಷ್ಠಾನಗೊಳಿಸಿವೆ. ಇನ್ನೂ ಕೆಲವು ಇಲಾಖೆಗಳಲ್ಲಿ ಬಾಕಿ ಇದೆ. ಇ–ಆಫೀಸ್‌ನಿಂದಾಗಿ ಅರ್ಜಿ ತೆಗೆದುಕೊಳ್ಳುವುದು ಕಳುಹಿಸುವುದು ಡಿಜಿಟಲೀಕರಣಗೊಂಡಿದೆ. ಇದರಿಂದಾಗಿ ಕಡತಗಳು ಕಳೆದು ಹೋಗುವಂತಹ ಪರಿಸ್ಥಿತಿ ಇಲ್ಲವಾಗಿದೆ. ವಿಲೇವಾರಿಯೂ ಬೇಗ ಆಗುವುದಕ್ಕೆ ಅನುಕೂಲವಾಗಿದೆ’ ಎಂದರು.  ‘ಜನರು ದೂರು ಅಥವಾ ಇನ್ಯಾವುದೇ ಅರ್ಜಿಗಳನ್ನು ಕೊಡಲು ಕಚೇರಿಗೆ ಬರಬೇಕಾಗಿಯೂ ಇಲ್ಲ. ನೇರವಾಗಿ ಇ–ಮೇಲ್‌ ಮಾಡಿದರೂ ಸಾಕು. ಅದನ್ನು ಸ್ವೀಕರಿಸಿ ಇ–ಆಫೀಸ್‌ ವ್ಯವಸ್ಥೆಯಲ್ಲಿ ಅದರ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಹೇಳಿದರು.  ‘ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲ ಸ್ನೇಹಿ ವ್ಯವಸ್ಥೆ ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಮಾಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆಯನ್ನೂ ನಡೆಸಲಾಗುತ್ತದೆ. ಜಿಲ್ಲಾಡಳಿತ ಭವನದಲ್ಲಿ ಅಂಗವಿಕಲರು ವೃದ್ಧರಿಗೆ ಬೇಕಾದಂತಹ ಸೌಕರ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.  ಜಿಲ್ಲಾಡಳಿತ ಭವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇರುವುದರ ಬಗ್ಗೆ ಗಮನಕ್ಕೆ ತಂದಾಗ ‘ಶೀಘ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು. 

ಅಧಿಕಾರಿಗಳು ಏನಂತಾರೆ? ನಗರಸಭೆ ನಿರ್ವಹಿಸಬೇಕು ಕಚೇರಿಯಲ್ಲಿರುವ ಕುಡಿಯುವ ನೀರಿನ ಘಟಕ ಕಾರ್ಯಾಚರಿಸುತ್ತಿದೆ. ಕೊಳವೆಬಾವಿ ಕೆಟ್ಟು ನೀರು ಇಲ್ಲದಿದ್ದ ಸಂದರ್ಭದಲ್ಲಿ ನೀರು ಇರುವುದಿಲ್ಲ. ಕಚೇರಿ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ನಗರಸಭೆ ನಿರ್ವಹಿಸಬೇಕು. ಈಗಾಗಲೇ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಕಚೇರಿ ಕಟ್ಟಡದಲ್ಲಿ ಸಿಬ್ಬಂದಿಗೆ ಶೌಚಾಲಯ ಇದೆ. ಈಗ ಇಡೀ ಕಟ್ಟಡವನ್ನು ನವೀಕರಣ ಮಾಡಲಾಗುತ್ತಿದೆ.  –ಐ.ಈ.ಬಸವರಾಜು ಚಾಮರಾಜನಗರ ತಹಶೀಲ್ದಾರ್‌  ವ್ಯವಸ್ಥೆಗೆ ಕ್ರಮ ಕಚೇರಿ ಆವರಣದಲ್ಲಿ ಶೌಚಾಲಯ ಇದೆ. ಆದರೆ ಶುಚಿತ್ವವಿಲ್ಲ. ಆದ್ದರಿಂದ ಅನೇಕರು ಕಚೇರಿ ಹಿಂಭಾಗ ಕಾಂಪೌಂಡ್‌ ಬಳಿ ಮತ್ತು ಹಳೆ ತಹಶೀ‌ಲ್ದಾರ್ ಕಚೇರಿ ಆವರಣವನ್ನು ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಕಚೇರಿ ಆವರಣದಲ್ಲಿ ಆಸನಗಳ ವ್ಯವಸ್ಥೆ ಮಾಡಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. –ರಮೇಶ್ ಬಾಬು ಗುಂಡ್ಲುಪೇಟೆ ತಹಶೀಲ್ದಾರ್‌  ಶೀಘ್ರದಲ್ಲಿ ಶೌಚಾಲಯ ನಿರ್ಮಾಣ ತಾಲ್ಲೂಕು ಕಚೇರಿ ಆವರಣದಲ್ಲಿ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೇ ಶೌಚಾಲಯ ವ್ಯವಸ್ಥೆ ಇಲ್ಲದಂತಾಗಿದೆ. ಇಂದಿಗೂ ಕಚೇರಿಗಳು ಸಂಕೀರ್ಣವಾದ ಕೊಠಡಿಯೊಳಗೆ ನಡೆಯುತ್ತಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಶೌಚಾಲಯ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಲಾಗುವುದು. –ವೈ.ಕೆ.ಗುರುಪ್ರಸಾದ್ ಹನೂರು ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT