ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓವರ್‌ ಹೆಡ್‌ ಟ್ಯಾಂಕ್‌ ಕುಸಿತ: ತಪ್ಪಿದ ಭಾರಿ ಅನಾಹುತ

28 ವರ್ಷಗಳಷ್ಟು ಹಳೆಯ ಟ್ಯಾಂಕ್‌, ರಾತ್ರಿ 3.05ರ ಸುಮಾರಿಗೆ ಧರೆಗೆ, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
Last Updated 7 ಜೂನ್ 2020, 16:51 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ತಹಶೀಲ್ದಾರ್‌ ಕಚೇರಿಯ ಹಿಂಭಾಗದಲ್ಲಿರುವ ಭಗೀರಥ ಬಡಾವಣೆಯಲ್ಲಿದ್ದ, 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ಶನಿವಾರ ತಡ ರಾತ್ರಿ ಕುಸಿದು ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.

ರಾತ್ರಿ 3.05ರ ಸುಮಾರಿಗೆ ಟ್ಯಾಂಕ್‌ ಧರೆಗೆ ಕುಸಿದಿದೆ. ಟ್ಯಾಂಕ್‌ ತುಂಬ ನೀರಿತ್ತು. ಟ್ಯಾಂಕ್‌ ಕುಸಿದ ರಭಸಕ್ಕೆ ನೀರೆಲ್ಲ ಎದುರಿನ ಬೀದಿಗಳಿಗೆ ನುಗ್ಗಿತು.

ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ಮನೆಗಳಿದ್ದು, ಒಂದು ವೇಳೆ ಮನೆಗಳ ಮೇಲೆ ಬಿದ್ದಿದ್ದರೆ ಭಾರಿ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿತ್ತು. ಅದೃಷ್ಟವಶಾತ್‌ ನೇರವಾಗಿ ನೆಲಕ್ಕೆ ಕುಸಿದಿರುವುದರಿಂದ ಏನೂ ಅನಾಹುತವಾಗಿಲ್ಲ. ಟ್ಯಾಂಕ್‌ ಕೂಡ ರಸ್ತೆಗೆ ಮುಖ ಹಾಕಿದಂತೆ ಒಡೆದಿದ್ದರಿಂದ ನೀರೆಲ್ಲ ಎದುರಿದ್ದ ರಸ್ತೆಯತ್ತ ನುಗ್ಗಿದ್ದರಿಂದ ಯಾವುದೇ ಹಾನಿಯಾಗಲಿಲ್ಲ.

ಭಾರಿ ಸದ್ದು ಉಂಟಾಗಿದ್ದರಿಂದ ನಿದ್ದೆಯಲ್ಲಿದ್ದ ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿ ಹೊರಗಡೆ ಓಡಿ ಬಂದಾಗ ಟ್ಯಾಂಕ್‌ ಕುಸಿದಿರುವುದು ಗೊತ್ತಾಯಿತು.

1992ರಲ್ಲಿರಾಷ್ಟ್ರೀಯ ಗ್ರಾಮಾಂತರಕೊಳವೆನೀರು ಸರಬರಾಜು ಯೋಜನೆಯಡಿ ₹38 ಲಕ್ಷ ವೆಚ್ಚದಲ್ಲಿ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 1998ರಲ್ಲಿ ಟ್ಯಾಂಕ್‌ ಉದ್ಘಾಟನೆಗೊಂಡಿತ್ತು.

10 ವರ್ಷಗಳ ಹಿಂದೆಚಿನ್ನಿಪುರದ ಮೋಳೆ, ದೊಡ್ಡ ಮೋಳೆ, ಜಾಲಹಳ್ಳಿ ಹುಂಡಿಗಳಿಗೆಈ ಟ್ಯಾಂಕ್‌ನಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ನಂತರಭಗೀರಥ ಬಡಾವಣೆಯ 5 ಬೀದಿಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿತ್ತು.

ನಿರ್ಲಕ್ಷ್ಯ ಆರೋಪ: ಕೆಲವು ವರ್ಷಗಳಿಂದೀಚೆಗೆ ಟ್ಯಾಂಕ್‌ನ ಪಿಲ್ಲರ್‌ಗಳು ಶಿಥಿಲಗೊಂಡಿದ್ದವು. ಸ್ಥಳೀಯರು ಹಲವು ಬಾರಿ ನಗರಸಭೆಗೆ, ಜಿಲ್ಲಾಧಿಕಾರಿಗಳಿಗೆ ದೂರು ಕೂಡ ನೀಡಿದ್ದರು. ಆದರೂ, ನಗರಸಭೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

2018ರಲ್ಲಿ ಅಂದಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಬಸವರಾಜು ಅವರು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಶಿಥಿಲಗೊಂಡಿದ್ದ ಟ್ಯಾಂಕ್‌ ತೆರವುಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.

‘2012ರಿಂದ ದೂರು ನೀಡಲು ಆರಂಭಿಸಿದ್ದೆ. ಜಿಲ್ಲಾಧಿಕಾರಿ, ನ್ಯಾಯಾಧೀಶರು, ನಗರಸಭೆ ಆಯುಕ್ತರು ಸೇರಿದಂತೆ ಎಲ್ಲ ಅಧಿಕಾರಿಗಳು ಬಂದು ಭೇಟಿ ನೀಡಿದ್ದರು. ಆದರೆ, ತೆರವುಗೊಳಿಸುವುದಕ್ಕೆ ಕ್ರಮ ಕೈಗೊಂಡಿರಲಿಲ್ಲ. ಭಯದಲ್ಲೇ ಸುತ್ತಮುತ್ತಲಿನ ಜನರು ದಿನದೂಡುತ್ತಿದ್ದರು. ನಮ್ಮ ಅದೃಷ್ನ ಚೆನ್ನಾಗಿ ಇದ್ದುದರಿಂದ ಟ್ಯಾಂಕ್‌ ನೇರವಾಗಿ ನೆಲಕ್ಕೆ ಕುಸಿದಿದೆ. ಅಕ್ಕ ಪಕ್ಕಕ್ಕೆ ವಾಲಿದ್ದರೆ ಮನೆಗಳ ಮೇಲೆಯೇ ಬೀಳುತ್ತಿತ್ತು. ಸಾವು ನೋವು ಸಂಭವಿಸುತ್ತಿತ್ತು’ ಎಂದು ‌ಸ್ಥಳೀಯ ಮುಖಂಡ ಗೋವಿಂದರಾಜು ಅವರು ಆರೋಪಿಸಿದರು.

ದೂರು ಬಂದಿದ್ದು ನಿಜ: ಆಯುಕ್ತ

ಈ ‌ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು, ‘ಶಿಥಿಲಗೊಂಡಿದ್ದ ಟ್ಯಾಂಕ್‌ ತೆರವುಗೊಳಿಸಬೇಕು ಎಂದು ದೂರುಗಳು ಬಂದಿದ್ದವು. ನಾವು ಸ್ಥಳ ಪರಿಶೀಲನೆ ನಡೆಸಿದ್ದೆವು. ಕರ್ನಾಟಕ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರವನ್ನೂ ಬರೆದಿದ್ದೆವು. ಪ್ರಮಾಣಪತ್ರಕ್ಕಾಗಿ ₹ 3.25 ಲಕ್ಷ ಶುಲ್ಕ ಪಾವತಿಸಬೇಕಾಗಿತ್ತು. ನಗರಸಭೆಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದೇ ಇದ್ದುದರಿಂದ ಹಣಪಾವತಿಗೆ ಸಮಸ್ಯೆಯಾಯಿತು. ಹಾಗಾಗಿ, ಸ್ವಲ್ಪ ವಿಳಂಬವಾಯಿತು’ ಎಂದು ಹೇಳಿದರು.

‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ.ಅದೃಷ್ಟವಶಾತ್‌ ಯಾರಿಗೂ ಏನೂ ಆಗಿಲ್ಲ. ಟ್ಯಾಂಕ್‌ ಇದ್ದ ಸ್ಥಳದಲ್ಲಿ ಶುದ್ಧ ನೀರಿನ ಘಟಕ ಆರಂಭಿಸುವ ಯೋಚನೆ ಇದೆ. ಈ ಸಂಬಂಧ ಶಾಸಕರೊಂದಿಗೆ ಮಾತನಾಡಿ ನಿರ್ಧರಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT