ಶನಿವಾರ, ಜುಲೈ 24, 2021
21 °C
ಹೊರರಾಜ್ಯಕ್ಕೆ ಪ್ರವೇಶ ಕಲ್ಪಿಸುವ ಪಾಲಾರ್‌, ನಾಲ್‌ರೋಡ್‌ ಚೆಕ್‌ಪೋಸ್ಟ್‌ ಮುಚ್ಚಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ

ಚಾಮರಾಜನಗರ: ಪ್ರವಾಸಿ ತಾಣ‌, ಹೋಂ ಸ್ಟೇ, ರೆಸಾರ್ಟ್‌ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್‌–19 ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಜಿಲ್ಲಾಡಳಿತ ಗುರುವಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಹನೂರು ತಾಲ್ಲೂಕಿನಲ್ಲಿರುವ ನಾಲ್‌ರೋಡ್‌ ಮತ್ತು ಪಾಲಾರ್‌ ಅಂತರರಾಜ್ಯ ಚೆಕ್‌ಪೋಸ್ಟ್‌ಗಳನ್ನು  ಬಂದ್‌ ಮಾಡಿ ಹಾಗೂ ಬಂಡೀಪುರ ಮತ್ತು ಇತರ ಪ್ರವಾಸಿತಾಣಗಳು, ಅವುಗಳ ಸುತ್ತಮುತ್ತ ಇರುವ ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ. 

ಇದರ ಜೊತೆಗೆ ತಮಿಳುನಾಡು, ಕೇರಳಕ್ಕೆ ಸರಕು ತೆಗೆದುಕೊಂಡು ಹೋಗುವ ಚಾಲಕರಿಗೆ ಮೂರು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗಿದೆ.  

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಗುರುವಾರ ಫೇಸ್‌ಬುಕ್‌ ಲೈವ್‌ ಮೂಲಕ ಜಿಲ್ಲಾಡಳಿತದ ನಿರ್ಧಾರದ ಬಗ್ಗೆ ವಿವರಗಳನ್ನು ನೀಡಿದರು. 

‘ಜಿಲ್ಲೆಯಲ್ಲಿ ಆರು ಅಂತರರಾಜ್ಯ ಗಡಿಗಳಿವೆ. ತಮಿಳುನಾಡಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕಾರಣದಿಂದ ಪಾಲಾರ್‌ ಹಾಗೂ ನಾಲ್‌ರೋಡ್‌ ಚೆಕ್‌ ‍ಪೋಸ್ಟ್‌ಗಳನ್ನು ಬಂದ್‌ ಮಾಡಲು ತೀರ್ಮಾನ ಕೈಗೊಂಡಿದ್ದೇವೆ. ಇಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಅವರು ಹೇಳಿದರು. 

‘ಹೊರ ಜಿಲ್ಲೆಗಳಿಂದ ಬಂಡೀಪುರ ಹಾಗೂ ಇತರ ಪ್ರವಾಸಿ ಕೇಂದ್ರಗಳಿಗೆ ಹಲವು ಜನರು ಬರುತ್ತಿದ್ದು, ಅವರ ಭೇಟಿಯನ್ನು ನಿಯಂತ್ರಿಸುವ ಉದ್ದೇಶದಿಂದ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಪ್ರವಾಸಿ ತಾಣಗಳ ಸುತ್ತಮುತ್ತಲಿರುವ ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳನ್ನು ಮುಚ್ಚಲೂ ಆದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯ: ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕುಗಳಿಂದ ವರ್ತಕರು, ಚಾಲಕರು ಪ್ರತಿ ನಿತ್ಯ ಕೇರಳ, ತಮಿಳುನಾಡಿಗೆ ಓಡಾಡುತ್ತಾರೆ. ಇವರೆಲ್ಲ ಸರಕು ವಾಹನಗಳಲ್ಲಿ ಚಾಲಕರಾಗಿ ಹೋಗುತ್ತಿದ್ದಾರೆ. ಪ್ರತಿನಿತ್ಯ 40ರಿಂದ 50 ಜನರು ಓಡಾಡುತ್ತಿದ್ದಾರೆ. ಇದುವರೆಗೂ ‌ಚೆಕ್‌ಪೋಸ್ಟ್‌ಗಳಲ್ಲಿ ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದೆವು. ಇನ್ನು ಮುಂದೆ ಚಾಲಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲು ನಿರ್ಧರಿಸಲಾಗಿದೆ’ ಎಂದರು.

ಜಿಲ್ಲೆಯಲ್ಲಿ ಮೊದಲ ಕೋವಿಡ್‌–19 ಪ್ರಕರಣ ಗುಂಡ್ಲುಪೇಟೆಯಲ್ಲಿ ದಾಖಲಾಗಿದ್ದು, ತಮಿಳುನಾಡಿಗೆ ಹೋಗಿ ಬಂದ ಚಾಲಕನಲ್ಲಿ ಕಂಡು ಬಂದಿತ್ತು. ಇಂತಹ ಪ್ರಕರಣವನ್ನು ತಪ್ಪಿಸುವುದಕ್ಕಾಗಿ ಚಾಲಕರು ಕೇರಳ ಅಥವಾ ತಮಿಳುನಾಡಿಗೆ ಹೋಗಿ ಬಂದ ಮೇಲೆ ಕನಿಷ್ಠ ಮೂರು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ‌ ಒಳಗಾಗಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಅವರಿಗೆ ಹೋಗುವುದಕ್ಕೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು. 

ಅಂತರ ಜಿಲ್ಲೆ ಚೆಕ್‌ಪೋಸ್ಟ್‌: ‘ಆರು ಕಡೆಗಳಲ್ಲಿ (ಬಾಣಳ್ಳಿ, ಟಗರುಪುರ, ಹೆಗ್ಗವಾಡಿ, ಸತ್ತೇಗಾಲ, ಬೇಗೂರು, ಅರ್ಧನಾರೀಶ್ವರ) ಅಂತರ ಜಿಲ್ಲೆ ಚೆಕ್‌ಪೋಸ್ಟ್‌ಗಳನ್ನು ಮತ್ತೆ ಆರಂಭಿಸಲಾಗಿದೆ. ಹೊರ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಹಾಗೂ ಇಲ್ಲಿಂದ ಹೊರ ಜಿಲ್ಲೆಗಳಿಗೆ ಜನರು ಅನಾವಶ್ಯಕವಾಗಿ ಓಡಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು. 

21 ರೋಗಿಗಳು ಕೋವಿಡ್‌ ಕೇರ್‌ಗೆ ಸ್ಥಳಾಂತರ

 ‘ಕೋವಿಡ್‌ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ತೆರೆಯಲಾಗಿರುವ ಕೋವಿಡ್‌–19 ಆಸ್ಪತ್ರೆಯಲ್ಲಿ 100 ಹಾಸಿಗೆಗಳಿವೆ. ಈ ಪೈಕಿ 38 ಐಸಿಯು ಹಾಸಿಗೆಗಳಿವೆ. ರೋಗ ಲಕ್ಷಣ ಇಲ್ಲದವರು ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲದವರನ್ನು ಕೋವಿಡ್‌–19 ಕೇರ್‌ ಕೇಂದ್ರಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಮೂರು ನಾಲ್ಕು ದಿನಗಳು ಚಿಕಿತ್ಸೆ ನಂತರ ಅವರನ್ನು ಕೇರ್‌ ಸೆಂಟರ್‌ಗೆ ವರ್ಗಾಯಿಸಲಾಗುವುದು. ಸದ್ಯ ಆಸ್ಪತ್ರೆಯಲ್ಲಿದ್ದ 53 ರೋಗಿಗಳ ಪೈಕಿ 21 ಮಂದಿಯನ್ನು ಕೇರ್‌ ಸೆಂಟರ್‌ಗೆ ಕಳುಹಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು. 

400 ಹಾಸಿಗೆಗಳ ಕೋವಿಡ್‌ ಕೇರ್‌: ‘ಸದ್ಯ ವೈದ್ಯಕೀಯ ಕಾಲೇಜು ಹಾಗೂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 100 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ ಚಾಮರಾಜನಗರದ ಬಸವ ರಾಜೇಂದ್ರ ಆಸ್ಪತ್ರೆ, ಕಾಮಗೆರೆಯ ಹೋಲಿ ಕ್ರಾಸ್‌ ಆಸ್ಪತ್ರೆಗಳಲ್ಲೂ ತಲಾ 100 ಹಾಸಿಗೆಗಳ ಸಾಮರ್ಥ್ಯದ ಕೇರ್‌ ಕೇಂದ್ರ ಆರಂಭವಾಗಲಿದೆ. ಜಿಲ್ಲೆಯಲ್ಲಿ 400 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರಗಳು ಸಿದ್ಧವಿರಲಿದೆ’ ಎಂದರು.

ಪರೀಕ್ಷೆ ಪ್ರಮಾಣ ಹೆಚ್ಚಳ

‘ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ದಿನಕ್ಕೆ 400ರಿಂದ 500 ಗಂಟಲದ್ರವ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 23 ಕಂಟೈನ್‌ಮೆಂಟ್‌ ವಲಯಗಳಿದ್ದು, ಈ ವಲಯದ ನಿವಾಸಿಗಳ ಗಂಟಲ ದ್ರವವನ್ನು ಸಂಗ್ರಹಿಸಲು ಸಂಚಾರಿ ಮಾದರಿ ಸಂಗ್ರಹ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು. 

ಆತಂಕ ಬೇಡ: ‘ಬುಧವಾರ ದೃಢಪಟ್ಟ 22 ಪ್ರಕರಣಗಳಲ್ಲಿ 15 ಪ್ರಕರಣಗಳು, ಸೋಂಕಿತರ ಸಂಪರ್ಕದಲ್ಲಿದ್ದವರು. ನಾಲ್ವರು ಹೊಸಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲ ಮೈಸೂರು, ಬೆಂಗಳೂರಿಗೆ ಹೋಗಿ ಬಂದವರು. ಹಾಗಾಗಿ, ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ. ಅಗತ್ಯವಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು