ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಭಾನುವಾರ ಚಾಮುಂಡೇಶ್ವರಿ ಅಮ್ಮನವರ ಕೊಂಡೋತ್ಸವ ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ದೇವಿಗೆ ಬಗೆಬಗೆ ಹೂಗಳ ಸಿಂಗಾರ ಹಾಗೂ ಆಭರಣಗಳ ಸಿಂಗಾರ ಮಾಡಿ ನೈವೇದ್ಯ ಸಲ್ಲಿಸಲಾಯಿತು. ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ದೇವಸ್ಥಾನದಲ್ಲಿ ಹೋಮ ಹವನ, ಮಹಾ ಮಂಗಳಾರತಿ ಹಾಗೂ ಅಭಿಷೇಕ ಪೂಜೆ ಪೂರೈಸಲಾಯಿತು. ತಳಿರು ತೋರಣಗಳಿಂದ ಅಲಂಕರಿಸಿದ ದೇವಳದಲ್ಲಿ ಬಣ್ಣದ ರಂಗೂಲಿ ಇಟ್ಟು ದೇವರನ್ನು ಪ್ರಾರ್ಥಿಸಲಾಯಿತು.
ಭಕ್ತರು ಸುವರ್ಣಾ ನದಿ ತಟದದಲ್ಲಿ ಮಿಂದು, ಮಡಿಯುಟ್ಟು ದೇವಿಗೆ ಹಣ್ಣುಕಾಯಿ ಪೂಜೆ ಸಲ್ಲಿಸಿದರು. ಧೂಪ ದೀಪ ಬೆಳಗಿ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ತೀರ್ಥ– ಪ್ರಸಾದ ಸೇವಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಭಾಗಿಯಾದರು.
ಗುಡಿಯ ಮುಂಭಾಗ ಇಳಿ ಸಂಜೆ ನಡುವೆ ನಡೆದ ಕೊಂಡೋತ್ಸವದಲ್ಲಿ ಭಕ್ತರ ಕಲರವ ಮುಗಿಲು ಮುಟ್ಟಿತ್ತು. ಹೆಬ್ಬರೆ ಶಬ್ದ, ಮಂಗಳ ವಾದ್ಯದ ನೀನಾದ ನಡುವೆ ಯುವ ಜನರು ಹೆಜ್ಜೆಹಾಕಿದರು. ಮಹಿಳೆಯರು ಮತ್ತು ಮಕ್ಕಳು ಆರತಿ ತಟ್ಟೆ ಹಿಡಿದು, ದೇವರ ದರ್ಶನಕ್ಕೆ ಕಾಯುತ್ತಿದ್ದರು. ಸಪ್ತ ಸಹೋದರಿಯರ ಸಂಗಡ ಚಾಮುಂಡಾಂಬೆಯೂ ಕಾಣಿಸಿಕೊಂಡಾಗ ಭಕ್ತರು ಹೂ, ಹಣ್ಣು ತೂರಿ ಸಂಭ್ರಮಿಸಿದರು. ಅರ್ಚಕರು ಕೊಂಡಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ನಿಗಿನಿಗಿ ಕೆಂಡದ ನಡುವೆ ಹಾಯ್ದರು, ಭಕ್ತ ಸಮೂಹ ಕೊಂಡದ ಕುಳಿಗೆ ಧೂಪ ಸಿಂಪಡಿಸಿ, ಆಲಯದ ಸುತ್ತಲೂ ಸುಗಂಧ ತುಂಬಿದರು. ಅಪಾರ ಭಕ್ತರ ಜಯಘೋಷಗಳ ನಡುವೆ ದೇವಿಯ ಭಕ್ತರು ದೇವಳ ಪ್ರವೇಶಿಸಿ ತೀರ್ಥ ಚಿಮುಕಿಸಿಕೊಂಡು ಶಾಂತರಾದರು.
ಸಂಜೆ ಮೆರವಣಿಗೆ: ಕೊಂಡೋತ್ಸವದ ನಂತರ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಂಗಳವಾದ್ಯದ ನಡುವೆ ಸತ್ತಿಗೆ ಸೂರಿಪಾನಿ ಮತ್ತು ಹೆಬ್ಬರೆ ಹೊತ್ತ ಭಕ್ತರು ಜನಪದ ನೃತ್ಯ ಮಾಡುತ್ತ ಸಾಗಿದರು. ಮಹಿಳೆಯರು ಪೂಜೆ ಸಲ್ಲಿಸಿ ಪುನೀತರಾದರು. ಎರಡು ತಿಂಗಳಿಂದ ಆಯೋಜಿಸಿದ್ದ ಧಾರ್ಮಿಕ ಆಚರಣೆಗಳು ಸಂಪನ್ನಗೊಂಡಿತು ಎಂದು ಗ್ರಾಮಸ್ಥರು ಹೇಳಿದರು.
ಗ್ರಾಮಸ್ಥರು, ಸಂಘ-ಸಂಸ್ಥೆಯ ಮುಖಂಡರು ಹಾಗೂ ಪೊಲೀಸರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.