ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರು ಜಾತ್ರೆಗೆ ಚಾಲನೆ; ಬೆಳಗಿದ ಚಂದ್ರಮಂಡಲ

29ರವರೆಗೆ ಸಿದ್ದಪ್ಪಾಜಿ ಜಾತ್ರೆ, ವೈಭಯುತ ಕ್ಷಣೆಗೆ ಸಾವಿರಾರು ಭಕ್ತರು ಸಾಕ್ಷಿ
Published 25 ಜನವರಿ 2024, 18:29 IST
Last Updated 25 ಜನವರಿ 2024, 18:29 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಗುರುವಾರ ರಾತ್ರಿ ಚಂದ್ರಮಂಡಲೋತ್ಸವದ ಮೂಲಕ ವಿಧ್ಯುಕ್ತ ಚಾಲನೆ ಸಿಕ್ಕಿತು. ವಿಜೃಂಭಣೆಯಿಂದ ನಡೆದ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಹುಣ್ಣಿಮೆಯ ದಿನವಾದ ಗುರುವಾರ ರಾತ್ರಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉತ್ಸವ ಆರಂಭವಾಯಿತು.

ರಾತ್ರಿ 9 ಗಂಟೆಗೆ ಗುರುಮಠದಲ್ಲಿ ಕುರುಬನಕಟ್ಟೆ ಲಿಂಗಯ್ಯ, ಚೆನ್ನಯ್ಯ ಹಾಗೂ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಕಂಡಾಯಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ತಮಟೆ ನಗಾರಿ ಛತ್ರಿ ಚಾಮರಗಳೊಂದಿಗೆ ಕಂಡಾಯದ ಮೆರವಣಿಗೆ ಸಾಗಿ ಗದ್ದುಗೆಯ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಕಂಡಾಯಗಳನ್ನು ಗದ್ದುಗೆಯಲ್ಲಿರಿಸಿ ಪೂಜೆ ನೆರವೇರಿಸಲಾಯಿತು.

ಗದ್ದುಗೆ ಮುಂಭಾಗ ಇರುವ ಕಟ್ಟೆಯ ಮೇಲೆ ಇರಿಸಲಾಗಿದ್ದ, ವಿವಿಧ ಹೂವುಗಳಿಂದ ಅಲಂಕಾರಗೊಂಡಿದ್ದ ಬಿದಿರಿನ ಅಚ್ಚೆ, ಎಣ್ಣೆ ಬತ್ತಿ ಹಾಕಿದ್ದ ಚಂದ್ರಮಂಡಲಕ್ಕೆ ಬೊಪ್ಪೇಗೌಡನಪುರದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸ್‌ ಅವರು ಕರ್ಪೂರದ ಆರತಿ ಬೆಳಗಿ, ಪೂಜೆ ಸಲ್ಲಿಸಿದರು. ರಾತ್ರಿ 11.20ಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ಸಿದ್ದಪ್ಪಾಜಿಗೆ ಜೈಕಾರ: ಚಳಿಯನ್ನು ಲೆಕ್ಕಿಸದೆ ತಾಲ್ಲೂಕು, ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಭಕ್ತಾದಿಗಳು ದೇವಾಲಯದ ಸುತ್ತಮುತ್ತ ಹಾಗೂ ಮರ ಗಿಡಗಳನ್ನು ಏರಿ ಕುಳಿತು ಚಂದ್ರಮಂಡಲ ಉತ್ಸವವನ್ನು ಕಣ್ತುಂಬಿಕೊಂಡರು.

ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದಂತೆಯೇ ಭಕ್ತರು, ಸಿದ್ದಪ್ಪಾಜಿಗೆ ಜೈಕಾರ ಹಾಕಿದರು. ಮಂಡಲವು ಹೊತ್ತಿ ಉರಿಯುವವರೆಗೂ ಭಕ್ತರ ಉದ್ಘೋಷ ನಿಂತಿರಲಿಲ್ಲ.  

‘ಪ್ರತಿವರ್ಷ ಕುಟುಂಬ ಸಮೇತವಾಗಿ ಬಂದು ಐದು ದಿನಗಳ ಕಾಲ ಜಾತ್ರೆಯಲ್ಲಿ ಭಾಗಿಯಾಗಿ ಸಿದ್ದಪ್ಪಾಜಿಯವರಿಗೆ ಹರಕೆ ತೀರಿಸಿ ಹೋಗುವುದು ನಮ್ಮ ಸಂಪ್ರದಾಯ. ಅದರಂತೆ ಈ ವರ್ಷವೂ ಬಂದಿದ್ದೇವೆ’ ಎಂದು ಚನ್ನಪಟ್ಟಣದಿಂದ ಬಂದಿದ್ದ ಈಶ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಬಿಗಿ ಭದ್ರತೆ: ದೇವಾಲಯದ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. 

ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದರಿಂದ ಭಕ್ತರು ಪ್ರಾಣಿಗಳನ್ನು ಕೊಂಡು ಹೋಗದಂತೆ ತಡೆಯಲು ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು, ಪೊಲೀಸ್‌ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿ ಸಲಾಗಿದೆ. ಸಿಬ್ಬಂದಿ ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡುತ್ತಿದ್ದಾರೆ.

ವಾಹನ ದಟ್ಟಣೆ: ವಾಹನ ದಟ್ಟಣೆ ತಡೆಯುವುದಕ್ಕಾಗಿ ಜಿಲ್ಲಾಡಳಿತ ಏಕಮುಖ ಸಂಚಾರ ವ್ಯವಸ್ಥೆ ಮಾಡಿದೆ. ಹಾಗಿದ್ದರೂ, ಚಂದ್ರಮಂಡಲದಲ್ಲಿ ಭಾಗಿಯಾಗಲು ಭಾರಿ ಸಂಖ್ಯೆಯಲ್ಲಿ ಭಕ್ತರು ವಾಹನಗಳಲ್ಲಿ ಬಂದಿದ್ದರಿಂದ  2 ಕಿ.ಮೀ ಉದ್ದದವರೆಗೂ ಸರತಿ ಸಾಲಿನಲ್ಲಿ ವಾಹನಗಳು ನಿಂತಿದ್ದವು. ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಟ್ಟರು. 

ಶಾಸಕ ಭಾಗಿ: ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಉತ್ಸವದಲ್ಲಿ ಭಾಗಿಯಾದರು. 

ಐದು ಹಗಲು ಮತ್ತು ಐದು ರಾತ್ರಿ ನಡೆಯುವ ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ  ಇದೇ 29ರವರೆಗೆ ಜರುಗಲಿದೆ.  

ಉತ್ತರಕ್ಕೆ ವಾಲಿದ ಚಂದ್ರಮಂಡಲ

ಅಗ್ನಿ ಸ್ಪರ್ಶವಾಗುತ್ತಿದ್ದಂತೆಯೇ ಧಗ ಧಗ ಹೊತ್ತಿ ಉರಿದ ಚಂದ್ರಮಂಡಲದ ಅಗ್ನಿ ಜ್ವಾಲೆ ಕೊನೆಗೆ ಉತ್ತರ ದಿಕ್ಕಿನತ್ತ ವಾಲಿತು. 

ಚಂದ್ರಮಂಡಲದ ಬೆಂಕಿ ಯಾವ ದಿಕ್ಕಿಗೆ ವಾಲುತ್ತದೆಯೋ, ಆ ಭಾಗದಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT