ಭಾನುವಾರ, ಆಗಸ್ಟ್ 1, 2021
27 °C
ಶೀಘ್ರದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಸಲ್ಲಿಸಲಿರುವ ಅಧಿಕಾರಿಗಳು

ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಸರ್ವೆ ಪೂರ್ಣ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಎರಡು ತಿಂಗಳುಗಳಿಂದ ನಡೆಯುತ್ತಿರುವ ಪುನರ್ವಸತಿ ಸ್ಥಳ ಹಾಗೂ ಗ್ರಾಮದ ಸರ್ವೆ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಅರಣ್ಯ ಇಲಾಖೆ ಶೀಘ್ರದಲ್ಲೇ ಪ್ರಧಾನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವರದಿ ಸಲ್ಲಿಸಲಿದೆ.

ಸ್ಥಳಾಂತರ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡಿದ ನಂತರ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಚಂಗಡಿಯಲ್ಲಿ ಪುನರ್ವಸತಿ ಸಂಬಂಧ ಸಭೆ ನಡೆದಿತ್ತು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಪುನರ್ವಸತಿ ಸಮಿತಿ ಸಭೆಯೂ ನಡೆದಿತ್ತು. 

ಯೋಜನೆ ಅನುಷ್ಠಾನದ ಅಂಗವಾಗಿ ಒಂದೂವರೆ ತಿಂಗಳಿಂದ ಚಂಗಡಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಗುರುತಿಸಲಾಗಿರುವ ಮರಿಯಪುರ ಬಳಿಯ ಡೀಮ್ಡ್‌ ಅರಣ್ಯ ಪ್ರದೇಶದಲ್ಲಿ ಸರ್ವೆ ನಡೆಸಲಾಗುತ್ತಿದೆ. ಜೊತೆಗೆ ಚಂಗಡಿ ಗ್ರಾಮದ ಸರ್ವೆಯನ್ನೂ ಮಾಡಲಾಗಿದೆ. ಶೇ 95ರಷ್ಟು ಸರ್ವೆ ‌ಕಾರ್ಯ ಮುಕ್ತಾಯವಾಗಿದೆ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬಂದು ಸರ್ವೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ಇತರೆ ಪ್ರದೇಶಗಳಿಗೆ ಕೂಲಿ ಅರಸಿ ಹೋಗಿದ್ದ ಜನರು ಈಗ ಗ್ರಾಮಕ್ಕೆ ವಾಪಸ್ಸಾಗಿ ತಮ್ಮ ಮನೆ ಮತ್ತು ಜಮೀನುಗಳನ್ನು ಸರ್ವೆ ಮಾಡಿಸಿದ್ದಾರೆ. ಒಂದೂವರೆ ತಿಂಗಳಿನಿಂದ ಸತತವಾಗಿ ಈ ಕೆಲಸ ನಡೆಯುತ್ತಿದೆ. ಅಲ್ಲದೇ ಕುರಟ್ಟಿ ಹೊಸೂರು ಗ್ರಾಮಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯಿಂದಲೂ ಸರ್ವೆ ನಡೆಸಲಾಗಿದೆ. ಬೇಗ ಪುನರ್ವಸತಿ ಕಲ್ಪಿಸಿದಷ್ಟು ಗ್ರಾಮಸ್ಥರಿಗೆ ಅನುಕೂಲ’ ಎಂದು ಚಂಗಡಿ ಗ್ರಾಮದ ಮುಖಂಡ ಕರಿಯಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಉಪವಿಭಾಗಾಧಿಕಾರಿ ಕಚೇರಿ ಭೂಮಾಪನ ಸಿಬ್ಬಂದಿ ಸರ್ವೆ ನಡೆಸಿದ್ದಾರೆ. ಚಂಗಡಿ ಗ್ರಾಮದಲ್ಲಿ 450 ಜಮೀನು ಸರ್ವೆ ಮಾಡಲಾಗಿದೆ. ಅಲ್ಲದೇ ಅಲ್ಲಿರುವ ಬುಡಕಟ್ಟು ಕುಟುಂಬಗಳು ವಾಸಿಸುವ ಮನೆಯೂ ಸೇರಿದಂತೆ ಒಟ್ಟು 250 ಮನೆಗಳ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಪುನರ್ವಸತಿ ಕಲ್ಪಿಸಲು ಗುರುತಿಸಿರುವ ಮರಿಯಪುರ ಬಳಿಯ ಅರಣ್ಯ ಪ್ರದೇಶದ ಸರ್ವೆಯೂ ಮುಗಿದಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಮಾಹಿತಿ ನೀಡಿದರು.  

ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಚಂಗಡಿ ಗ್ರಾಮ ಮಲೆಮಹದೇಶ್ವರ ವನ್ಯಧಾಮದ ದಟ್ಟಾರಣ್ಯದೊಳಗಿದ್ದು  ಇಲ್ಲಿನ ಜನರು ಅಗತ್ಯ ಮೂಲಸೌಕರ್ಯದಿಂದ ವಂಚಿತಗೊಂಡು ಬದುಕುತ್ತಿದ್ದರು. ನಮಗೆ ಮೂಲಸೌಕರ್ಯ ಒದಗಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿದ್ದ ಗ್ರಾಮಸ್ಥರು ಸಾಕಷ್ಟು ಬಾರಿ ಚುನಾವಣೆಗಳನ್ನು ಬಹಿಷ್ಕರಿಸಿದ್ದರು.

ಕಳೆದ ವರ್ಷ ಅರಣ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ ಇಲ್ಲಿನ ಗ್ರಾಮವನ್ನು ಬಿಟ್ಟು ಬಂದರೆ ನಿಮಗೆ ಸೂಕ್ತ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಇದಕ್ಕೆ ಒಪ್ಪಿದ್ದ ಗ್ರಾಮಸ್ಥರು, ಗ್ರಾಮ ತೊರೆಯಲು ಸಮ್ಮತಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು