ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮರಥಗಳ ನಿರ್ಮಾಣಕ್ಕೆ ಮತ್ತಷ್ಟು ವೇಗ

ಬಿಳಿಗಿರಿರಂಗನಾಥಸ್ವಾಮಿ, ಚಾಮರಾಜೇಶ್ವರ ದೇವಾಲಯಗಳಿಗೆ ಹೊಸ ರಥ, ಬೆಂಗಳೂರಿನಲ್ಲಿ ನಿರ್ಮಾಣ
Last Updated 8 ಸೆಪ್ಟೆಂಬರ್ 2020, 16:26 IST
ಅಕ್ಷರ ಗಾತ್ರ

ಚಾಮರಾಜನಗರ: ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಬೆಟ್ಟದ ಬಿಳಿರಂಗನಾಥಸ್ವಾಮಿ ಬ್ರಹ್ಮರಥ ಹಾಗೂ ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಎರಡೂ ದೇವಾಲಯಗಳ ರಥ ನಿರ್ಮಾಣಕ್ಕಾಗಿ ತಲಾ ₹1 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಕೊನೆಗೂ ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಕೆಲಸ ಆರಂಭವಾಗಿತ್ತು. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಮರಗಳನ್ನು ಕತ್ತರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು.

ಕತ್ತರಿಸಿದ ಮರದ ತುಂಡುಗಳು ಒಣಗಿದ ನಂತರ ಬೆಂಗಳೂರಿಗೆ ತರಲಾಗಿದ್ದು, ಎರಡೂ ನಿರ್ಮಾಣಗಳ ಹೊಣೆ ಹೊತ್ತಿರುವಶಿಲ್ಪಿ ಬಿ.ಎಸ್ ಬಡಿಗೇರ ಅವರ ವರ್ಕ್‌ಶಾಪ್‌ನಲ್ಲಿ ರಥ ಕಟ್ಟುವ ಕೆಲಸ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಎರಡು ರಥಗಳೂ ನಿರ್ಮಾಣವಾಗುತ್ತಿವೆ.

ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥಕ್ಕಾಗಿ 701.65 ಘನ ಅಡಿ ಹಾಗೂ ಚಾಮರಾಜೇಶ್ವರ ಬ್ರಹ್ಮ ರಥಕ್ಕಾಗಿ 691.91 ಘನ ಅಡಿ ತೇಗದ ಮರವನ್ನು ಕಾರವಾರ ಜಿಲ್ಲೆಯ ಕಿರವತ್ತು ಸರ್ಕಾರಿ ಮರಮುಟ್ಟು ಸಂಗ್ರಹಾಲಯದಿಂದ ಖರೀದಿಸಲಾಗಿದೆ.

ಪ್ರಧಾನ ಶಿಲ್ಪಿ ಬಿ.ಎಸ್.ಬಡಿಗೇರ ಹಾಗೂ ಮುಖ್ಯ ಶಿಲ್ಪಿ ಶಿವಕುಮಾರ ಬಡಿಗೇರ, ಎಚರೇಶ ಬಡಿಗೇರ ಅವರ ನೇತೃತ್ವದಲ್ಲಿ 10ರಿಂದ 13 ಶಿಲ್ಪಿಗಳು ರಥದ ನಿರ್ಮಾಣ, ಕೆತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಬಿಳಿಗಿರಿರಂಗನಾಥಸ್ವಾಮಿ ರಥ 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 29 ಫ್ರೇಮ್ ಗಳು ಬರಲಿವೆ. ಈಗಾಗಲೇ ಈ ಎಲ್ಲ ಫ್ರೇಮ್‌ಗಳ ಕೆಲಸ ಪೂರ್ಣವಾಗಿದೆ. ಚಾಮರಾಜೇಶ್ವರ ರಥ ಕೂಡ 16 ಅಡಿ ಎತ್ತರವಿರಲಿದ್ದು, 26 ಫ್ರೇಮ್‌ಗಳು ಇರಲಿವೆ. ಇದರಲ್ಲಿ 20 ಫ್ರೇಮ್‌ಗಳ ಕೆಲಸ ಪೂರ್ಣಗೊಂಡಿದೆ.

ಫ್ರೇಮ್ ಕೆಲಸಗಳ ಬಳಿಕ ಪುರಾಣದಲ್ಲಿ ಬರುವ ದೇವಾನುದೇವತೆಗಳ ವಿಗ್ರಹ, ಇತರೆ ಕುಸರಿ ಕೆತ್ತನೆ ಕೆಲಸಗಳನ್ನು ಆರಂಭಿಸಬೇಕಿದೆ. ಇದಕ್ಕೂ ಮೊದಲು ರಥ ನಿರ್ಮಾಣವಾಗುತ್ತಿರುವ ಕಾರ್ಯಗಾರಕ್ಕೆ ದೇವಾಲಯದ ಆಗಮಿಕರನ್ನು ಕರೆದೊಯ್ದು ರಥ ನಿರ್ಮಾಣ ಕಾರ್ಯ ಪರಿಶೀಲಿಸಿ ಸೂಕ್ತ ಸಲಹೆಗಳನ್ನು ಪಡೆಯುವಂತೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮುಂಬರುವ ರಥೋತ್ಸವಕ್ಕೆ ಸಿದ್ಧ: ಡಿ.ಸಿ.ವಿಶ್ವಾಸ

‘ಭಕ್ತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಚಾರಿತ್ರಿಕ, ಪುರಾಣ ಪ್ರಸಿದ್ದ ಚಾಮರಾಜೇಶ್ವರ ಹಾಗೂ ಬಿಳಿಗಿರಿರಂಗನಾಥಸ್ವಾಮಿ ರಥ ನಿರ್ಮಾಣ ಕೆಲಸ ವೇಗದಿಂದ ನಡೆದಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುವ ಚಿತ್ತಾ ನಕ್ಷತ್ರ ಪುಣ್ಯ ದಿನದಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ನಡೆದುಕೊಂಡು ಬಂದಿದೆ. ಅದೇ ರೀತಿ ಚಾಮರಾಜೇಶ್ವರ ರಥೋತ್ಸವವು ಆಷಾಢ ಮಾಸದಲ್ಲಿ ನಡೆಯಲಿದೆ. ಈ ಎರಡೂ ರಥಗಳ ನಿರ್ಮಾಣ ಕೆಲಸವು ಪೂರ್ಣಗೊಂಡು ನೂತನ ರಥಗಳೊಂದಿಗೆ ಮುಂಬರುವ ಬ್ರಹ್ಮರಥೋತ್ಸವ ನಡೆಯಲಿದೆ’ ಎಂದು ಜಿಲ್ಲಾಧಿಕಾರಿಯವರಾದ ಡಾ.ಎಂ.ಆರ್.ರವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT