ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕನಕಗಿರಿ ಉಳಿಸಿದ್ದ ಚಾರುಕೀರ್ತಿ ಭಟ್ಟಾರಕರು

ಜಿಲ್ಲೆಯ ಏಕೈಕ ಜೈನ ಮಠಕ್ಕೆ ಸ್ವಾಮೀಜಿ ನೇಮಕ; ಚಾಮರಾಜನಗರದೊಂದಿಗೆ ಅವಿನಾಭಾವ ನಂಟು
Last Updated 24 ಮಾರ್ಚ್ 2023, 5:09 IST
ಅಕ್ಷರ ಗಾತ್ರ

ಚಾಮರಾಜನಗರ: ಗುರುವಾರ ಜಿನೈಕ್ಯರಾದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೂ, ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ನಂಟಿದೆ. ಜಿಲ್ಲೆಯ ಏಕೈಕ ಜೈನ ಮಠ ತಾಲ್ಲೂಕಿನ ಕನಕಗಿರಿ ಪೀಠ ವನ್ನು ಉಳಿಸಿ ಬೆಳೆಸಿದವರು ಅವರು.

ಚಾಮರಾಜನಗರ, ಉಮ್ಮತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಗಳಲ್ಲಿ ಜೈನ ಬಸದಿಗಳ ರಕ್ಷಣೆ, ಅಭಿ ವೃದ್ಧಿಗೆ ಚಾರುಕೀರ್ತಿ ಭಟ್ಟಾರಕರು ಶ್ರಮಿಸಿದ್ದಾರೆ. ಜಿಲ್ಲೆ ಹಾಗೂ ಇಲ್ಲಿನ ಜೈನ ಸಮುದಾಯದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಅವರು ಆಗಾಗ ಕನಕಗಿರಿಗೆ, ಬಸದಿಗಳಿಗೆ ಭೇಟಿ ನೀಡುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಜರಿ ಖಚಿತವಾಗಿತ್ತು.

‌ಕನಕಗಿರಿಯನ್ನು ರಕ್ಷಿಸಿದರು: ಜೈನರ ಕ್ಷೇತ್ರವಾಗಿದ್ದ ಕನಕಗಿರಿ ಅನಾಥವಾಗಿದ್ದ ಸಂದರ್ಭದಲ್ಲಿ, ಅದರ ಕಾಯಕಲ್ಪಕ್ಕೆ ಸಂಕಲ್ಪ ಮಾಡಿ, ಕ್ಷೇತ್ರಕ್ಕೆ ಇಂದಿನ ಭುವನಕೀರ್ತಿ ಭಟ್ಟಾರಕರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿ, ಅಭಿವೃದ್ಧಿಗೆ ಕಾರಣೀಭೂತರಾದವರು ಚಾರುಕೀರ್ತಿ ಭಟ್ಟಾರಕ‌ ಸ್ವಾಮೀಜಿ.

ರಾಜ್ಯದಲ್ಲಿ ಭಟ್ಟಾರಕ ಪರಂಪ‍ರೆ ಮುನ್ನಡೆಸುತ್ತಿದ್ದ ಚಾರುಕೀರ್ತಿ ಸ್ವಾಮೀಜಿ, 14 ಜೈನ ಕ್ಷೇತ್ರಗಳಿಗೆ ಪೀಠಾಧಿಪತಿಗಳನ್ನು ನೇಮಿಸಿದ್ದರು. ಅದರಲ್ಲಿ ಕನಕಗಿರಿ ಪೀಠವೂ ಒಂದು.

‘ಕ್ಷೇತ್ರದಲ್ಲಿ ಈ ಹಿಂದೆ ಭದ್ರಬಾಹು ಎಂಬ ಮುನಿಗಳಿದ್ದರು. ಅವರ ನಿಧನದ ನಂತರ ಕ್ಷೇತ್ರ ಅನಾಥವಾಯಿತು. ಕನಕಗಿರಿ ಬೆಟ್ಟ, ಆ ಪ್ರದೇಶದಲ್ಲಿ ಕಲ್ಲು ಸಾಕಷ್ಟು ಪ್ರಮಾಣದಲ್ಲಿ ಇದ್ದುದರಿಂದ ಗಣಿ ಉದ್ಯಮಿಗಳ ಕಣ್ಣು ಬಿದ್ದಿತ್ತು. ಜೈನ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, 1997ರಲ್ಲಿ ಭುವನಕೀರ್ತಿ ಭಟ್ಟಾರಕರನ್ನು ಇಲ್ಲಿನ ಸ್ವಾಮೀಜಿಯಾಗಿ ನೇಮಿಸಿದರು. ಈ 26 ವರ್ಷದಲ್ಲಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿ, ಜೈನ ಸಮುದಾಯದವರ ಪ್ರಮುಖ ತೀರ್ಥ ಕ್ಷೇತ್ರವಾಗಿ ಬದಲಾಗಿದೆ’ ಎಂದು ಬರಹಗಾರ ಲಕ್ಷ್ಮಿ ನರಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೈನ ಕ್ಷೇತ್ರ ಇರುವ ಕಾರಣಕ್ಕೆ ಕನಕಗಿರಿಯಲ್ಲಿ ಗಣಿಗಾರಿ ಕೆಯೂ ನಿಂತು ಪರಿಸರವೂ ಉಳಿಯಿತು. ಇದಕ್ಕೆಲ್ಲ ಕಾರಣ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ. ಅವರ ಈ ಕಾರ್ಯವನ್ನು ಸದಾ ನೆನೆಯಲೇ ಬೇಕು’ ಎಂದರು.

‘ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ದೀಕ್ಷೆ ನೀಡಿ, 1997ರ ಜೂನ್‌ 12ರಂದು ಕನಕಗಿರಿಯಲ್ಲಿ ಪಟ್ಟಾಭಿಷೇಕ ಮಾಡಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು. ನಮ್ಮ ಮಠದೊಂದಿಗೆ ಹಾಗೂ ಜಿಲ್ಲೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು’ ಎಂದು ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಎಂ.ಪಿ.ನಿರ್ಮಲ್‌ ಕುಮಾರ್‌ ಜೈನ್‌ ಹೇಳಿದರು.

ಜಿಲ್ಲೆಗೆ ಹಲವು ಬಾರಿ ಭೇಟಿ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಕನಕಗಿರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

‘ಚಾಮರಾಜನಗರದ ಜೈನ ಬಸದಿಯ ಪಂಚಕಳಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಹಳೆ ಬಸ್‌ ನಿಲ್ದಾಣದಲ್ಲಿರುವ ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ವಿಜಯಪಾರ್ಶ್ವನಾಥ ಬಸದಿ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಗಮನಕ್ಕೆ ತಂದು ಉಮ್ಮತ್ತೂರು ಬಸದಿ, ಕೆಲಸೂರು ಬಸದಿಗಳು ಅಭಿವೃದ್ಧಿಯಾಗುವಂತೆಯೂ ನೋಡಿಕೊಂಡಿದ್ದರು’ ಎಂದು ಲಕ್ಷ್ಮಿನರಸಿಂಹ ಮಾಹಿತಿ ನೀಡಿದರು.

ಕಳೆದ ವರ್ಷ ಕನಕಗಿರಿಯಲ್ಲಿ ನಡೆದ ಅತಿಶಯ ಮಹೋತ್ಸವ ಹಾಗೂ ಭುವನಕೀರ್ತಿ ಭಟ್ಟಾರಕರ ಪಟ್ಟಾಭಿಷೇಕ ರಜತ ಮಹೋತ್ಸವ ಕಾರ್ಯಕ್ರಮಕ್ಕೂ ಚಾರುಕೀರ್ತಿ ಭಟ್ಟಾರಕರು ಭಾಗವಹಿಸಬೇಕಿತ್ತು. ಆದರೆ, ಕಾಲುನೋವಿನ ಕಾರಣಕ್ಕೆ ಅವರು ಬಂದಿರಲಿಲ್ಲ.

ಕನಕಗಿರಿ ಕ್ಷೇತ್ರ, ಜೈನ ಬಸದಿಗಳು, ಜೈನ ಸಮಾಜದ ಅಭಿವೃದ್ಧಿಯಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಕೊಡುಗೆ ಸಾಕಷ್ಟಿದೆ ‌

-ನಿರ್ಮಲ್‌ ಕುಮಾರ್‌ ಜೈನ್‌, ಜೈನ ಸಮಾಜದ ಜಿಲ್ಲಾ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT