ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಚೆಕ್‌ಪೋಸ್ಟ್‌ ಆರಂಭ

ಮಲೆ ಮಹದೇಶ್ವರ ವನ್ಯಧಾಮದ ಕೌದಳ್ಳಿ ಬಳಿಯ ಧೂಪದಗುಂಡಿ ನಿರ್ಮಾಣ
Published 15 ಫೆಬ್ರುವರಿ 2024, 7:03 IST
Last Updated 15 ಫೆಬ್ರುವರಿ 2024, 7:03 IST
ಅಕ್ಷರ ಗಾತ್ರ

ಹನೂರು: ವನ್ಯಪ್ರಾಣಿ ಹಾಗೂ ಪರಿಸರ ಸಂರಕ್ಷಣಾ ದೃಷ್ಟಿಯಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ಹೆದ್ದಾರಿಯಲ್ಲಿ ಮತ್ತು ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಸಲುವಾಗಿ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಜಂಟಿಯಾಗಿ ತಾಲ್ಲೂಕಿನ ಕೌದಳ್ಳಿ ಬಳಿಯ ಧೂಪದ ಹುಂಡಿಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿವೆ. 

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಇತ್ತೀಚೆಗೆ ಚೆಕ್‌ಪೋಸ್ಟ್‌ ಉದ್ಘಾಟಿಸಿದ್ದಾರೆ. 

ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಪಾದಯಾತ್ರೆ ಹಾಗೂ ವಾಹನಗಳಲ್ಲಿ ಬರುವ ಭಕ್ತರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಊಟದ ತಟ್ಟೆಗಳು, ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು, ಮಜ್ಜಿಗೆ ಪ್ಯಾಕೆಟ್, ಇನ್ನಿತರೆ ತಿಂಡಿ ತಿನಿಸುಗಳು ವಸ್ತುಗಳನ್ನು ಅರಣ್ಯದಲ್ಲಿ ಎಸೆಯುತ್ತಿದ್ದರು. ಮಹದೇಶ್ವರ ಬೆಟ್ಟದಲ್ಲೂ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಆಗಿದೆ. 

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅರಣ್ಯ ಪ್ರದೇಶ ದಾಟುವ ಸಂದರ್ಭದಲ್ಲೇ ಭಕ್ತರು ಹಾಗೂ ಪ್ರವಾಸಿಗರ ವಾಹನಗಳನ್ನು ತಪಾಸಣೆ ಮಾಡುವುದು ಮತ್ತು ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಅವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಲು ಅರಣ್ಯ ಇಲಾಖೆ ಮತ್ತು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದ್ದವು.  

ಇದೇ 9ರಿಂದ ಚೆಕ್‌ಪೋಸ್ಟ್‌ ಕಾರ್ಯಾರಂಭ ಮಾಡಿದ್ದು, ಸದ್ಯ ವಾಹನ ಸವಾರರಿಗೆ, ಭಕ್ತರಿಗೆ ಪ್ಲಾಸ್ಟಿಕ್‌ ಬಳಕೆಯ ವಿರುದ್ಧ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೆಲವು ತಿಂಗಳು ಜಾಗೃ‌ತಿ: ಡಿಸಿಎಫ್‌

ಶಿವರಾತ್ರಿ ಯುಗಾದಿ ಸೇರಿದಂತೆ ಬೆಟ್ಟದಲ್ಲಿ ನಡೆಯುವ ವಿವಿಧ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಜಾತ್ರೆಯ ನಂತರ ಅವರು ಅರಣ್ಯದಲ್ಲಿ ಎಸೆದಿರುವ ಪ್ಲಾಸ್ಟಿಕ್‌ ವಸ್ತುಗಳನ್ನು ಸಿಬ್ಬಂದಿ ಸಂಗ್ರಹಿಸುತ್ತಾರೆ. ಇದನ್ನು ತಪ್ಪಿಸಲು ಭಕ್ತರು ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಮಾಡಿದರೂ ಅರಣ್ಯದಲ್ಲಿ ಮತ್ತು ಬೆಟ್ಟದಲ್ಲಿ ಎಲ್ಲೆಂದರಲ್ಲಿ ಎಸೆಯದಂತೆ ಮಾಡಲು ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ತಿಂಗಳುಗಳ ಕಾಲ ನಾವು ಪ್ಲಾಸ್ಟಿಕ್‌ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲಿದ್ದೇವೆ. ಆ ಬಳಿಕ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವುದು ದಂಡವಿಧಿಸುವಂತಹ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಅವರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT