ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಪ್ಪಾಜಿ ಜಾತ್ರಾ ಸಂಭ್ರಮ ನಾಳೆಯಿಂದ

ಗುರುವಾರ ರಾತ್ರಿ ಚಂದ್ರಮಂಡಲದೊಂದಿಗೆ ಐದು ದಿನಗಳ ಉತ್ಸವಕ್ಕೆ ಚಾಲನೆ
ಅವಿನ್ ಪ್ರಕಾಶ್ ವಿ.
Published 24 ಜನವರಿ 2024, 4:32 IST
Last Updated 24 ಜನವರಿ 2024, 4:32 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಆರಂಭವಾಗಲು ಇನ್ನು ಒಂದು ದಿನವಷ್ಟೇ ಬಾಕಿ ಇದ್ದು, ತಾಲ್ಲೂಕು ಆಡಳಿತ ಹಾಗೂ ಸಿದ್ದಪ್ಪಾಜಿ ಮಠದ ಆಡಳಿತ ಅಂತಿಮ ಹಂತದ ಸಿದ್ಧತೆಗಳಲ್ಲಿ ತೊಡಗಿವೆ.

ಮಂಟೇಸ್ವಾಮಿ, ಸಿದ್ದಪ್ಪಾಜಿ ಒಕ್ಕಲಿನವರು ನಡೆದುಕೊಳ್ಳುವ ಈ ಜಾತ್ರೆ ವಿಶಿಷ್ಟ ಆಚರಣೆಗಳಿಂದ ರಾಜ್ಯದ ಗಮನ ಸೆಳೆಯುತ್ತದೆ. 25ರಿಂದ 29ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ. 

ಗುರುವಾರ ರಾತ್ರಿ ಜರುಗುವ ಚಂದ್ರಮಂಡಲೋತ್ಸದ ಮೂಲಕ ಜಾತ್ರೆಗೆ ಚಾಲನೆ ದೊರೆಯಲಿದೆ.  ಏಳು ಗ್ರಾಮಗಳ ಜನರು ಒಟ್ಟಾಗಿ ಸೇರಿ ಆಚರಿಸುವ ಈ ಆಚರಣೆಯಲ್ಲಿ ಚಂದ್ರಮಂಡಲೋತ್ಸವಕ್ಕೆ ವಿಶೇಷ ಆದ್ಯತೆ. ಚಿಕ್ಕಲ್ಲೂರು ಸುತ್ತಮುತ್ತಲಿನ ಬಾಣೂರು, ಬಾಳಗುಣಸೆ, ತೆಳ್ಳನೂರು, ಮಸ್ಕಯ್ಯನದೊಡ್ಡಿ, ಸುಂಡ್ರಳ್ಳಿ, ಕೊತ್ತನೂರು ಗ್ರಾಮಗಳ ಕುಲೇಳು ಹದಿನೆಂಟು ಸಮುದಾಯಗಳು ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟ ಆಚರಣೆಯೇ ಚಂದ್ರಮಂಡಲ ಉತ್ಸವ.

ಈ ಉತ್ಸವಕ್ಕೆ ಒಂದೊಂದು ಸಮುದಾಯದ ಜನರು ಒಂದೊಂದು ಸೇವೆ ಸಲ್ಲಿಸುವ ನಿಯಮವಿದೆ. ಚಂದ್ರಮಂಡಲವೆಂಬ ಬಿದಿರಿನ ಕಿರೀಟ, ತೇರಿನಜ್ಯೋತಿಯ ಆಕೃತಿ ನಿರ್ಮಾಣಕ್ಕೆ ತೆಳ್ಳನೂರು ಗ್ರಾಮದ ಜನರು ಬೊಂಬು, ಬಿದಿರು ನೀಡಿದರೆ, ಮಸ್ಕಯ್ಯನದೊಡ್ಡಿ ಗ್ರಾಮಸ್ಥರು ಎಣ್ಣೆ, ಪಂಜು, ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರುಮಡಿ ಬಟ್ಟೆಯನ್ನು ನೀಡುತ್ತಾರೆ. ಹೀಗೆ ಎಲ್ಲ ಗ್ರಾಮಗಳು ನೀಡಿದ ವಸ್ತುಗಳನ್ನು ಸಂಗ್ರಹಿಸಿ ಶಾಗ್ಯ ಗ್ರಾಮದ ಗುರುಮನೆ ನೀಲಗಾರರು ಚಂದ್ರಮಂಡಲವನ್ನು ತಯಾರಿಸುತ್ತಾರೆ. 

ಐದು ಹಗಲು, ಐದು ರಾತ್ರಿ: ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಜಿಲ್ಲೆಯಿಂದಲ್ಲದೇ ಹೊರ ಜಿಲ್ಲೆಗಳಿಂದ ಸಿದ್ದಪ್ಪಾಜಿ ಒಕ್ಕಲಿಯವರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಕುಟುಂಬ ಸಮೇತರಾಗಿ ಇಲ್ಲೇ ವಾಸ್ತವ್ಯ ಹೂಡಿ ಸಿದ್ದಪ್ಪಾಜಿಗೆ ವಿವಿಧ ಹರಕೆ ಸೇವೆ ಸಲ್ಲಿಸುತ್ತಾರೆ.  ಐದು ಹಗಲು ಹಾಗೂ ಐದು ರಾತ್ರಿ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ. ಜಾತ್ರೆ ಮುಗಿದ ನಂತರವೂ 10 ದಿನಗಳವರೆಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. 

ಜನವರಿ 25 ರಿಂದ 29 ರವರೆಗೆ ಜಾತ್ರೆ ನಡೆಯಲಿದ್ದು, ದೇವಸ್ಥಾನ ಹಾಗೂ ಮಠದ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಅನೇಕ ಚರ್ಚೆಗಳನ್ನೂ ನಡೆಸಿದ್ದಾರೆ.

25ರಂದು ಮೊದಲನೇ ದಿನ ರಾತ್ರಿ ಚಂದ್ರಮಂಡಲ ಉತ್ಸವ ನಡೆಯಲಿದೆ. ಎರಡನೇ ದಿನ ಹುಲಿವಾಹನೋತ್ಸವ, ದೊಡ್ಡವರ ಸೇವೆ ನಡೆಯಲಿದೆ. ಮೂರನೇ ದಿನ ರುದ್ರಾಕ್ಷಿ ಮಂಟಪೋತ್ಸವ, ಮುಡಿಸೇವೆ ಅಥವಾ ನೀಲಗಾರರ ದೀಕ್ಷೆ ನಡೆಯುತ್ತದೆ. ನಾಲ್ಕನೇ ದಿನ ಗಜವಾಹನೋತ್ಸವ, ಪಂಕ್ತಿ ಸೇವೆ ನಡೆಯುತ್ತಿದೆ.

ಪಂಕ್ತಿಸೇವೆಯಂದು ಭಕ್ತರು ಕುಟುಂಬ ಸಮೇತರಾಗಿ ಬಂದು ಮಾಂಸದ ಅಡುಗೆ ಸಿದ್ದಪಡಿಸಿ ಸಿದ್ದಪ್ಪಾಜಿಗೆ ಎಡೆ ಇಟ್ಟು ನಂತರ ಒಟ್ಟಾಗಿ ಭೋಜನ ಮಾಡುತ್ತಾರೆ.  ಐದನೇ ದಿನ ಮುತ್ತುರಾಯರ ಸೇವೆ ಅಥವಾ ಕಡೆ ಬಾಗಿಲ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳುತ್ತದೆ.

ಸೆಕ್ಟರ್‌ ಅಧಿಕಾರಿಗಳ ನಿಯೋಜನೆ: ಜಾತ್ರೆ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಡಳಿತ 18 ಮಂದಿ ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಿದೆ. 

ಚಿಕ್ಕಲ್ಲೂರಿಗೆ ಹೋಗುವ ರಸ್ತೆಗಳಲ್ಲಿ ಏಳು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಅಧಿಕಾರಿಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. 

ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲಿಸಲು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ. ದೇವಾಲಯದ ಆವರಣದಲ್ಲಿ ಸ್ವಚ್ಛತೆ, ಮೂಲಭೂತ ಸೌಕರ್ಯ ಕಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು  ತಹಶೀಲ್ದಾರ್ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಣಿ ಬಲಿ ನಿಷೇಧಿಸಿ ಆದೇಶ

ಚಾಮರಾಜನಗರ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ ಪಕ್ಷಿ ಬಲಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆದೇಶ ಹೊರಡಿಸಿದ್ದಾರೆ. ‘ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ನಿಯಮಗಳು 1963 ರ ಅನ್ವಯ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿಗೆ ವಿರೋಧವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ 25 ರಿಂದ 30ರವರೆಗೆ ಜಾತ್ರೆ ಜರುಗುವ ದೇವಸ್ಥಾನದ ಆವರಣದಲ್ಲಿ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಭಕ್ತಾದಿಗಳು ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ 

ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 25 ರಿಂದ 30ರವರೆಗೆ ತಾತ್ಕಾಲಿಕವಾಗಿ ಏಕಮುಖ ಮಾರ್ಗದಲ್ಲಿ ವಾಹನ ಸಂಚರಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ಚಿಕ್ಕಲ್ಲೂರು ಗ್ರಾಮಕ್ಕೆ ಒಳ ಬರಲು ಏಕಮುಖವಾಗಿ ಕೊತ್ತನೂರು ಗ್ರಾಮ- ಬಾಣೂರು ಕ್ರಾಸ್- ಬಾಣೂರು- ಸುಂಡ್ರಳ್ಳಿ ಮಾರ್ಗವಾಗಿ ಸಂಚರಿಸಬೇಕು. ಚಿಕ್ಕಲ್ಲೂರು ಗ್ರಾಮದಿಂದ ಹೊರ ಹೋಗಲು ಚಿಕ್ಕಲ್ಲೂರು- ಬಾಣೂರು ಕ್ರಾಸ್- ಕೊತ್ತನೂರು ಮಾರ್ಗದಲ್ಲಿ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT