ಬುಧವಾರ, ಮಾರ್ಚ್ 29, 2023
23 °C
ಮಕ್ಕಳ ಮೈತ್ರಿ ಸಪ್ತಾಹ ಅಂಗವಾಗಿ ಜಾಗೃತಿ ಜಾಥಾ, ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಜಿಲ್ಲೆಯಾದ್ಯಂತ ಮಕ್ಕಳ ದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಮಕ್ಕಳ ದಿನವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. 

ಶಾಲೆಗಳಲ್ಲಿ ‘ಚಾಚಾ’ ಜವಾಹರಲಾಲ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಕ್ಕಳ ಸಂತೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಚಾಮರಾಜನಗರದಲ್ಲಿ ಮಕ್ಕಳ ಮೈತ್ರಿ ಸಪ್ತಾಹದ ಅಂಗವಾಗಿ  ನಮ್ಮ ನಡಿಗೆ ಮಕ್ಕಳ ರಕ್ಷಣೆ ಕಡೆಗೆ ‌‌‌ಜಾಥಾ ನಡೆಯಿತು. 

ಸ್ವಯಂ ಸೇವಾ ಸಂಸ್ಥೆ ಒಡಿಪಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಥಾಗೆ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಹಸಿರು ನಿಶಾನೆ ತೋರಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಕ್ಕಳು ಸಮಾಜದಲ್ಲಿರುವ ಮೂಢನಂಬಿಕೆಗಳಿಗೆ ಬಲಿಯಾಗಬಾರದು.  ಅವುಗಳ ಬಗ್ಗೆ ಜಾಗೃತಿ ಹೊಂದಬೇಕು’ ಎಂದರು. 

‘ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯ. 18 ವರ್ಷದ ಒಳಗಿರುವ ಎಲ್ಲರೂ ಮಕ್ಕಳೇ. ಅವರಿಗೆ ಯಾರಾದರೂ ತೊಂದರೆ ಕೊಡುತ್ತಿದ್ದರೆ ಮತ್ತು ಕೆಟ್ಟದಾಗಿ ನೋಡಿದ್ದೇ ಆದಲ್ಲಿ 112ಕೆ ಕರೆ ಮಾಡಿ. ಮಕ್ಕಳು, ಅವರ ಹಕ್ಕುಗಳನ್ನು ರಕ್ಷಿಸುವುದು ಪೊಲೀಸರು ಮತ್ತು ಮಕ್ಕಳ ಸಹಾಯವಾಣಿಯ ಕೆಲಸವಲ್ಲ, ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ’ ಎಂದರು.

‘ಶಿಕ್ಷಣ ಪಡೆಯುವುದ ಮಕ್ಕಳ ಪ್ರಮುಖ ಹಕ್ಕು. ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಬಾರದು. ವಿದ್ಯೆ ಪಡೆಯಬೇಕು’ ಎಂದು ಡಿವೈಎಸ್‌ಪಿ ಹೇಳಿದರು. 

ಕಾರ್ಮಿಕ ಇಲಾಖೆಯ ಅಧಿಕಾರಿ ಮಹೇಶ್, ಒಡಿಪಿ ಸಂಯೋಜಕಿ ಲತಾ  ಇತರರು ಇದ್ದರು. 

ಗಂಧದಗುಡಿ ಪ್ರದರ್ಶನ: ನಗರದ ಈಶ್ವರಿ ಟ್ರಸ್ಟ್‌ ಮಕ್ಕಳ ದಿನಾಚರಣೆ ಅಂಗವಾಗಿ ಜಾಲಹಳ್ಳಿಹುಂಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಗಂಧದಗುಡಿ ಚಿತ್ರದ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. 

ಟ್ರಸ್ಟ್‌ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ಕೊಟ್ಟು ಹಾಳುಮಾಡುವ ಬದಲು ಪರಿಸರ ಹಾಗೂ ಇನ್ನಿತರ ಒಳ್ಳೆಯ ವಿಷಯಗಳ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ತೋರಿಸಬೇಕು. ಇದರಿಂದ ಅವರ ಜ್ಞಾನ ವೃದ್ದಿಯಾಗುತ್ತದೆ. ಈ ಉದ್ದೇಶದಿಂದ ನಮ್ಮ ಸಂಸ್ಥೆಯ ವತಿಯಿಂದ ಜಾಲಹಳ್ಳಿ ಹುಂಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರದ ಬಗ್ಗೆ ತೆರೆ ಕಂಡಿರುವ ಗಂಧದಗುಡಿ ಚಿತ್ರವನ್ನು ಉಚಿತವಾಗಿ ತೋರಿಸಲಾಗಿದೆ’ ಎಂದರು.

ಸಂದರ್ಭದಲ್ಲಿ ಜಯಲಕ್ಷ್ಮಿ ವೆಂಕಟೇಶ್, ಮಕ್ಕಳು ಶಾಲಾ ಶಿಕ್ಷಕರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು