ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಟ್ಲರ್‌ ಸಿದ್ಧಾಂತಿ ಮೋದಿ ಕೈಯಲ್ಲಿ ಸಂವಿಧಾನ ಸುರಕ್ಷಿತವಿಲ್ಲ’

ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆ, ಮೋದಿ, ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
Published 12 ಏಪ್ರಿಲ್ 2024, 16:31 IST
Last Updated 12 ಏಪ್ರಿಲ್ 2024, 16:31 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಹಿಟ್ಲರ್‌, ಮುಸಲೋನಿ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು. ಮೋದಿ ಅವರ ಕೈಯಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಸುರಕ್ಷಿತವಾಗಿಲ್ಲ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಉಳಿಯಬೇಕಾದರೆ ಈ ದೇಶದ ಸಂವಿಧಾನ ಉಳಿಯಬೇಕು. ಅದಕ್ಕಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು. 

ಕೊಳ್ಳೇಗಾಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,  ‘ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯವರು ಬಡವರ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ವಿರೋಧಿಗಳು. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವನ್ನೇ ಬದಲಾಯಿಸಲು ಮೋದಿ ಸರ್ಕಾರ ಹೊರಟಿದೆ. ಸಂವಿಧಾನ ರಕ್ಷಣೆ, ಬಡವರು ಸೇರಿದಂತೆ ಎಲ್ಲರ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ’ ಎಂದು ಹೇಳಿದರು. 

ನುಡಿದಂತೆ ನಡೆಯದ ಬಿಜೆಪಿ: ‘ಮೋದಿ ಅವರು 10 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಪ್ರಧಾನಿಯಾಗುವುದಕ್ಕೂ ಮುಂಚೆ ಅವರು ಬಹಳಷ್ಟು ಹೇಳಿಕೊಂಡಿದ್ದರು. ಆದರೆ, 10 ವರ್ಷಗಳಲ್ಲಿ ಅದನ್ನು ಹೇಳಿದಂತೆ ಮಾಡಿದ್ದಾರೆಯೇ ಎಂಬುದನ್ನು ಜನರು ಪರಿಶೀಲಿಸಬೇಕು. ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು. ಖಾತೆಗೆ ₹15 ಲಕ್ಷ ಹಾಕುವಾಗಿ ಘೋಷಿಸಿದ್ದರು. ಕಪ್ಪು ಹಣ ಬಂತಾ? ಖಾತೆಗೆ ಜಮೆ ಆಯಿತಾ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಅದರಂತೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ 20 ಲಕ್ಷವೂ ಆಗಿಲ್ಲ. ಅಚ್ಚೇ ದಿನ್‌ ಬರುತ್ತದೆ ಎಂದಿದ್ದರು. 10 ವರ್ಷಗಳಲ್ಲಿ ಬಂತಾ? ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಎಂದು ಘೋಷಿಸಿದ್ದರು. ಆದರೆ, ಬಡವರು ಅಭಿವೃದ್ಧಿಯಾಗಲಿಲ್ಲ. ಅಂಬಾನಿ, ಅದಾನಿ, ಟಾಟಾ, ಬಿರ್ಲಾಗಳು ಅಭಿವೃದ್ಧಿ ಹೊಂದಿದರು’ ಎಂದು ಕಿಡಿಕಾರಿದರು. 

‘ಸ್ವಾಮಿನಾಥನ್‌ ವರದಿ ಜಾರಿಗೆ ತರಲಿಲ್ಲ. ಪೆಟ್ರೋಲ್‌, ಡೀಸೆಲ್‌ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಾಗಿದೆ. ರೈತರ ಆದಾಯ ದುಪ್ಪಟ್ಟು ಮಾಡುವ ಹೇಳಿಕೆಯೂ ಸುಳ್ಳಾಗಿದೆ. 10 ವರ್ಷಗಳ ಅವಧಿಯಲ್ಲಿ ಮೋದಿ ಪ್ರಧಾನಿಯಾಗಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಮತ್ತೆ 10 ವರ್ಷ ಪ್ರಧಾನಿಯಾಗಲು ಹೊರಟಿದ್ದಾರೆ. ಇಂತಹವರಿಗೆ ಮತ ಹಾಕಬೇಕಾ? ಬಿಜೆಪಿ ಯಾವಾಗಲೂ ನುಡಿದಂತೆ ನಡೆದಿಲ್ಲ. ಹಾಗಾಗಿ, ಬಿಜೆಪಿಗೆ ಮತ ಹಾಕಬೇಡಿ’ ಎಂದು ಕರೆ ನೀಡಿದರು.

ಸೋಲಿನ ಭಯದಿಂದ ಮೈತ್ರಿ: ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ. ಅದಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಎರಡೂ ಪಕ್ಷಗಳಿಗೆ ತತ್ವ, ಸಿದ್ಧಾಂತ ಇಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನೂ ರೂಪಿಸಿಕೊಂಡಿಲ್ಲ. ಕಾಂಗ್ರೆಸ್‌ ಸೋಲಿಸುವುದೊಂದೇ ಅವರ ಗುರಿ. ಬಡವರು, ರೈತರು, ಅಲ್ಪಸಂಖ್ಯಾತರು, ಮಹಿಳೆಯರ ಪರವಾಗಿ ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರಿಗೆ ಯಾವುದೇ ಸಾಧನೆಗಳಿಲ್ಲ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. 

‘ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಏನೂ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಹೇಳಿಕೊಳ್ಳುವುದಕ್ಕೇ ಸಾಧನೆಗಳೇ ಇಲ್ಲ. ಮೋದಿ ಬಿಟ್ಟರೆ ಚುನಾವಣಾ ವಿಷಯಗಳೇ ಇಲ್ಲ. ಮೋದಿ ಅವರ ಮುಖವಾಡ ಇಟ್ಟುಕೊಂಡು ‘ಮೋದಿಗೆ ಮತ‌ ಕೊಡಿ’ ಎಂದು ಕೇಳುತ್ತಿದ್ದಾರೆ’ ಎಂದು ಕುಟುಕಿದರು. 

‘ನಮಗೆ ಅಧಿಕಾರ ಕೊಟ್ಟರೆ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದೆವು. ಅದರಂತೆ ಸರ್ಕಾರ ರಚನೆಯಾಗುತ್ತಲೇ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಅನುಕೂಲವಾಗಿದೆ. ನುಡಿದಂತೆ ನಡೆದಿದ್ದೇವೆ. ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ₹1 ಲಕ್ಷ ಹಾಕುವುದಾಗಿ ಘೋಷಣೆ ಮಾಡಿದ್ದೇವೆ. ಸ್ವಾಮಿನಾಥನ್‌ ವರದಿ ಜಾರಿಗೆ ತರುವ ಭರವಸೆ ಕೊಟ್ಟಿದ್ದೇವೆ. ನಾವು ಚುನಾವಣೆ ಉದ್ದೇಶಕ್ಕೆ ಹೇಳುತ್ತಿಲ್ಲ. ಏನೂ ಹೇಳುತ್ತೇವೆಯೋ, ಅದನ್ನೇ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು. 

ಕೋಮುವಾದಿ ಬಿಜೆಪಿ ಸೋಲಿಸಿ: ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಸಾಧನೆ ಶೂನ್ಯ. ಮೋದಿ ಅವರು ಭಾವನಾತ್ಮಕವಾಗಿ ಜನರನ್ನು ಕೆರಳಿಸುತ್ತಿದ್ದಾರೆ. ಕೋಮುವಾದಿ, ಮತೀಯವಾದಿಯ ಮನಃಸ್ಥಿತಿಯ ಬಿಜೆಪಿ ಆಡಳಿತದಲ್ಲಿ ದೇಶ ಸರ್ವಾಧಿಕಾರದತ್ತ ಸಾಗುತ್ತಿದೆ’ ಎಂದು ದೂರಿದರು. 

‘ಈ ಬಾರಿಯ ಚುನಾವಣೆಯನ್ನು ದೇಶದ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸಿ, ಎಲ್ಲ ಮತದಾರರು ಸಂವಿಧಾನ ರಕ್ಷಿಸುವ, ಜಾತ್ಯತೀತ ತತ್ವದಲ್ಲಿ ನಂಬಿಕೆ ಉಳ್ಳ ಕಾಂಗ್ರೆಸ್‌ ಗೆಲ್ಲಿಸಬೇಕು. ಮನುವಾದಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು’ ಎಂದು ಮನವಿ ಮಾಡಿದರು. 

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್‌, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮಾಜಿ ಶಾಸಕ ಆರ್‌.ನರೇಂದ್ರ ಮಾತನಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕೆಪಿಸಿಸಿ ಉಪಾಧ್ಯಕ್ಷ ಜಿ.ಎನ್‌. ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವ ಸೋಮಶೇಖರ್, ಪಕ್ಷದ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು
ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು

ಬಾಲರಾಜು ಮಹದೇವಯ್ಯ ಸೇರಿ ಹಲವರು ಕಾಂಗ್ರೆಸ್‌ಗೆ

 ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಸೋದರ ಆರ್. ಬಾಲರಾಜು ಬಿಎಸ್‌ಪಿ ಟಿಕೆಟ್‌ ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ ನಿವೃತ್ತ ತಹಶೀಲ್ದಾರ್‌ ಸೇರಿದಂತೆ ಬಿಜೆಪಿ ಬಿಎಸ್‌ಪಿ ಜೆಡಿಎಸ್‌ನ ಹಲವು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.  ಜಿಪಂ. ಮಾಜಿ ಸದಸ್ಯ ಕಮಲ್ ನಾಗರಾಜು ಮುಳ್ಳೂರು ಶಿವಮಲ್ಲು ಬಾಗಳಿ ರೇವಣ್ಣ ಕಿನಕಹಳ್ಳಿ ರಾಚಯ್ಯ ಪುಟ್ಟಸುಬ್ಬಪ್ಪ ಯಳಂದೂರು ನಟೇಶ್ ಶಂಭಪ್ಪ ರಾಜು ಶಾಂತರಾಜು ಯರಿಯೂರು ಸೋಮಣ್ಣೇಗೌಡ ವಕೀಲರಾದ ಚಿನ್ನಸ್ವಾಮಿ ರುದ್ರಾರಾಧ್ಯ ಶಿವರಾಜು ಸೇರಿದಂತೆ ಹಲವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.  ‘ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಾಯಕತ್ವವನ್ನು ಒಪ್ಪಿ ನಮ್ಮ ಪಕ್ಷ ಸೇರಿದ್ದಾರೆ. ಅವರೆಲ್ಲರಿಗೂ ಹಾರ್ದಿಕ ಸ್ವಾಗತ ಬಯಸುತ್ತೇನೆ’ ಎಂದು ಮುಖ್ಯ‌ಮಂತ್ರಿ ಸಿದ್ದರಾಮಯ್ಯ ಹೇಳಿದರು.  ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ನಂತರ ನಾಮಪತ್ರ ವಾಪಸ್‌ ಪಡೆದವರ ಹೆಸರನ್ನು ಪ್ರಸ್ತಾಪಿಸಿದ ಶಾಸಕ ಕೃಷ್ಣಮೂರ್ತಿ ಅವರು ಅವರೆಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದರು.  ಇದೇ ಸಂದರ್ಭದಲ್ಲಿ ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿತು. ಸಮಿತಿ ಅಧ್ಯಕ್ಷ ಉಗ್ರ ನರಸಿಂಹೇಗೌಡ ಅವರು ಪರಂಪರೆಯ ನಾಗಬೆತ್ತವನ್ನು ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. 

ಕಾಣದ ಅಭ್ಯರ್ಥಿ ಬೋಸ್‌ 

ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಭಾಗವಹಿಸಿರಲಿಲ್ಲ. ವೇದಿಕೆಯ ಮೇಲಿದ್ದ ಫ್ಲೆಕ್ಸ್‌ನಲ್ಲಿ ಅವರ ಫೋಟೊವೂ ಕಾಣಿಸಲಿಲ್ಲ. ಸಿದ್ದರಾಮಯ್ಯ ಅವರೂ ಸೇರಿದಂತೆ ಭಾಷಣ ಮಾಡಿದ ಯಾರೊಬ್ಬರೂ ಸುನಿಲ್‌ ಬೋಸ್‌ ಹೆಸರು ಹೇಳಲಿಲ್ಲ. ‘ಪಕ್ಷಕ್ಕೆ ಪಕ್ಷದ ಅಭ್ಯರ್ಥಿಗೆ ಮತ ನೀಡಿ’ ಎಂದು ಮನವಿ ಮಾಡುತ್ತಿದ್ದರು.  ಸಭೆ ನಡೆದ ಎಂಜಿಎಸ್‌ವಿ ಮೈದಾನದ ಹೊರಗಡೆ ಎಲ್ಲೆಡೆ ಬೋಸ್‌ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು.  ‘ವೇದಿಕೆಯಲ್ಲಿ ಅಭ್ಯರ್ಥಿ ಕಾಣಿಸಿಕೊಂಡರೆ ಅವರ ಫೋಟೊ ಹೆಸರು ಪ್ರಸ್ತಾಪವಾದರೆ ಸಭೆ ಆಯೋಜನೆಯ ವೆಚ್ಚ ಅಭ್ಯರ್ಥಿಯ ವೆಚ್ಚಕ್ಕೆ ಸೇರುತ್ತದೆ. ಆ ಕಾರಣಕ್ಕೆ ಹೆಸರು ಫೋಟೊ ಹಾಕಿರಲಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT