ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೌಢ್ಯಕ್ಕೆ ಜೋತುಬಿದ್ದರೇ ಯಡಿಯೂರಪ್ಪ?

ಬುಧವಾರ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ, ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ಮೊದಲ ಭೇಟಿ
Last Updated 24 ನವೆಂಬರ್ 2020, 17:03 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಬುಧವಾರ (ನ.25) ಗಡಿಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ₹123.74 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಅವರು ಗುರುವಾರ (ನ.26) ನೆರವೇರಿಸಲಿದ್ದಾರೆ.

ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ಅವರು ಜಿಲ್ಲೆಗೆ ಇದುವರೆಗೆ ಭೇಟಿ ನೀಡಿಲ್ಲ. ಮೊದಲ ಬಾರಿ ಬಾರಿಗೆ ಬುಧವಾರ ಬರುತ್ತಿದ್ದು, ಜಿಲ್ಲಾ ಕೇಂದ್ರಕ್ಕೂ ಅವರು ಬರಬೇಕಿತ್ತು ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ (2008) ಅವರು ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ.

‘ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯಕ್ಕೆ ಯಡಿಯೂರಪ್ಪ ಅವರು ಜೋತು ಬಿದ್ದಿದ್ದಾರೆ. ಇದೇ ಕಾರಣಕ್ಕೆ ಅವರು ಈ ಹಿಂದೆಯೂ ಮುಖ್ಯಮಂತ್ರಿಯಾಗಿದ್ದಾಗ ಬಂದಿಲ್ಲ. ಈಗಲೂ ತಮ್ಮ ಪ್ರವಾಸವನ್ನು ಮಹದೇಶ್ವರ ಬೆಟ್ಟಕ್ಕೆ ಸೀಮಿತ ಮಾಡಿಕೊಂಡಿದ್ದಾರೆ’ ಎಂದು ವಿರೋಧ ಪಕ್ಷದ ಮುಖಂಡರು, ರೈತ ಸಂಘದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬಾರದೇ ಇರುವುದಕ್ಕೆಕೆಲವರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದು, ಗೋಬ್ಯಾಕ್‌ ಸಿಎಂ ಎಂಬ ಅಭಿಯಾನ ಆರಂಭಿಸಿದ್ದಾರೆ.

‘ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯಿಂದ ಅವರು ಬರುತ್ತಿಲ್ಲ’ ಎಂಬ ಆರೋಪವನ್ನು ಉಸ್ತುವಾರಿ ಸಚಿವ ಎಸ್‌.ಸುರೇಶ್ ಕುಮಾರ್‌ ಆದಿಯಾಗಿ ಜಿಲ್ಲೆಯ ಎಲ್ಲ ಬಿಜೆಪಿ ಮುಖಂಡರು ನಿರಾಕರಿಸುತ್ತಾ ಬಂದಿದ್ದಾರೆ.

‘ನ.25 ಮತ್ತು 26ರ ಕಾರ್ಯಕ್ರಮ ಮಹದೇಶ್ವರ ಬೆಟ್ಟಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಯಡಿಯೂರಪ್ಪ ಅವರು ಅಲ್ಲಿಗೆ ಮಾತ್ರ ಭೇಟಿ ನೀಡಲಿದ್ದಾರೆ. ನಗರಕ್ಕೆ ಬರುವ ಸಂದರ್ಭ ಬಂದರೆ ಖಂಡಿತವಾಗಿಯೂ ಬರುತ್ತಾರೆ’ ಎಂಬ ಸಮಜಾಯಿಷಿಯನ್ನು ನೀಡುತ್ತಿದ್ದಾರೆ.

ಪ್ರಾಧಿಕಾರದ ಸಭೆಯಲ್ಲಿ ಭಾಗಿ: ಬುಧವಾರ ಸಂಜೆ 4 ಗಂಟೆಗೆ ಬೆಟ್ಟಕ್ಕೆ ಬರಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜೊತೆ ನೀಡಲಿದ್ದಾರೆ.

ಬೆಟ್ಟದಲ್ಲಿ ಮಹದೇಶ್ವರಸ್ವಾಮಿಯ ದರ್ಶನ ಪಡೆದ ಬಳಿಕ 4.30ಕ್ಕೆ ಸಾಲೂರು ಮಠಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಹಾಗೂ ಸಚಿವರು, ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಅವರುಸಂಜೆ 5 ಗಂಟೆಗೆ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

₹123.74 ಕೋಟಿ ವೆಚ್ಚದ ಯೋಜನೆ: ಗುರುವಾರ (ನ.26) ನಡೆಯುವ ಸಮಾರಂಭದಲ್ಲಿ ಪ್ರಾಧಿಕಾರವು ₹123.74 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಹಲವು ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದು, ಇನ್ನೂ ಕೆಲವು ಮಹತ್ವದ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಇಬ್ಬರು ಸಚಿವರು ಉಪಸ್ಥಿತರಿರಲಿದ್ದು, ಸ್ಥಳೀಯ ಶಾಸಕ ಆರ್‌.ನರೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಲಿರುವ ಯೋಜನೆಗಳು

₹13.84 ಕೋಟಿ ವೆಚ್ಚದ ಎಂಟು ಯೋಜನೆಗಳು: 720 ಜನರು ತಂಗುವ ಡಾರ್ಮಿಟರಿ ಕಟ್ಟಡ (₹4.86 ಕೋಟಿ ವೆಚ್ಚ), ಅಂತರಗಂಗೆ ಸಮೀಪ ಶುದ್ಧ ನೀರಿನ ಕಲ್ಯಾಣಿ (₹4.27 ಕೋಟಿ), ವಾಣಿಜ್ಯ ಸಂಕೀರ್ಣ ಪಕ್ಕದಲ್ಲಿ ಆಧುನಿಕ ಸುಸಜ್ಜಿತ ಉಪಾಹಾರ ಮಂದಿರ (₹2.15 ಕೋಟಿ), ವಾಣಿಜ್ಯ ಸಂಕೀರ್ಣದಲ್ಲಿ ಮಾಹಿತಿ ಕೇಂದ್ರ (₹45 ಲಕ್ಷ), 65 ಶೌಚಾಲಯಗಳು (₹1.23 ಕೋಟಿ), ಪಾರ್ಕಿಂಗ್‌ ಯಾರ್ಡ್‌ ಬಳಿಯ ಶೌಚಾಲಯ ಕಟ್ಟಡ (₹25 ಲಕ್ಷ), ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ನವೀಕೃತ ಕೊಠಡಿ (₹12.50 ಲಕ್ಷ), ನಾಗಮಲೆ ಭವನದಲ್ಲಿ ನವೀಕೃತ ವಿಡಿಯೊ ಕಾನ್ಫರೆನ್ಸ್‌ ಹಾಲ್‌ (₹50 ಲಕ್ಷ)

₹109.93 ಕೋಟಿ ವೆಚ್ಚದ 9 ಕಾಮಗಾರಿಗಳಿಗೆ ಶಂಕುಸ್ಥಾಪನೆ:512 ಕೊಠಡಿಗಳ ಅತಿಥಿಗೃಹ ನಿರ್ಮಾಣ (₹45 ಕೋಟಿ ವೆಚ್ಚ), ದೇವಸ್ಥಾನದ ಹಿಂಭಾಗದಲ್ಲಿ ತಿರುಪತಿ ಮಾದರಿಯಲ್ಲಿ ಸರತಿ ಸಾಲಿನ ಸಂಕೀರ್ಣ ನಿರ್ಮಾಣ (₹24 ಕೋಟಿ), ತಾಳಬೆಟ್ಟದಿಂದ ಮಹದೇಶ್ವರಸ್ವಾಮಿ ದೇವಸ್ಥಾನದವರೆಗೆ ಕಾಲ್ನಡಿಗೆ ಮಾರ್ಗದಲ್ಲಿ ಗ್ರ್ಯಾನೈಟ್‌ ಮೆಟ್ಟಿಲು ನಿರ್ಮಾಣ (₹22 ಕೋಟಿ), 30 ಜನರು ತಂಗುವ ಡಾರ್ಮಿಟರಿ ಕಟ್ಟಡ ನಿರ್ಮಾಣ ಕಾಮಗಾರಿ (₹7.90 ಕೋಟಿ), ದೊಡ್ಡಕೆರೆ ಅಭಿವೃದ್ಧಿ (₹4.80 ಕೋಟಿ), ದಾಸೋಹ ಭವನದಿಂದ ಹೆಲಿಪ್ಯಾಡ್‌ವರೆಗೆ ರಸ್ತೆ ಅಭಿವೃದ್ಧಿ (₹3 ಕೋಟಿ), ಕತ್ತಿಪವಾಡದಿಂದ ತಂಬಡಗೇರಿ ಮೂಲಕ ಎಸ್‌ಬಿಎಂ ವೃತ್ತದವರೆಗೆ ಕಾಂಕ್ರೀಟ್‌ ರಸ್ತೆ (₹1.35 ಕೋಟಿ), ಪೊಲೀಸ್‌ ವಸತಿ ಗೃಹಕ್ಕೆ ಹೋಗುವ ರಸ್ತೆ ಅಭಿವೃದ್ಧಿ (₹98 ಲಕ್ಷ), ಹೆಚ್ಚುವರಿ ಲಾಡು ತಯಾರಿಸುವ ಕಟ್ಟಡ ನಿರ್ಮಾಣ (₹90 ಲಕ್ಷ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT