ಯಳಂದೂರು: ತಾಲ್ಲೂಕಿನ ಸುತ್ತಮುತ್ತಲ ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗಿಗೆ ಕಪ್ಪುತಲೆ ಹುಳು ಬಾಧಿಸುತ್ತಿದ್ದು, ಕೃಷಿಕರಿಗೆ ಸಂಕಷ್ಟ ತಂದಿತ್ತಿದೆ.
ಈಚೆಗೆ ತಾಲ್ಲೂಕಿನಲ್ಲಿ ತೆಂಗು ಬೆಳೆಯುವವರ ಸಂಖ್ಯೆ ಹಿಗ್ಗುತ್ತಿರುವ ಸಂದರ್ಭದಲ್ಲಿ ಹುಳು ಬಾಧೆ ಕಾಡುತ್ತಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ತೆಂಗಿನ ಗರಿಗಳು ಒಣಗಿ ಕಪ್ಪಾಗಿ ಉದುರುತ್ತಿದ್ದು, ರೋಗಕ್ಕೆ ತುತ್ತಾದ ವೃಕ್ಷಗಳಲ್ಲಿ ಇಳುವರಿ ಕುಸಿದಿದೆ. ಕಪ್ಪುತಲೆ ಹುಳುಗಳು ಸೋಗೆ, ಕಾಂಡ ಭಾಗವನ್ನು ಭಕ್ಷಿಸಿ ಮರಗಳ ಬೆಳವಣಿಗೆಯನ್ನು ಕುಠಿತಗೊಳಿಸುತ್ತಿವೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಪ್ಪು ತಲೆ ಹುಳು ಬಾಧೆ ಕಡಿಮೆ ಇರುತ್ತದೆ. ಬಿಸಿಲಿನ ತೀವ್ರತೆ ಹೆಚ್ಚಾದಾಗ ರೋಗದ ತೀವ್ರತೆಯೂ ಹೆಚ್ಚಾಗುತ್ತದೆ. ಹಾಗಾಗಿ, ತೋಟವನ್ನು ಸದಾ ಕಾಲ ನಿರ್ವಹಣೆ ಮಾಡಬೇಕು. ಕಪ್ಪು ತಲೆ ಬಾಧೆಗೆ ನೂರು ತೆಂಗಿನ ಮರಗಳ ನಡುವೆ 5ರಷ್ಟು ವೃಕ್ಷಗಳು ಒಣಗುತ್ತವೆ. ತೆಂಗಿಗೆ ತಗುಲುವ ರೋಗ ಜಮೀನಿನಲ್ಲಿರುವ ಇತರ ಮರಗಳಿಗೂ ಹರಡುತ್ತದೆ ಎನ್ನುತ್ತಾರೆ ರೈತ ಅಂಬಳೆ ನಂಜೇದೇವರು.
ಹಿಂದೆ, ತೆಂಗಿಗೆ ಬಾಧಿಸುವ ಕಪ್ಪುತಲೆ ಹುಳು ಹಾಗೂ ದುಂಬಿಗಳನ್ನು ಹಿಡಿದು ಕೊಲ್ಲುತ್ತಿದ್ದರು. ಈಚಿನ ದಿನಗಳಲ್ಲಿ ಹುಳು ಹುಡುಕಿ ತೆಗೆಯುವ ನಿಪುಣ ಶ್ರಮಿಕರು ಸಿಗುತ್ತಿಲ್ಲ. ಹಾಗಾಗಿ, ರೋಗಬಾಧೆ ಹೆಚ್ಚಾಗಿದೆ ಎನ್ನುತ್ತಾರೆ ರೈತರು.
ಜೈವಿಕ ವಿಧಾನದಿಂದ ನಿಯಂತ್ರಣ: ತೆಂಗಿಗೆ ತಗುಲುವ ಕಪ್ಪುತಲೆ ಹುಳವನ್ನು ಜೈವಿಕ ವಿಧಾನದಿಂದ ನಿಯಂತ್ರಿಸುವ ಬಗ್ಗೆ ತಜ್ಞರು ಜಾಗೃತಿ ಮೂಡಿಸುತ್ತಿದ್ದು, ಉಚಿತವಾಗಿ ಪರಾವಲಂಬಿ ಕೀಟವನ್ನು ವೃಕ್ಷಗಳಿಗೆ ಬಿಟ್ಟು ರೋಗ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ತಾಲ್ಲೂಕಿನಲ್ಲಿ 1,400 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಶೇ 5ರಿಂದ 10 ಗಿಡಗಳಿಗೆ ಕಪ್ಪುತಲೆ ಹುಳುಗಳ ಬಾಧೆ ಕಾಡುತ್ತದೆ. ಕಪ್ಪು ಹುಳುಗಳು ಗಿಡಗಳ ಮೃದು ಭಾಗವನ್ನು ಕೊರೆದು ತಿನ್ನುತ್ತವೆ. ಅಲ್ಲಿಯೇ ಗೂಡುಕಟ್ಟಿ ಜೀವಿಸಿ ಚಿಟ್ಟೆಗಳಾಗಿ ಸಮೀಪದ ಮರಗಳನ್ನು ಸೇರಿ ಮೊಟ್ಟೆ ಇಡುತ್ತವೆ. ಹಾಗಾಗಿ, ಜೈವಿಕ ವಿಧಾನದ ಮೂಲಕ ಕಪ್ಪುತಲೆ ಹುಳುಗಳನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಅಧಿಕಾರಿಗಳು.
ಪ್ರತಿ ಗಿಡಕ್ಕೆ ಗೊನಿಯೋಜಸ್ ನೆಫಾಂಟಿಡಿಸ್ (ಬೆಥಿಲಿಡೆ) ಇಲ್ಲವೆ ಬ್ರೆವಿಕಾರ್ನೀಸ್ (ಬ್ರಾಕೊನಿಡೆ) ಪರಾವಲಂಬಿ ಜೀವಿಗಳನ್ನು ಬಿಟ್ಟರೆ ಕಪ್ಪುತಲೆ ಹುಳುಗಳನ್ನು ಭಕ್ಷಿಸುತ್ತವೆ. ಈಗಾಗಲೇ ಪರಾವಲಂಬಿ ಜೀವಿಗಳ ಪ್ರಯೋಗ ನಡೆದಿದ್ದು ಕೀಟಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಏನು ಮಾಡಬೇಕು: ರೋಗಪೀಡಿತ ಗಿಡಗಳನ್ನು ಕತ್ತರಿಸಿ ಸುಡಬೇಕು. 15 ದಿನಗಳಿಗೆ ಒಮ್ಮೆ 1 ಲೀಟರ್ ನೀರಿಗೆ 7 ಗ್ರಾಂ ಬೇವಿನಸೊಪ್ಪು ರಸ ಬೆರಿಸಿ ಗರಿಗಳ ಕೆಳ ಭಾಗಕ್ಕೆ ಸಿಂಪಡಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಯೋಗಾಲಯದಲ್ಲಿ ಜೈವಿಕ ಕೀಟ ಉತ್ಪಾದನೆ
ಕಪ್ಪುತಲೆ ಹುಳುವಿಗೆ ‘ಒಫಿಸಿನಾ ಅರೆನೋಸೆಲ್ಲ’ ಎಂಬ ವೈಜ್ಞಾನಿಕ ಹೆಸರಿದೆ. ಲಾರ್ವ ಹಂತದಲ್ಲಿ ತೆಂಗಿನ ಮರದ ಹಸಿರು ಗರಿಗಳ ರಸ ಹೀರುವ ಕೀಟಗಳನ್ನು ತಕ್ಷಣ ನಿಯಂತ್ರಿಸಬೇಕು. ಹುಳು 1 ವರ್ಷ ತಾಕಿನಲ್ಲಿ ಕಂಡುಬಂದರೆ ಇಡಿ ತೋಟವನ್ನೇ ಅವರಿಸಬಹುದು. ತಾಳೆ ಬಾಳೆ ಖರ್ಜೂರ ಈಚಲು ಮರವನ್ನು ಹುಳುಗಳು ಹಾಳು ಮಾಡುತ್ತವೆ. ಕಪ್ಪುತಲೆ ಹುಳು ನಿಯಂತ್ರಿಸಲು ಪರೋಪಜೀವಿ ಗೊನಿಯೋಜಸ್ ನೆಫಾಂಟಿಡಿಸ್ ಮತ್ತು ಕೀಟದ ರಸ ಹೀರುವ ಆಂಥೊಕೊರಿಡ್ ಜೀವಿಗಳನ್ನು ಪ್ರಯೋಗಾಲಯದಲ್ಲಿ ವೈಜ್ಞಾನಿಕವಾಗಿ ಉತ್ಪಾದಿಸಿ ಬಾಧಿತ ತೆಂಗಿನ ಗಿಡಗಳಿಗೆ ಬಿಡಲಾಗುತ್ತದೆ. ಇಂತಹ ಆಸರೆ ಕೀಟಕ್ಕೆ ಅಕ್ಕಿಹುಳು ಹೆಸರಿದೆ. ಸದ್ಯ ಬೆಳೆಗಾರರಿಗೆ ಖರ್ಚು ಇಲ್ಲದೆ ತೆಂಗಿನ ವೃಕ್ಷಗಳನ್ನು ರಕ್ಷಿಸಿಕೊಳ್ಳಲು ಜೈವಿಕ ಕೀಟಗಳ ಬಳಕೆ ಅತ್ಯುತ್ತಮ ಎಂಬುದು ಕೃಷಿ ವಿಜ್ಞಾನಿಗಳ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.