ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ವಿರೋಧ ಪಕ್ಷಗಳಿಂದ ಬೋಸ್‌ ವಿರುದ್ಧ ಅಪಪ್ರಚಾರ: ನವೀನ್‌

Published 11 ಏಪ್ರಿಲ್ 2024, 5:49 IST
Last Updated 11 ಏಪ್ರಿಲ್ 2024, 5:49 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿ ಸುನಿಲ್‌ ಬೋಸ್‌ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ. ಅವರ ವಿರುದ್ಧದ ‘ಗೋ ಬ್ಯಾಕ್‌’ ಭಿತ್ತಿ ಪತ್ರ ಹಚ್ಚಿರುವುದು ಕೂಡ ವಿರೋಧ ಪಕ್ಷಗಳ ಕುತಂತ್ರ’ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್‌ ಬುಧವಾರ ಆರೋಪಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುನಿಲ್‌ ಬೋಸ್‌ ಸಜ್ಜನ. ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರ ಬಗ್ಗೆ ಇಲ್ಲ ಸಲ್ಲದನ್ನು ಹೇಳಲಾಗುತ್ತಿದೆ. ಈವರೆಗೂ ಅವರಿಗೆ ಪಕ್ಷದಲ್ಲಿ ಹೆಚ್ಚು ಜವಾಬ್ದಾರಿ ಇರಲಿಲ್ಲ. ಈಗ ಅಭ್ಯರ್ಥಿಯಾಗಿ ಜವಾಬ್ದಾರಿ ಕೊಡಲಾಗಿದೆ. ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ’ ಎಂದರು. 

ಪ್ರಮಾಣಪತ್ರದಲ್ಲಿ ಕುಟುಂಬದ ವಿವರಗಳನ್ನು ದಾಖಲಿಸದಿರುವ ಬಗ್ಗೆ ಬಿಜೆಪಿ ನೀಡಿರುವ ದೂರಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನವೀನ್‌, ‘ಅದು ಅವರ ವೈಯಕ್ತಿಕ ವಿಚಾರ. ಚುನಾವಣೆಯನ್ನು ರಾಜಕೀಯವಾಗಿ ಎದುರಿಸುವುದು ಬಿಟ್ಟು, ಬಿಜೆಪಿಯವರು ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಅವರೆಷ್ಟು ನೀಷತನದ ಬುದ್ಧಿ ಪ್ರದರ್ಶಿಸುತ್ತಾರೆ ಎಂಬದು ಇದರಿಂದ ತಿಳಿಯುತ್ತದೆ’ ಎಂದರು. 

‘ಕ್ಷೇತ್ರದಲ್ಲಿ ಹಾಲಿ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್‌ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಖರ್ಚು ಮಾಡಿದ್ದು ಬಿಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ಬೇರೆ ಅನುದಾನ ತಂದಿಲ್ಲ. ಬೋಸ್‌ ಅವರು ಯುವಕರಾಗಿದ್ದು, ಕೆಲಸ ಮಾಡುವ ಉತ್ಸಾಹ ಇದೆ. ಕ್ಷೇತ್ರದ ಜನರು ದೇಶದ ಅಭಿವೃದ್ಧಿಗೆ ಏನೂ ಕೊಡುಗೆ ನೀಡದ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್‌ ಪಕ್ಷ, ಬೋಸ್‌ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು. 

ಮೋದಿ ಕೊಡುಗೆ ಶೂನ್ಯ: ವಿಶ್ವ ಗುರು ಎಂದು ಕರೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಅವಧಿಯಲ್ಲಿ ದೇಶಕ್ಕೆ ಕೊಟ್ಟ ಕೊಡುಗೆ ಶೂನ್ಯ. 30 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ. ಸಿಲಿಂಡರ್‌, ಪೆಟ್ರೋಲ್‌ ಬೆಲೆ ಏರಿಕೆ ಆಗಿದೆ. ಚುನಾವಣಾ ಬಾಂಡ್‌ ಹಗರಣ ನಡೆದಿದೆ. ಅಚ್ಚೇ ದಿನ್‌ ಕೊಡುತ್ತೇವೆ ಎಂದು ಹೇಳಿ ಜನರ ತಲೆಯ ಮೇಲೆ ಹೆಚ್ಚುವರಿ ಸಾಲದ ಹೊರೆ ಹೊರಿಸಿದ್ದಾರೆ’ ಎಂದು ದೂರಿದರು.  

ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ್‌ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಹಾಗೂ ಮುಖಂಡರು ಮಾಜಿ ಸಂಸದ ದಿವಂಗತ ಆರ್‌.ಧ್ರುವನಾರಾಯಣ ಅವರ ಬೆಂಬಲಿಗರು ತಮಗೆ ಮತ ಹಾಕಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಅವರ ಗಿಮಿಕ್‌. ಆರಂಭದಿಂದಲೂ ಗಿಮಿಕ್‌, ಮಿಮಿಕ್ರಿ ಮಾಡುತ್ತಾ ಬಂದಿರುವ ಬಾಲರಾಜು ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಧ್ರುವನರಾಯಣ ಮತ್ತು ಮಹದೇವಪ್ರಸಾದ್‌ ಅವರ ಸಮಾಧಿಗೆ ಭೇಟಿ ನೀಡಲು ಇವರಿಗೆ ನೈತಿಕತೆಯೇ ಇಲ್ಲ. ಒಂದು ವೇಳೆ ಧ್ರುವನಾರಾಯಣ ಅವರ ಬಗ್ಗೆ ನಿಜವಾದ ಪ್ರೀತಿ ಇದ್ದರೆ, ನಂಜನಗೂಡಿನಲ್ಲಿ ಅವರ ಮಗ ದರ್ಶನ್‌ ಪರವಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರು ಮೃತಪಟ್ಟ ಒಂದು ತಿಂಗಳಲ್ಲಿ ಪಕ್ಷ ತೊರೆದಿದ್ದಾರೆ. ಅವರಂತಹ ಮೋಸಗಾರ ಬೇರೆ ಇಲ್ಲ’ ಎಂದು ಟೀಕಿಸಿದರು. 

 ಕಾಂಗ್ರೆಸ್‌ನ ಪರಿಶಿಷ್ಟ ಪಂಗಡಗಳ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸ ನಾಯಕ ಮಾತನಾಡಿದರು.

ಮುಖಂಡರಾದ ನಟರಾಜು, ಮಾದೇಶ್‌, ಸೈಯದ್‌ ಮುಸಾಯಿಲ್‌, ಗೌಡಹಳ್ಳಿ ರಾಜೇಶ್‌ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT