ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜ್ಞಾನೇಂದ್ರ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಅರಗ ಜ್ಞಾನೇಂದ್ರ ಹೇಳಿಕೆ ಖಂಡಿಸಿ ಪ್ರತಿಭಟನೆ
Published 3 ಆಗಸ್ಟ್ 2023, 14:37 IST
Last Updated 3 ಆಗಸ್ಟ್ 2023, 14:37 IST
ಅಕ್ಷರ ಗಾತ್ರ

ಚಾಮರಾಜನಗರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರನ್ನು ತಕ್ಷಣ ಬಂಧಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು,  ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗ ಸೇರಿದ ಪ್ರತಿಭಟನೆಕಾರರು, ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಬಿಜೆಪಿ ಹಾಗೂ ಅರಗ ಜ್ಞಾನೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. 

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಬಿಜೆಪಿ ನಾಯಕರಿಗೆ ಬುದ್ಧಿಭ್ರಮಣೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನಿಂದ ಹತಾಶರಾಗಿದ್ದಾರೆ. ಹಿಂದೆ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ, ಖರ್ಗೆಯವರ ವಿರುದ್ದ ನೀಡಿರುವ ಹೇಳಿಕೆ ಅವರ ಅಪ್ರಬುದ್ದತೆ ತೋರಿಸುತ್ತದೆ. ದಲಿತ ನಾಯಕರಾಗಿರುವ ಖರ್ಗೆ ಹೆಸರನ್ನು ಹೇಳುವ ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಅಗರ ಜ್ಞಾನೇಂದ್ರ ಹಿರಿಯ ಶಾಸಕರಾಗಿ, ದಲಿತ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಕಪ್ಪು ಬಣ್ಣದವರು ಎಂದು ಹೀಯಾಳಿಸುವ ಮೂಲಕ ಅವರ ಜಾತಿಯನ್ನು ಎಳೆದು ತಂದಿದ್ದಾರೆ. ಖರ್ಗೆಯವರು ನಮ್ಮ ಸಮುದಾಯದ ಹಿರಿಯ ನಾಯಕರು. ಅವರನ್ನು ಕಪ್ಪು ವರ್ಣದವರು ಎಂದರೆ ಜಾತಿಯನ್ನು ನಿಂದಿಸಿದಂತೆ ಆಗಿದೆ. ಈ ಕೂಡಲೇ ಅವರನ್ನು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಸ್.ಗಣೇಶ್ ಪ್ರಸಾದ್ ಮಾತನಾಡಿ, ‘ಬಿಜೆಪಿ ಮುಖಂಡರು ಇಂತಹ ಹೇಳಿಕೆ ನೀಡುವ ಮೂಲಕ ತಮ್ಮ ಸಂಸ್ಕೃತಿ ಮತ್ತು ಪಕ್ಷದ ಕಾರ್ಯಾಸೂಚಿ ಎಂತಹದ್ದು ಎಂಬುದನ್ನು ಸಾರ್ವಜನಿಕರಿಗೆ ತೋರಿಸಿದ್ದಾರೆ. ಜ್ಞಾನೇಂದ್ರ ಇಂಥ ಮಾತುಗಳನ್ನಾಡಿರುವುದು ಅವರಿಗೆ ಶೋಭೆಯಲ್ಲ. ಕೂಡಲೇ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಈಶ್ವರ ಖಂಡ್ರೆಯವರ ಕ್ಷಮೆಯಾಚಿಸಬೇಕು’ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್. ಗುರುಸ್ವಾಮಿ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಮುಖಂಡರಾದ ಕೆ.ಪಿ.ಸದಾಶಿವಮೂರ್ತಿ, ಅರಣ್‌ಕುಮಾರ್, ಮಹದೇವಶೆಟ್ಟಿ, ಲಿಂಗರಾಜು, ಹೊಮ್ಮ ಪ್ರಕಾಶ್, ಗ್ರಾಮ ಪಂಚಾಯಿತಿ  ಅಧ್ಯಕ್ಷ ಪಿ.ಶೇಖರ್, ಉಪಾಧ್ಯಕ್ಷ ಪಟೇಲ್ ಗುರುಮಲ್ಲಪ್ಪ, ಮಹೇಶ್ ಕುದರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಮೋಹನ್ ನಗು, ಸಿಕೆ. ರವಿಕುಮಾರ್, ಕಾಗಲವಾಡಿ ಚಂದ್ರು, ಶಿವಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT