ಸೋಮವಾರ, ಆಗಸ್ಟ್ 15, 2022
22 °C

ಇಂಧನ ಬೆಲೆ: ಮುಂದುವರಿದ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪೆಟ್ರೋಲ್‌, ಡೀಸೆಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವಿವಿಧ ವಿಭಾಗಗಳ ವತಿಯಿಂದ ಭಾನುವಾರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. 

ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರ ನೇತೃತ್ವದಲ್ಲಿ ಬೆಂಡರವಾಡಿ ಸಮೀಪದ ಪಟ್ರೋಲ್‌ ಬಂಕ್‌ ಮುಂಭಾಗ, ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್‌ ನೇತೃತ್ವದಲ್ಲಿ ವೆಂಕಟಯ್ಯನಛತ್ರ ವೃತ್ತದಲ್ಲಿ ಹಾಗೂ ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್‌ ನೇತೃತ್ವದಲ್ಲಿ ಹರವೆಯಲ್ಲಿ ಪ್ರತಿಭಟನೆಗಳು ನಡೆದವು.   

ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿ ಧಿಕ್ಕಾರ ಕೂಗಿದರು.

ಪಿ.ಮರಿಸ್ವಾಮಿ ಅವರು ಮಾತನಾಡಿ, ‘ಕೋವಿಡ್‌ ಸಂಕಷ್ಟದ ನಡುವೆಯೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ₹100ರ ಗಡಿ ದಾಟಿರುವುದು ಜನಸಾಮಾನ್ಯರಲ್ಲಿ ತೀವ್ರ ತೊಂದರೆಯಾಗಿದೆ. ಬೇರೆ ದೇಶಗಳಲ್ಲಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಡಿಮೆ ಇರುವ ತೈಲ ದರಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಗನಕ್ಕೆ ಏರುತ್ತಿರುವುದು ನುಂಗಲಾರದ ತುತ್ತಾಗಿದೆ. ಅಡುಗೆ ಅನಿಲ ಸಿಲಿಂಡರ್‌ ಬೆಲೆ ₹900 ಇದ್ದು, ಅಡುಗೆ ಎಣ್ಣೆ ₹200 ಆಗಿದ್ದು ದಿನ ಬಳಕೆಯ ದಿನಸಿ ಪದಾರ್ಥಗಳ ಬೆಲೆಗಳು ಸಹ ಏರಿಕೆಯಾಗಿವೆ’ ಎಂದು ಆರೋಪಿಸಿದರು. 

ಬಿ.ಕೆ.ರವಿಕುಮಾರ್ ಅವರು ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣ ಮಾಡಲು ವಿಫಲವಾಗಿದ್ದು, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಏಳು ವರ್ಷಗಳ ಹಿಂದೆ ಅಚ್ಛೇ ದಿನ ಬರುತ್ತದೆ ಎಂದು ಹೇಳಿ ಮತ ಪಡೆದು ಬಂಡವಾಳ ಶಾಹಿಗಳು ಹಾಗೂ ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಾತ್ರ ಅಚ್ಛೇ ದಿನ ಬಂದಿದೆ. ದೇಶದ ಬಡವರು ಮಾತ್ರ ಇನ್ನೂ ಸಂಕಷ್ಟದಲ್ಲಿದ್ದಾರೆ. ಇಂಥ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ’ ಎಂದರು.

ಕೆರೆ ಹಳ್ಳಿ ನವೀನ್‌ ಅವರು ಮಾತನಾಡಿ, ‘ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಹೆಚ್ಚು ಲಾಭ ಪಡೆಯುವ ಸಲುವಾಗಿ ಅನೇಕ ಸಲ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದು ಯಾರ ಹಿತಕ್ಕಾಗಿ?  ಕಚ್ಚಾತೈಲ ಬ್ಯಾರಲ್‌ಗೆ 48 ಡಾಲರ್ ಇದೆ. ಒಂದು ಲೀಟರ್ ಪೆಟ್ರೋಲ್ ಅನ್ನು ₹35ರಿಂದ ₹40ಕ್ಕೆ ಮಾರಾಟ ಮಾಡಬೇಕು. ಇಂದು ಲೀಟರ್ ಬೆಲೆ ₹100 ತಲುಪಿದೆ. ಅಗತ್ಯವಸ್ತುಗಳ ಬೆಲೆ ಕೂಡ ಏರಿಕೆಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಬದುಕು ಸಾಧಿಸುವುದೇ ಕಷ್ಟಕರವಾಗಿದೆ. ಕೂಡಲೇ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ಇಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು, ಕಾರ್ಮಿಕ ವಿಭಾಗದ ಮುಖಂಡರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು