ಭಾನುವಾರ, ಜನವರಿ 26, 2020
29 °C
ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ

ಬಿವಿಎಸ್‌ನಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್‌) ರಾಜ್ಯ ಮಟ್ಟದ ಸಂವಿಧಾನ ಜಾಗೃತಿ ಸಮ್ಮೇಳನದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದೆ’ ಎಂದು ಸಂಘದ ಜಿಲ್ಲಾ ಸಂಯೋಜಕ ಪರ್ವತ್‌ ರಾಜ್ ಹೇಳಿದರು.

ಸಂವಿಧಾನ ಸಮರ್ಪಣ ದಿನವಾದ ನ. 26ರಿಂದ ಸಂವಿಧಾನ ಜಾರಿಯಾದ ಜನವರಿ 26ರ ವರೆಗೆ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 2ರಂದು ನಡೆಯಲಿರುವ ಸಂವಿಧಾನ ಜಾಗೃತಿ ಸಮ್ಮೇಳನ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಅಯೋಜಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ತಾಲ್ಲೂಕು ಮಟ್ಟದಿಂದ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟಕ್ಕೆ ಕಳುಹಿಸಿ ಕೊಡಲಾಗುತ್ತದೆ. ಜಿಲ್ಲಾ ಮಟ್ಟದಿಂದ 60 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಬಹುಮಾನದ ವಿವರ: ಸ್ನಾತಕೋತ್ತರ, ಪದವಿ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ₹ 1 ಲಕ್ಷ, ದ್ವಿತೀಯ ₹ 50 ಸಾವಿರ, ತೃತೀಯ ₹ 25 ಸಾವಿರ ಹಾಗೂ ಹತ್ತು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ತಲಾ ₹ 5 ಸಾವಿರ.

ಪಿಯುಸಿ ಹಾಗೂ ತತ್ಸಮಾನ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪ್ರಥಮ ₹ 50 ಸಾವಿರ, ದ್ವಿತೀಯ ₹ 25 ಸಾವಿರ, ತೃತೀಯ ₹ 15 ಸಾವಿರ ಹಾಗೂ ಸಮಾಧಾನಕರ ಬಹುಮಾನ 10 ಮಂದಿಗೆ ತಲಾ ₹ 3 ಸಾವಿರ.

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ₹25 ಸಾವಿರ, ದ್ವಿತೀಯ ₹ 15 ಸಾವಿರ, ತೃತೀಯ ₹ 5 ಸಾವಿರ ಹಾಗೂ ಸಮಾಧಾನಕಾರ ಬಹುಮಾನ ಹತ್ತು ಮಂದಿಗೆ ತಲಾ ₹ 2 ಸಾವಿರ ನಿಗದಿ ಪಡಿಸಲಾಗಿದೆ. 

 ಪ್ರಬಂಧದ ಮೊದಲ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ, ವಿಭಾಗ, ಶಾಲೆ ಅಥವಾ ಕಾಲೇಜು, ವಿಳಾಸ, ಮೊಬೈಲ್ ನಂಬರ್ ಸ್ಪಷ್ಟವಾಗಿ ದಪ್ಪ ಅಕ್ಷರದಲ್ಲಿ ಬರೆದಿರಬೇಕು. ಪ್ರಬಂಧದ ಮೊದಲ ಪುಟದಲ್ಲಿ ಶಾಲಾ ಕಾಲೇಜಿನ ಮುಖ್ಯ ಶಿಕ್ಷಕರು, ಅಥವಾ ಪ್ರಾಂಶಪಾಲರು ಅಥವಾ ಸಂಸ್ಥೆಯ ವಿಷಯ ವಿಭಾಗದ ಮುಖ್ಯಸ್ಥರ ಸಹಿ, ಮೊಹರನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಪ್ರಬಂಧವನ್ನು ಎ4 ಶೀಟ್‌ಗಳಲ್ಲಿ ನೀಲಿ ಅಥವಾ ಕಪ್ಪು ಶಾಯಿಯಿಂದ ಮಾತ್ರ ಬರೆದಿರಬೇಕು.

ಪ್ರಬಂಧವನ್ನು 2020ರ ಜನವರಿ 10ರೊಳಗೆ ಅಂಚೆ ಅಥವಾ ಇ ಮೇಲ್‌ ವಿಳಾಸಕ್ಕೆ ತಲುಪಿಸಬೇಕು ಎಂದು ಪರ್ವತರಾಜ್‌ ಮಾಹಿತಿ ನೀಡಿದರು. 

ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷೆ ಮೇಘಾ, ಸಂಘಟನಾ ಕಾರ್ಯದರ್ಶಿ ಸಹನಾ, ಪತ್ರಿಕಾ ಕಾರ್ಯದರ್ಶಿ ಸಚಿನ್‌ ಇದ್ದರು.

ವಿಳಾಸ: ತ್ಯಾಗು ಇಂಟರ್‌ನಟ್, ಬಿ.ರಾಚಯ್ಯ ಜೋಡಿರಸ್ತೆ, ವಿದ್ಯಾವಿಕಾಶ ಕಾಲೇಜು ಪಕ್ಕ, ರಾಮಸಮುದ್ರ, ಚಾಮರಾಜನಗರ ಟೌನ್. ಚಾಮರಾಜನಗರ-751313, ಇಮೇಲ್ : bvschamarajnagara@gmail.com. ಮಾಹಿತಿಗೆ ಮೊಬೈಲ್ 94800 92284, 74069 10060 ಸಂಪರ್ಕಿಸಬಹುದು.

ಸ್ಪರ್ಧೆಯ ವಿಷಯಗಳು

ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ವಿಷಯ ನೀಡಲಾಗಿದೆ. ಪ್ರಬಂಧವು ವಿದ್ಯಾರ್ಥಿಯ ಕೈ ಬರಹದಿಂದ ಕೂಡಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು. 

ಪದವಿ, ಸ್ನಾತಕೋತ್ತರ ವಿಭಾಗದ ವಿಷಯ: ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ (2,500 ಪದಗಳ ಮಿತಿ)

ಪಿಯುಸಿ, ತತ್ಸಮಾನ ಕೋರ್ಸ್‌ ವಿಭಾಗದ ವಿಷಯ: ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ (1000 ಪದಗಳ ಮಿತಿ)

ಪ್ರೌಢ ಶಾಲಾ ವಿಭಾಗದ ವಿಷಯ: ನಮ್ಮ ಸಂವಿಧಾನ ರಚನೆಯಲ್ಲಿ ಭಾರತ ಸಂವಿಧಾನ ಪಿತಾಮಹರಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾತ್ರ (1000 ಪದಗಳ ಮಿತಿ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು