ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಕಲುಷಿತ ಆಹಾರ ಸೇವನೆ: 6 ಮಂದಿ ಅಸ್ವಸ್ಥ

Published 8 ಮೇ 2024, 13:06 IST
Last Updated 8 ಮೇ 2024, 13:06 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಹಲಗಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಲುಷಿತ ಆಹಾರ ಸೇವಿಸಿ ಹಾಗೂ ನೀರು ಕುಡಿದು 6 ಮಂದಿ ಅಸ್ವಸ್ಥರಾಗಿದ್ದಾರೆ.

ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲಗಾಪುರ ನಿವಾಸಿಗಳಾದ ಶಿವಣ್ಣ (60), ರತ್ನಮ್ಮ (50), ಗುರುಸ್ವಾಮಿ (55), ಶಿವಮಲ್ಲಮ್ಮ(65) ಸಾಕಮ್ಮ (55), ಮಹಾದೇವಸ್ವಾಮಿ (50) ಕಲುಷಿತ ಆಹಾರ ಸೇವನೆ ಮಾಡಿ ನಿತ್ರಾಣಗೊಂಡಿದ್ದರು. ಇವರನ್ನು ಸ್ಥಳೀಯರು ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದರು. ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಅವರು ಚಿಕಿತ್ಸೆ ನೀಡಿದರು.

ಸೋಮವಾರ ಹಲಗಾಪುರದಲ್ಲಿ‌ ನಡೆದ ಆರಾಧನೆ ಮಹೋತ್ಸವದಲ್ಲಿ ಆಹಾರ ಸೇವಿಸಿದ್ದರು. ವಾಂತಿ, ಭೇದಿ ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ವೈದ್ಯಾಧಿಕಾರಿ ಸೂಚನೆ ಮೇರೆಗೆ ಗ್ರಾಮಕ್ಕೆ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮನೆಮನೆಗೂ ಭೇಟಿ ಕೊಟ್ಟು ಅಗತ್ಯ ಔಷಧ ವಿತರಿಸಿದ್ದಾರೆ.

‘ಹಲಗಾಪುರ ಗ್ರಾಮದ ಟ್ಯಾಂಕ್ ಸ್ವಚ್ಛಗೊಳಿಸಿ ಹಲವು ದಿನಗಳು ಕಳೆದಿವೆ. ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕೋತಿಗಳು ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಹೊರಬರುವುದರಿಂದ ಅವುಗಳ ಕೂದಲು ಹಾಗೂ ಮಲ, ಮೂತ್ರ ನೀರಿನಲ್ಲಿ ಮಿಶ್ರಣವಾಗುತ್ತಿದೆ. ಈ ಕಲುಷಿತ ನೀರನ್ನು ಗ್ರಾಮಸ್ಥರೆಲ್ಲರೂ ಕುಡಿಯುತ್ತಿರುವುದರಿಂದ ವಾಂತಿ, ಭೇದಿ ಕಾಣಿಸಿಕೊಂಡಿದೆ. ಈ ಸಂಬಂಧ ಬಂಡಳ್ಳಿ ಪಿಡಿಒ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮುಖಂಡ ಗುರುಮಲ್ಲಪ್ಪ ಆರೋಪಿಸಿದ್ದಾರೆ.

‘ಟ್ಯಾಂಕ್‌ನಿಂದ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ಪರೀಕ್ಷೆ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಹಲಗಾಪುರ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಇಲ್ಲ, ತಕ್ಷಣ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಚನೆ ನೀಡುತ್ತೇನೆ’ ಎಂದು ಹನೂರು ತಾಲ್ಲೂಕು ಪಂಚಾಯಿತಿ ಇಒ ಉಮೇಶ್ ಪ್ರತಿಕ್ರಿಯಿಸಿದರು.

‘ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT