ಮಂಗಳವಾರ, ಮೇ 11, 2021
24 °C

ಚಾಮರಾಜನಗರ: ಒಟ್ಟು 24 ಸಾವು, ಆಮ್ಲಜನಕ ಕೊರತೆಯಿಂದ 12 ಸಾವು– ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಆಮ್ಲಜನಕ ಸಿಲಿಂಡರ್ ಖಾಲಿಯಾಗಿ ಆತಂಕ ಸೃಷ್ಟಿಯಾಗಿತ್ತು. ಆಮ್ಲಜನಕ ಸಿಲಿಂಡರ್ ಖಾಲಿಯಾದ ಪರಿಣಾಮ 24 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, 12 ಜನರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಥಳೀಯರು ಇದನ್ನು ನಿರಾಕರಿಸುತ್ತಿದ್ದಾರೆ. ಆಸ್ಪತ್ರೆ, ಜಿಲ್ಲಾಡಳಿತ ನಿಖರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ.  

ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ 24 ಜನರು ಮೃತಪಟ್ಟಿದ್ದಾರೆ. ಎಲ್ಲರೂ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಚಾಮರಾಜನಗರ ಡಿಸಿ ಡಾ.ಎಂ‌.ಆರ್. ರವಿ ಹೇಳಿದ್ದಾರೆ.

ಕೋವಿಡ್‌ಯೇತರ ರೋಗಿಗಳಿಗೂ ಆಮ್ಲಜನಕ ಕೊರತೆ ಉಂಟಾಗಿದ್ದು, ಜೀವ ಹಾನಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಆಸ್ಪತ್ರೆಗೆ ಜಿಲ್ಲಾಧಿಕಾರಿ‌ ಡಾ.ಎಂ.ಆರ್.ರವಿ, ಎಸ್ ಪಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದು, ವೈದ್ಯರೊಂದಿಗೆ ಚರ್ಚ ನಡೆಸುತ್ತಿದ್ದಾರೆ. ಸಭೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೂ ಭಾಗಿಯಾಗಿದ್ದಾರೆ.

ಮೈಸೂರಿನಿಂದ ಸಿಲಿಂಡರ್ ಪೂರೈಕೆಯಾಗದೇ ಇದ್ದುದರಿಂದ ಈ ಸಮಸ್ಯೆ ಉಂಟಾಗಿದೆ. ಕೊನೆ ಕ್ಷಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮಧ್ಯಪ್ರವೇಶಿಸಿ 50 ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದರಿಂದ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ. 

ಕೋವಿಡ್ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿವೆ, 53 ಐಸಿಯು ಹಾಗೂ 55 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಬಹುತೇಕ ಎಲ್ಲವೂ ಭರ್ತಿಯಾಗಿವೆ.

ಆಮ್ಲಜನಕ ಪೂರೈಕೆ ಇಲ್ಲದೇ ಎಲ್ಲರಿಗೂ ಸಮಸ್ಯೆಯಾಗಿದೆ ಎಂಬುದು ಗೊತ್ತಾಗಿದೆ.

ಆಸ್ಪತ್ರೆಯಲ್ಲಿ‌ ಆವರಣದಲ್ಲಿ ನಿರ್ಮಾಣವಾಗಿರುವ 6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕದ ಆಮ್ಲಜನಕವು ಒಂದೂವರೆ ದಿನಕ್ಕೆ ಬರುತ್ತಿದೆ. ಭಾನುವಾರ ಸಂಜೆ ಖಾಲಿಯಾಗಿದೆ. ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್‌ಗಳು ಬರಬೇಕಿತ್ತು. ಆದರೆ ಮೈಸೂರಿಂದ ಹೊರ ಜಿಲ್ಲೆಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಹಾಗಾಗಿ ಸಿಲಿಂಡರ್ ಬಂದಿಲ್ಲ. ಇದರಿಂದ ಸಮಸ್ಯೆಯಾಗಿದೆ.


ಪ್ರತಾಪ್ ಸಿಂಹ ಅವರ ಫೇಸ್‌ಬುಕ್ ಪೋಸ್ಟ್

ಈ ಬಗ್ಗೆ ರಾತ್ರಿ ಫೇಸ್‌ಬುಕ್ ಪೋಸ್ಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ. ಈ ಕುರಿತಂತೆ ಚಾಮರಾಜನಗರ ಡಿಸಿ ಮತ್ತು ಮೈಸೂರಿನ ಆಮ್ಲಜನಕ ಸರಬರಾಜು ಹೊಣೆ ಹೊತ್ತಿರುವ ಎಡಿಸಿ ನಾಗರಾಜ್ ಅವರ ಜೊತೆ ಕಾನ್ಫರೆನ್ಸ್ ಕಾಲ್ ಮೂಲಕ ಮಾತುಕತೆ ನಡೆಸಿದ್ದು, ಸದ್ಯಕ್ಕೆ, 50 ಸಿಲಿಂಡರ್ ಕೊಟ್ಟು, ಸ್ಟಾಕ್ ಬಂದ ಬಳಿಕ ವಾಪಸ್ ಪಡೆಯುವುದಾಗಿ ಹೇಳಿದ್ದರು.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು