ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದೀಪಾವಳಿ ಹಬ್ಬದ ಖರೀದಿ ಮೇಲೆ ಕೋವಿಡ್‌ ನೆರಳು

ಮನೆಯಲ್ಲೇ ಬೆಳಕಿನ ಹಬ್ಬ ಆಚರಿಸಲು ಸಿದ್ಧತೆ, ಹಣತೆ, ಪಂಜು ಮಾರಾಟ ನಿಧಾನ
Last Updated 12 ನವೆಂಬರ್ 2020, 12:42 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೋವಿಡ್‌ ಹಾವಳಿಯ ನಡುವೆಯೇ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ಮನೆಯ ಮಟ್ಟಿಗೆ ಸಂಭ್ರಮ, ಸಡಗರದಿಂದ ಹಬ್ಬ ಆಚರಿಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹಬ್ಬಕ್ಕೆ ಮನೆಗಳ ಮುಂಭಾಗ ದೀಪಗಳನ್ನು ಹಚ್ಚುವುದು ವಾಡಿಕೆ. ಜತೆಗೆ ಪಂಜು ಉರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.ಮಾರುಕಟ್ಟೆಗೆ ಈಗಾಗಲೇ ಹಣತೆ ಹಾಗೂ ಪಂಜುಗಳು ಬಂದಿದ್ದು, ಮಾರಾಟ ಇನ್ನೂ ಬಿರುಸು ಪಡೆದಿಲ್ಲ.

ಕೋವಿಡ್‌ ಕಾರಣದಿಂದಾಗಿಈ ಬಾರಿ ಹಿಂದಿನ ವರ್ಷಗಳಷ್ಟು ವಹಿವಾಟು ನಡೆಯುವ ವಿಶ್ವಾಸ ವ್ಯಾಪಾರಿಗಳಿಗಿಲ್ಲ. ಹಾಗಿದ್ದರೂ, ಜನನಿಬಿಡ ಪ್ರದೇಶ, ಮಾರುಕಟ್ಟೆ ಹಾಗೂ ಸಂತೆಗಳಲ್ಲಿ ಪಂಜು ಹಾಗೂ ಮಣ್ಣಿನ ದೀಪಗಳು ಹಾಗೂ ಪಿಂಗಾಣಿ ದೀಪಗಳ ಮಾರಾಟಕ್ಕೆ ಅವರು ಮುಂದಾಗಿದ್ದಾರೆ.

ಕೋವಿಡ್‌ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದ್ದರೂ, ಇನ್ನೂ ಎಚ್ಚರಿಕೆ ಅಗತ್ಯವಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಬರುತ್ತಿಲ್ಲ. ಮಾರುಕಟ್ಟೆ, ಸಂತೆಗಳಲ್ಲಿ ಮೊದಲ ಜನಸಂದಣಿ ಕಾಣುತ್ತಿಲ್ಲ. ಹಾಗಾಗಿ, ಪಂಜುಗಳನ್ನು ಖರೀದಿಸುವವರು ಕಡಿಮೆಯಾಗಿದ್ದಾರೆ.

ಮೊದಲೆಲ್ಲ ಕಾಡಂಚಿನ ಗ್ರಾಮಸ್ಥರು ಕಾಡುಗಳಿಗೆ ತೆರಳಿ ಗಿಡ ಮರಗಳನ್ನು ಕತ್ತರಿಸಿ ಪಂಜನ್ನು ಸಿದ್ಧಪಡಿಸಿಕೊಂಡು ಪಟ್ಟಣ ಪ್ರದೇಶ, ಸಂತೆ, ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದರು. ಈಚಿನ ದಿನಗಳಲ್ಲಿ ಅರಣ್ಯ ಇಲಾಖೆ ಕಾಡು ಪ್ರವೇಶ ನಿರ್ಬಂಧಿಸಿದ ಮೇಲೆ ದೊಡ್ಡ ಕೆರೆ ಬಯಲುಗಳು ಹಾಗೂ ಕಬಿನಿ ನಾಲೆ ಸುತ್ತಲೂ ಬೆಳೆದಿರುವ ಚನ್ನರ್ಕೆ ಗಿಡ ಹಾಗೂ ವಿವಿಧ ಜಾತಿಯ ಗಿಡ ಮರಗಳನ್ನು ಕತ್ತರಿಸಿ ಅವುಗಳಿಂದ ಪಂಜು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

‘ಈ ಹಿಂದೆ ಜನರು ಪಂಜು ಖರೀದಿಸಿ ಹಬ್ಬ ಆಚರಿಸುವ ಮೂರು ದಿನಗಳ ಕಾಲ ಪಂಜು ಉರಿಸುತ್ತಿದ್ದರು. ಈಚಿನ ದಿನಗಳಲ್ಲಿ ಪಂಜು ಉರಿಸುವುದು ಕಡಿಮೆಯಾಗಿದೆ. ಇದರಿಂದಾಗಿ ವ್ಯಾಪಾರಕ್ಕೂ ಹೊಡೆತಬಿದ್ದಿದೆ’ ಎಂದು ಪಂಜು ವ್ಯಾಪಾರಿ ಶಿವಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೀಪಾವಳಿ ಹಾಗೂ ಕಾರ್ತಿಕ ಮಾಸದಲ್ಲಿ ಮನೆಗಳ ಮುಂಭಾಗ ಮಣ್ಣಿನ ಹಣತೆಗಳನ್ನು ಹಚ್ಚಿಡುತ್ತಿದ್ದರು. ಆಗ ಬೇಡಿಕೆಯೂ ಹೆಚ್ಚಾಗಿರುತಿತ್ತು. ಈಗ ಆಕರ್ಷಕ ಪಿಂಗಾಣಿ ಹಣತೆಗಳು ಹೆಚ್ಚಿದಂತೆ ಮಣ್ಣಿನ ಹಣತೆ ಕಡಿಮೆಯಾಗಿದೆ. ಮಣ್ಣಿನ ಹಣತೆಗಳನ್ನೇ ಹೆಚ್ಚಾಗಿ ಮಾರುತ್ತಿದ್ದೆವು. ಪಿಂಗಾಣಿ ಹಣತೆ ಬಂದ ನಂತರ ಬದುಕು ಸಾಗಿಸುವುದು ಕಷ್ಟವಾಗಿದೆ’ ಎಂಬುದು ಮಾರಾಟಗಾರರ ಮಾತು.

‘ಮಣ್ಣಿನ ಹಾಗೂ ಪಿಂಗಾಣಿ ಹಣತೆಗಳ ಒಂದು ಜೊತೆಗೆ ₹10ಕ್ಕೆ ಮಾರಾಟವಾಗುತ್ತಿವೆ. ಎರಡಕ್ಕೂ ಒಂದೇ ಬೆಲೆ ಇರುವುದರಿಂದ ಪಿಂಗಾಣಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಹಣತೆ ವ್ಯಾಪಾರಿ ಅಬ್ದುಲ್ ಜಬ್ಬಾರ್ ಅವರು ಹೇಳಿದರು.

ಚಾಮರಾಜನಗರದಲ್ಲೂ ಬೇಡಿಕೆ ಇಲ್ಲ

ಜಿಲ್ಲಾ ಕೇಂದ್ರದ ಚಾಮರಾಜನಗರದಲ್ಲೂ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು ತಳ್ಳುಗಾಡಿಗಳ ಮೂಲಕ ಹಣತೆಗಳ ಮಾರಾಟ ಆರಂಭಿಸಿದ್ದಾರೆ. ಈ ವರ್ಷ ವ್ಯಾಪಾರ ಕಡಿಮೆ ಎಂಬುದು ಅವರ ಮಾತು.

ಕೋವಿಡ್‌ ಕಾರಣದಿಂದ ದೇವಸ್ಥಾನಗಳಲ್ಲಿ ದೀಪಾವಳಿ ಹಾಗೂ ಕಾರ್ತಿಕ ಮಾಸದ ಸಂದರ್ಭದಲ್ಲಿ ಅದ್ಧೂರಿ ಆಚರಣೆಗಳಿಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಹಣತೆಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ.

‘ಹಬ್ಬಕ್ಕೆ ನಾಲ್ಕೈದು ದಿನಗಳಿರುವಾಗಲೇ ನಮಗೆ ವ್ಯಾಪಾರ ಇರುತ್ತಿತ್ತು. ಈ ಬಾರಿ ಜನರು ಹೆಚ್ಚು ಹಣತೆಗಳನ್ನು ಖರೀದಿಸುತ್ತಿಲ್ಲ. ಸಾಂಪ್ರದಾಯಿಕ ಆಚರಣೆಗಾಗಿ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಕಾರ್ತಿಕ ಮಾಸದಲ್ಲೂ ಅದ್ಧೂರಿ ಆಚರಣೆ ಇಲ್ಲದಿರುವುದರಿಂದ ವ್ಯಾಪಾರ ಕಡಿಮೆ’ ಎಂದು ಚಾಮರಾಜನಗರದ ವ್ಯಾಪಾರಿ ದಿನೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT