ಸೋಮವಾರ, ಆಗಸ್ಟ್ 2, 2021
21 °C
60 ವರ್ಷಕ್ಕಿಂತ ಹೆಚ್ಚು ವಯಸ್ಸಿನ 10, ಇಬ್ಬರು ಎಚ್‌ಐವಿ ಸೋಂಕಿತರು, ಇಬ್ಬರು ಕ್ಷಯ ರೋಗಿಗಳು ಸೋಂಕು ಮುಕ್ತ

ಕೋವಿಡ್–19: ಗುಣಮುಖ ಪ್ರಮಾಣ ಶೇ 74.7

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರ ನಡುವೆಯೇ, ಗುಣಮುಖರಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಶನಿವಾರ ಒಂದೇ ದಿನ 40 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಜಿಲ್ಲೆಯ ಗುಣಮುಖ ಪ್ರಮಾಣ ಶೇ 74.7ರಷ್ಟಿದೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ 10 ಮಂದಿ, ಐವರು ಗರ್ಭಿಣಿಯರು, ಇಬ್ಬರು ಎಚ್‌ಐವಿ ಸೋಂಕಿತರು, ಇಬ್ಬರು ಕ್ಷಯ ರೋಗಿಗಳು ಕೋವಿಡ್‌–19 ಮುಕ್ತರಾಗಿ ಮನೆಗೆ ತೆರಳಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ ಒಂಬತ್ತು ಮಂದಿಯ ‍ಪೈಕಿ ಆರು ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶನಿವಾರ ಫೇಸ್‌ಬುಕ್‌ ಲೈವ್‌ನಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡರು. 

‘ಜಿಲ್ಲೆಯಲ್ಲಿ ಶುಕ್ರವಾರದವರೆಗೆ 234 ‍ಪ್ರಕರಣಗಳು ದಾಖಲಾಗಿದ್ದವು. ಶನಿವಾರದವರೆಗೆ 175 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಈ ಪೈಕಿ 97 ಜನ ಪುರುಷರು, 75 ಮಹಿಳೆಯರು, ಮೂವರು ಮಕ್ಕಳಿದ್ದಾರೆ. ಇದು ಅತ್ಯಂತ ಆಶಾದಾಯಕ ಬೆಳವಣಿಗೆ’ ಎಂದು ಹೇಳಿದರು.  

ಭಯ ಬೇಡ: ‘ಕೊರೊನಾ ವೈರಸ್‌ ಬಗ್ಗೆ ಹೆದರುವ ಅಗತ್ಯವಿಲ್ಲ. ಇದೊಂದು ಸಾಮಾನ್ಯ ಜ್ವರ. ನಮ್ಮಲ್ಲಿ ಆತ್ಮ ಸ್ಥೈರ್ಯ ಇರಬೇಕು. ಆದರೆ, ಜನರಲ್ಲಿ ನಿರ್ಲಕ್ಷ್ಯ ಭಾವನೆ ಕಾಣುತ್ತಿದೆ. ಕಾಯಿಲೆ ಬಗ್ಗೆ ಆಧಾರ ರಹಿತ ಭಯವೂ ಇದೆ. ಇದರಿಂದಾ‌ಗಿ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಅನಿಸಿಕೆ ನನ್ನದು’ ಎಂದರು.  

450 ಹಾಸಿಗೆ ಸಿದ್ಧ: ‘ಜಿಲ್ಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿದ್ದೇವೆ. ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ 450 ಹಾಸಿಗೆಗಳು ಸಿದ್ಧವಾಗಿದೆ. 1,000 ಹಾಸಿಗೆಗಳಿಗೆ ಬೇಕಾಗ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದರು.

‘234 ಪ್ರಕರಣಗಳ ಪೈಕಿ 192 ಪ್ರಕರಣಗಳಲ್ಲಿ, ಅಂದರೆ ಶೇ 82.5ರಷ್ಟು ಸೋಂಕಿತರಿಗೆ ಯಾವ ರೋಗ ಲಕ್ಷಣವೂ ಇರಲಿಲ್ಲ. ಇಂತಹವರನ್ನೆಲ್ಲ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ. ಕೋವಿಡ್‌ ಆಸ್ಪತ್ರೆಯಲ್ಲಿ ಮೂವರು ಐಸಿಯುನಲ್ಲಿದ್ದರೆ, 23 ಜನರು ವಾರ್ಡ್‌ನಲ್ಲಿದ್ದಾರೆ’ ಎಂದು ಹೇಳಿದರು. 

9 ದಿನಕ್ಕೆ ದುಪ್ಪಟ್ಟು: ಜಿಲ್ಲೆಯಲ್ಲಿ ಈಗಿನ ಪ್ರವೃತ್ತಿ ನೋಡಿದರೆ ಏಳರಿಂದ ಒಂಬತ್ತನೇ ದಿನಕ್ಕೆ ದುಪ್ಪಟ್ಟು ಆಗುತ್ತಿದೆ. ಹೀಗೆ ಮುಂದುವರಿದರೆ ಇನ್ನು 12 ದಿನಗಳಲ್ಲಿ 500ರ ಗಡಿ ದಾಟಿದರೂ ಅಚ್ಚರಿ ಇಲ್ಲ. ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜನರು ಆತಂಕ ಪಡುವ ಅಗತ್ಯವಿಲ್ಲ. ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು. 

ಸೇನಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ: ಪೊಲೀಸರು ಸೇರಿದಂತೆ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 24 ಮಂದಿಗೆ ಸೋಂಕು ತಗುಲಿದೆ. ಕೊರೊನಾ ಸೇನಾನಿಗಳಿಗಾಗಿ ಪ್ರತ್ಯೇಕವಾಗಿ 40 ಹಾಸಿಗೆಗಳ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದೇವೆ. ಸೋಮವಾರದಿಂದ ಈ ಕೇಂದ್ರಗಳು ಆರಂಭವಾಗಲಿವೆ ಎಂದು ಮಾಹಿತಿ ನೀಡಿದರು. 

‘ಕೋವಿಡ್‌–19ಗೆ ತುತ್ತಾದವರು ಮನೆಯಲ್ಲೇ ಪ್ರತ್ಯೇಕವಾಗಿರಲು (ಹೋಮ್‌ ಐಸೊಲೇಷನ್‌) ಬಯಸಿದರೆ ಅದಕ್ಕೂ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೂ ಸಿದ್ಧತೆ ಮಾಡಿಕೊಂಡಿದ್ದೇವೆ. ಇದಕ್ಕಾಗಿ ಟೆಲಿ ಮಾನಿಟರಿಂಗ್‌ ಸೆಂಟರ್‌ ಆರಂಭಿಸಿದ್ದೇವೆ. ದಿನದ 24 ಗಂಟೆಗಳ ಕಾಲವೂ ಇಲ್ಲಿ ವೈದ್ಯರು, ಸಿಬ್ಬಂದಿ ಲಭ್ಯವಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ದೂರವಾಣಿ ಮೂಲಕ ಸಲಹೆ ಸೂಚನೆ ನೀಡಲಿದ್ದಾರೆ’ ಎಂದು ಹೇಳಿದರು. 

140 ಕಂಟೈನ್‌ ಮೆಂಟ್‌ ವಲಯ: ‘ಜಿಲ್ಲೆಯಲ್ಲಿ ಈವರೆಗೂ ಸೋಂಕು ವ್ಯಾಪಕವಾಗಿ ಹರಡಿಲ್ಲ. ಅಂತರ ಜಿಲ್ಲೆ, ಅಂತರ ರಾಜ್ಯಕ್ಕೆ ಹೋಗಿಬಂದವರಿಗೆ ಸೋಂಕು ತಗುಲಿದ ಪ್ರಕರಣಗಳು ಹೆಚ್ಚಿವೆ. ಬೆಂಗಳೂರಿಗೆ ಹೋಗಿ ಬಂದ 103 ಮಂದಿ, ಮೈಸೂರಿಗೆ ಹೋಗಿ ಬಂದಿದ್ದ 33 ಮಂದಿ, ತಮಿಳುನಾಡಿಗೆ ಭೇಟಿ ನೀಡಿದ್ದ 33 ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ. ಸೋಂಕಿತರ ಕುಟುಂಬ, ಊರಿನವರು ಹೀಗೆ ಸ್ಥಳೀಯ ಮಟ್ಟದಲ್ಲಿ ಮಾತ್ರ ಕಾಯಿಲೆ ಹರಡಿದೆ’ ಎಂದು ಹೇಳಿದರು.  

ಜಿಲ್ಲೆಯಲ್ಲಿ ಇದುವರೆಗೆ 140 ಕಂಟೈನ್‌ಮೆಂಟ್‌ ವಲಯಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 25 ವಲಯಗಳನ್ನು ತೆರೆವುಗೊಳಿಸಲಾಗಿದೆ. 115 ಸಕ್ರಿಯ ಕಂಟೈನ್‌ಮೆಂಟ್‌ ವಲಯಗಳಿವೆ ಎಂದು ಮಾಹಿತಿ ನೀಡಿದರು.  

ಸೋಂಕು ತಡೆಗೆ ಐದು ಸೂತ್ರಗಳು

ಜಿಲ್ಲೆಯಲ್ಲಿ ಕೋವಿಡ್‌–19 ಹರಡುವಿಕೆ ಸರಣಿ ತುಂಡರಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಲೇ ಬೇಕಾದ ಐದು ಸೂತ್ರಗಳನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮುಂದಿಟ್ಟಿದ್ದಾರೆ.

1. ಸ್ವಯಂ ಜಾಗೃತಿ: ಪ್ರತಿಯೊಬ್ಬರೂ ಕೋವಿಡ್‌–19 ಬಗ್ಗೆ ಜಾಗೃತರಾಗಬೇಕು. 

2. ಸ್ವಯಂ ಪ್ರೇರಿತ ವರದಿ:  ಜ್ವರ, ನೆಗಡಿ, ಕೆಮ್ಮು ರೋಗಲಕ್ಷಣಗಳಿದ್ದರೆ ನಿರ್ಲಕ್ಷ್ಯ ಮಾಡದೆ, ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ಒಳಗಾಗಬೇಕು.

3. ಸ್ವಯಂ ಪರೀಕ್ಷೆ: ರೋಗ ಲಕ್ಷಣ ಇರುವವರು ಸ್ವಯಂ ಪ್ರೇರಿತರಾಗಿ ಕೋವಿಡ್‌–19 ಪರೀಕ್ಷೆ ಮಾಡಿಸಿಕೊಳ್ಳಬೇಕು. 

4. ಸ್ವಯಂ ಆಗಿ ಪ್ರತ್ಯೇಕಗೊಳ್ಳುವಿಕೆ (ಐಸೊಲೇಶನ್‌): ಸೋಂಕಿತರು, ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರು ಸ್ವಯಂ ಆಗಿ ಇತರರಿಂದ ದೂರ ಉಳಿಯಬೇಕು. 

5. ಸ್ವಯಂ ಲಾಕ್‌ಡೌನ್‌: ಹೊರ ಜಿಲ್ಲೆ, ರಾಜ್ಯ, ನಗರ, ಪಟ್ಟಣಗಳಿಗೆ ಅನಗತ್ಯವಾಗಿ ಹೋಗುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಕಾಲಹರಣ ಮಾಡುವುದನ್ನು ಕೆಲವು ವಾರ, ತಿಂಗಳುಗಳ ಮಟ್ಟಿಗೆ ಮುಂದೂಡಿ, ಮನೆಯಲ್ಲೇ ಇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.