ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ನ್ಯಾಯಬೆಲೆ ಅಂಗಡಿಯಲ್ಲೂ ‘ಪರೀಕ್ಷೆ’

ಹೊಸ 419 ಪ್ರಕರಣ, ಒಂದು ಸಾವು, 100 ಮಂದಿ ಗುಣಮುಖ
Last Updated 22 ಜನವರಿ 2022, 16:22 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಹರುಡುವಿಕೆ ತಡೆಯುವ ಉದ್ದೇಶದಿಂದ ಸರ್ಕಾರದ ಸೂಚನೆಯಂತೆ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸುತ್ತಿರುವ ಜಿಲ್ಲಾಡಳಿತ, ನ್ಯಾಯಬೆಲೆ ಅಂಗಡಿಗಳಲ್ಲೂ ರೋಗ ಲಕ್ಷಣಗಳುಳ್ಳ ಗ್ರಾಹಕರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ.

ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ಪ್ರತಿ ದಿನ 3,000 ಪರೀಕ್ಷೆಗಳನ್ನು ನಡೆಸಲು ಗುರಿ ನೀಡಿದೆ. ಪರೀಕ್ಷೆ ಗುರಿ ತಲುಪುವ ಉದ್ದೇಶ ಹಾಗೂ ಸೋಂಕು ಹರಡುವಿಕೆ ತಡೆಯುವ ಪ್ರಯತ್ನವಾಗಿ ನ್ಯಾಯಬೆಲೆ ಅಂಗಡಿಗಳಲ್ಲೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯಾದ್ಯಂತ 450 ನ್ಯಾಯಬೆಲೆ ಅಂಗಡಿಗಳಿದ್ದು, ಸಿಂಹಪಾಲು ಅಂಗಡಿಗಳು ಗ್ರಾಮೀಣ ಭಾಗಗಳಲ್ಲಿವೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಸೂಚನೆಯ ಮೇರೆಗೆ ಪಡಿತರ ಕಾರ್ಡ್‌ದಾರರಿಗೂ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಯೋಗಾನಂದ್‌ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರತಿವಾರ ಪಡಿತರ ವಿತರಿಸುವ ನಿಗದಿತ ದಿನದಂದು ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಗ್ರಾಹಕರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದ್ದಾರೆ.

‘ಸರ್ಕಾರ ನೀಡಿರುವ ಪರೀಕ್ಷಾ ಗುರಿಯನ್ನು ನಾವು ತಲುಪಬೇಕಿದೆ. ಇದು ಒಂದು ಕಾರಣ. ಇದಲ್ಲದೇ, ಹೆಚ್ಚು ಪರೀಕ್ಷೆ ನಡೆಸುವುದರಿಂದ ಪ್ರಕರಣಗಳು ಬೇಗ ಬೇಗ ಪತ್ತೆಯಾಗುತ್ತವೆ. ಚಿಕಿತ್ಸೆಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜನರು ಸೇರುವ ಪ್ರದೇಶಗಳಾದ ಎಪಿಎಂಸಿ, ರೈತ ಸಂಪರ್ಕ ಕೇಂದ್ರ, ನ್ಯಾಯಬೆಲೆ ಅಂಗಡಿಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾ
ರಿಗಳಿಗೆ ಸೂಚಿಸಲಾಗಿತ್ತು‘ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಮಕ್ಕಳ ಪರೀಕ್ಷೆಗೂ ಒತ್ತು: ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್‌ ಪರೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು, ’ಸರ್ಕಾರ ನಮಗೆ ಪ್ರತಿ ದಿನ ₹1,500 ಆರ್‌ಟಿಪಿಸಿಆರ್‌, 1,000 ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲು ಸೂಚಿಸಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ನಾವು ಪ್ರತಿ ದಿನ 2,000ಕ್ಕೂ ಹೆಚ್ಚು ಆರ್‌ಟಿಪಿಸಿಆರ್‌ ಹಾಗೂ 1,000ದಷ್ಟು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮಾಡುತ್ತಿದ್ದೇವೆ. ಪ್ರತಿ ದಿನ ನಮ್ಮ ಪರೀಕ್ಷೆ ಸಂಖ್ಯೆ 3,000ಕ್ಕೂ ಹೆಚ್ಚಿದೆ‘ ಎಂದರು.

’ರೋಗ ಲಕ್ಷಣ ಹೊಂದಿರುವ ಎಲ್ಲರನ್ನೂ ಪರೀಕ್ಷೆ ನಡೆಸಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ಇರುವುದರಿಂದ ಯಾವುದೇ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ರೋಗ ಲಕ್ಷಣ ಕಂಡು ಬಂದರೆ ಅಥವಾ ಸೋಂಕು ದೃಢಪಟ್ಟರೆ ಆ ಶಾಲೆಯ ಎಲ್ಲ ಮಕ್ಕಳನ್ನೂ ಪರೀಕ್ಷೆಗೆ ಒಳಪ‍ಡಿಸಲಾಗುತ್ತಿದೆ. ಜನರ ವಿಚಾರದಲ್ಲೂ ಅಷ್ಟೇ. ರೋಗ ಲಕ್ಷಣ ಇರುವವರಿಗೆ ಎಲ್ಲರಿಗೂ ಪರೀಕ್ಷೆ ಮಾಡತ್ತಿದ್ದೇವೆ‌. ಜಿಲ್ಲಾ ಪಂಚಾಯಿತಿ ಸಿಇಒ ಅವರ ಸಲಹೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲೂ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ‘ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT