ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೊದಲ ಕೋವಿಡ್‌–19 ಪ್ರಕರಣ ದೃಢ

Last Updated 9 ಜೂನ್ 2020, 7:50 IST
ಅಕ್ಷರ ಗಾತ್ರ

ಚಾಮರಾಜನಗರ: ಇದುವರೆಗೂ ಒಂದೇ ಒಂದು ಪ್ರಕರಣ ದಾಖಲಾಗದೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮೊದಲ ಕೋವಿಡ್‌–19 ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಮುಂಬೈನಿಂದ ಹನೂರು ತಾಲ್ಲೂಕಿನ ಪಾಲಿಮೇಡು ಗ್ರಾಮಕ್ಕೆ ಬಂದಿದ್ದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದ್ದು, ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

‘ಸೋಂಕಿತ ವ್ಯಕ್ತಿ ಮೂಲತಃ ಮಹಾರಾಷ್ಟ್ರದವರು, ಜಿಲ್ಲೆಯವರಲ್ಲ. ಹಾಗಾಗಿ, ಜಿಲ್ಲೆ ಇನ್ನೂ ಹಸಿರು ವಲಯದಲ್ಲೇ ಇದೆ. ಜನರು ಆತಂಕ ಪಡಬೇಕಾಗಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

ಶುಕ್ರವಾರ ಬಂದಿದ್ದ ಕುಟುಂಬ: ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಅವರು ವಿವರಗಳನ್ನು ನೀಡಿದರು.

‘ತಾಯಿ (45 ವಯಸ್ಸು) ಹಾಗೂ ಇಬ್ಬರು ಮಕ್ಕಳಿದ್ದ (24 ಮತ್ತು 22 ವಯಸ್ಸು) ಕುಟುಂಬವೊಂದು ಮುಂಬೈನಿಂದ ಶುಕ್ರವಾರ (ಜೂನ್‌) ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಪಾಲಿಮೇಡು ಎಂಬ ಊರಿಗೆ ಬಂದಿತ್ತು. ಬೆಂಗಳೂರುವರೆಗೆ ಅವರು ರೈಲಿನಲ್ಲಿ ಬಂದಿದ್ದರು. ಅಲ್ಲಿಂದ ಮಹಿಳೆಯ ತಮ್ಮ (ಇಬ್ಬರು ಮಕ್ಕಳ ಮಾವ) ಕಾರಿನಲ್ಲಿ ಊರಿಗೆ ಕರೆದುಕೊಂಡು ಬಂದಿದ್ದರು. ಪಾಲಿಮೇಡು ತಲುಪುವಾಗ ಶುಕ್ರವಾರ ರಾತ್ರಿ 9 ಗಂಟೆಯಾಗಿತ್ತು’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.

‘ಮೂವರೂ ಮಹಾರಾಷ್ಟ್ರದಿಂದ ಬಂದಿದ್ದರಿಂದ ಬೆಂಗಳೂರಿನಿಂದ ಅವರನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿ, ಶನಿವಾರ ಬೆಳಿಗ್ಗೆ ಅವರನ್ನು ಕೊಳ್ಳೇಗಾಲದ ಫಿವರ್‌ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ಅವರನ್ನು ಪರೀಕ್ಷಿಸಿ ಸರ್ಕಾರದ ನಿಯಮಾವಳಿ ಪ್ರಕಾರ, ಹನೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮಹಿಳೆ ಮಧುಮೇಹಿಯಾಗಿದ್ದರಿಂದ ಅವರಿಗೆ ಶನಿವಾರವೇ ಅವರ ಗಂಟಲ ದ್ರವವನ್ನು ತೆಗೆದು ಕೋವಿಡ್‌–19 ಪರೀಕ್ಷೆ ನಡೆಸಲಾಗಿದೆ. ಅದು ನೆಗೆಟಿವ್‌ ಬಂದಿದೆ’ ಎಂದು ಅವರು ಹೇಳಿದರು.

ಕಾಣಿಸಿಕೊಂಡ ಭೇದಿ: ‘ಅಣ್ಣ ತಮ್ಮಂದಿರ ಪೈಕಿ ತಮ್ಮನಿಗೆ ಭಾನುವಾರ ಹೊಟ್ಟೆನೋವು ಹಾಗೂ ಭೇದಿ ಕಾಣಿಸಿಕೊಂಡಿತು. ತಕ್ಷಣ ಅವರನ್ನು ಚಾಮರಾಜನಗರದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ, ಕೋವಿಡ್‌–19 ಪರೀಕ್ಷೆ ನಡೆಸಲಾಯಿತು. ಅವರ ಜೊತೆಗಿದ್ದ ಅಣ್ಣನ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಯಿತು. ತಮ್ಮನ ವರದಿ ಪೊಸಿಟಿವ್‌ ಬಂದರೆ ಅಣ್ಣನ ವರದಿ ನೆಗೆಟಿವ್‌ ಬಂತು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಕ್ವಾರಂಟೈನ್‌ಗೆ: ‘ಸೋಂಕಿತ ಯುವಕನ ತಾಯಿ ಮತ್ತು ಅಣ್ಣನ ‍ಪ‍ರೀಕ್ಷಾ ವರದಿ ನೆಗೆಟಿವ್‌ ವರದಿ ಬಂದಿದ್ದರೂ ಅವರನ್ನು ಕ್ವಾರಂಟೈನ್‌ ಇರಿಸಲಾಗಿದೆ. ಕುಟುಂಬವನ್ನು ಕಾರಿನಲ್ಲಿ ಕರೆದುಕೊಂಡು ಬಂದ ವ್ಯಕ್ತಿಯನ್ನು ಹಾಗೂ ಅವರ ಕುಟುಂಬದ (ಪತ್ನಿ ಹಾಗೂ ಇಬ್ಬರು ಮಕ್ಕಳು) ಸದಸ್ಯರನ್ನು ಹಾಸ್ಟೆಲ್‌ಗಳಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಎಲ್ಲರ ಆರೋಗ್ಯವೂ ಉತ್ತಮವಾಗಿದೆ’ ಎಂದರು.

ಮಾಹಿತಿ ನೀಡಿರಲಿಲ್ಲ...

ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂಬುದು ನಿಯಮ.

‘ಮೂವರು ಕೂಡ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಬೆಂಗಳೂರಿನಲ್ಲಿ ರೈಲಿನಿಂದ ಇಳಿದ ಬಳಿಕ ಅಲ್ಲಿ ಮಾಹಿತಿಯನ್ನು ವಿವರಗಳನ್ನು ಕಲೆ ಹಾಕಲಾಗುತ್ತದೆ. ಅದನ್ನು ಆಯಾ ಜಿಲ್ಲೆಗಳಿಗೆ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ನಮಗೆ ಮಾಹಿತಿ ಬಂದಿರಲಿಲ್ಲ’ ಎಂದು ಡಾ.ಎಂ.ಆರ್‌.ರವಿ ಅವರು ಹೇಳಿದರು.

ತಾಯಿಯನ್ನು ಬಿಟ್ಟು ಹೋಗುವುದಕ್ಕೆ ಬಂದಿದ್ದರು..

‘ಸೋಂಕಿತ ವ್ಯಕ್ತಿ ಮಹಾರಾಷ್ಟ್ರದಲ್ಲೇ ಹುಟ್ಟಿ ಬೆಳೆದಿದ್ದಾರೆ. ಜಿಲ್ಲೆಗೂ ಅವರಿಗೂ ಸಂಬಂಧವಿಲ್ಲ. ಮಹಾರಾಷ್ಟ್ರದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗಿರುವುದರಿಂದ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ತಾಯಿಯನ್ನು ಜಿಲ್ಲೆಯಲ್ಲಿರುವ ಮಾವನ ಊರಿನಲ್ಲಿ ಬಿಡುವ ಉದ್ದೇಶದಿಂದ ಜಿಲ್ಲೆಗೆ ಬಂದಿದ್ದರು’ ಎಂದು ರವಿ ಅವರು ಮಾಹಿತಿ ನೀಡಿದರು.

‘ಹೊರ ರಾಜ್ಯದಿಂದ ಬಂದು ಇಲ್ಲಿ ಪ್ರಕರಣ ದೃಢಪಟ್ಟಿರುವುದರಿಂದ ಇದು ಇತರೆ ಪ್ರಕರಣಗಳ ಪಟ್ಟಿಯಲ್ಲಿ ಬರುತ್ತದೆ. ನಮ್ಮಲ್ಲಿ ಸೋಂಕು ಖಚಿತವಾಗಿರುವುದರಿಂದ ನಾವೇ ಚಿಕಿತ್ಸೆ ನೀಡಬೇಕಾಗಿದೆ. ಇಲ್ಲೇ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

ಮಹಾರಾಷ್ಟ್ರದಿಂದ ಬಂದವರು 17 ಮಂದಿ

ಜಿಲ್ಲೆಗೆ ಇದುವರೆಗೆ ಮಾಹಾರಾಷ್ಟ್ರದಿಂದ 17 ಮಂದಿ ಬಂದಿದ್ದಾರೆ. ಈ ಪೈಕಿ ಇನ್ನೂ ಏಳು ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ 70 ಮಂದಿ ಸದ್ಯ ವಿವಿಧ ಹಾಸ್ಟೆಲ್‌ಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT