ಭಾನುವಾರ, ಆಗಸ್ಟ್ 1, 2021
27 °C
ಭಾನುವಾರ ಮತ್ತೆ ಇಬ್ಬರು ಮಹಿಳೆಯರ ಸಾವು, 37 ಸೋಂಕು ಪತ್ತೆ, 33 ಮಂದಿ ಗುಣಮುಖ

ಕೋವಿಡ್‌–19: ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಭಾನುವಾರವೂ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿರುವವರ ಸಂಖ್ಯೆ 10ಕ್ಕೆ ಏರಿದೆ. ಶನಿವಾರವೂ ಇಬ್ಬರು ಮೃತಪಟ್ಟಿದ್ದರು.

ಆದರೆ, ಜಿಲ್ಲಾಡಳಿತ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಒಬ್ಬರು ಸಾವು ಎಂದು ಉಲ್ಲೇಖಿಸಲಾಗಿದೆ. ಇನ್ನೊಂದು ಪ್ರಕರಣದ ಪ್ರಸ್ತಾವ ಇಲ್ಲ. ಶನಿವಾರ ಅಂತ್ಯಕ್ರಿಯೆ ನಡೆದ ಬಳಿ ಸೋಂಕು ದೃಢಪಟ್ಟಿದ್ದ ಮೃತಪಟ್ಟಿದ್ದ ಯಳಂದೂರು ನಿವಾಸಿಯ ಸಾವಿನ ಬಗ್ಗೆಯೂ ಮಾಹಿತಿ ನೀಡಿಲ್ಲ. ಸೋಂಕು ಇದ್ದರೂ ಕೋವಿಡ್‌ಯೇತರ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿಂದಿನ ಒಂದು ಪ್ರಕರಣದಲ್ಲಿ ಕೋವಿಡ್‌ ಯೇತರ ಕಾರಣದಿಂದ ಸಾವು ಎಂದು ಜಿಲ್ಲಾಡಳಿತ ಉಲ್ಲೇಖಿಸಿತ್ತು. ಈ ಎರಡು ಪ್ರಕರಣಗಳನ್ನು ಪರಿಗಣಿಸಿದರೆ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 12ಕ್ಕೆ ಏರುತ್ತದೆ.

ಸೋಂಕಿನಿಂದ ಇಬ್ಬರು ಮೃತಪಟ್ಟಿರುವುದನ್ನು ಕೋವಿಡ್‌ ಆಸ್ಪತ್ರೆ ಮೂಲಗಳು ದೃಢಪಡಿಸಿವೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ರೋಗಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ‍್‌ಲೋಡ್‌ ಮಾಡಬೇಕಾಗಿದ್ದು, ಅಂಕಿ ಸಂಖ್ಯೆಗಳು ಇನ್ನೂ ಅಪ್‌ಡೇಟ್‌ ಆಗದಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಹೇಳಿದರು.

ಯಳಂದೂರು ತಾಲ್ಲೂಕಿನ ಗುಂಬಳ್ಳಿಯ 55 ವರ್ಷದ ಮಹಿಳೆ (ರೋಗಿ ಸಂಖ್ಯೆ 1,40,635) ಹಾಗೂ ಕೊಳ್ಳೇಗಾಲದ 58 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯಸಂಸ್ಕಾರವೂ ಸರ್ಕಾರದ ಶಿಷ್ಟಾಚಾರದಂತೆ ನಡೆದಿದೆ. ಗುಂಬಳ್ಳಿ ಮಹಿಳೆ ಮೃತಪಟ್ಟಿರುವ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ. ಇನ್ನೊಬ್ಬರ ಸಾವಿನ ಬಗ್ಗೆ ಪ್ರಸ್ತಾಪಿಸಿಲ್ಲ. 

ಗುಂಬಳ್ಳಿಯ ಮಹಿಳೆ ಶನಿವಾರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ತಡರಾತ್ರಿ ಒಂದು ಗಂಟೆಯ ಹೊತ್ತಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಬಿಜೆಪಿ ಕಾರ್ಯಕರ್ತರು, ಯಡಬೆಟ್ಟದ ಬಳಿ ಗುರುತಿಸಲಾಗಿರುವ ಸರ್ಕಾರಿ ಜಮೀನಿನಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳಂತೆ ನೆರವೇರಿಸಿದ್ದಾರೆ.

ಕೊಳ್ಳೇಗಾಲ ಮಹಿಳೆಯ ಅಂತ್ಯ ಸಂಸ್ಕಾರವನ್ನು ಪಿಎಫ್‌ಐ ಕಾರ್ಯಕರ್ತರು ನಗರದ ಮುಸ್ಲಿಮರ ಸ್ಮಶಾನದಲ್ಲಿ ಇಸ್ಲಾಂ ವಿಧಿವಿಧಾನಗಳಂತೆ ನಡೆಸಿದ್ದಾರೆ.

37 ಪ್ರಕರಣ: ಜಿಲ್ಲೆಯಲ್ಲಿ ಭಾನುವಾರ 37 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. 33 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 745 ಪ್ರಕರಣಗಳು ವರದಿಯಾಗಿದ್ದು, 496 ಸೋಂಕಿತರು ಗುಣಮುಖರಾಗಿದ್ದಾರೆ. 239 ಸಕ್ರಿಯ ಪ್ರಕರಣಗಳಿವೆ. ಎಂಟು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಾನುವಾರ 486 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ 283 ಹಾಗೂ ಆ್ಯಂಟಿಜೆನ್‌ ಕಿಟ್‌ ಮೂಲಕ 203 ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 18 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟರೆ, ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಮೂರು ಪ್ರಕರಣಗಳು ಮೈಸೂರು ಜಿಲ್ಲೆಗೆ ಸಂಬಂಧಿಸಿದವು. 

ಜಿಲ್ಲೆಯಲ್ಲಿ ವರದಿಯಾಗಿರುವ 37 ಪ್ರಕರಣಗಳಲ್ಲಿ ಒಬ್ಬರಿಗೆ ಸೋಂಕು ಇರುವುದು ಮೈಸೂರಿನಲ್ಲಿ ದೃಢಪಟ್ಟಿದೆ. ಚಾಮರಾಜನಗರದಲ್ಲಿ ಅತಿ ಹೆಚ್ಚು ಅಂದರೆ  15 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 9, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಎಂಟು, ಹನೂರು ತಾಲ್ಲೂಕಿನಲ್ಲಿ ಮೂವರು ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಇಬ್ಬರಿಗೆ ಸೋಂಕು ದೃಢ‍ಪಟ್ಟಿದೆ. 

ಗುಣಮುಖರಾಗಿರುವ 33 ಮಂದಿಯಲ್ಲಿ ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕುಗಳ ತಲಾ 11, ಗುಂಡ್ಲುಪೇಟೆ ತಾಲ್ಲೂಕಿನ ಆರು, ಹನೂರು ತಾಲ್ಲೂಕಿನ ಮೂವರು, ಯಳಂದೂರು ತಾಲ್ಲೂಕಿನ ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರಿದ್ದಾರೆ. 

ಅಂತ್ಯಕ್ರಿಯೆಯಲ್ಲಿ ಬಿಜೆಪಿಯ ನಾಗಶ್ರೀ ಭಾಗಿ

ಕೋವಿಡ್‌ನಿಂದಾಗಿ ಮೃತಪಟ್ಟ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಮಹಿಳೆಯ ಅಂತ್ಯ ಸಂಸ್ಕಾರವನ್ನು ಬಿಜೆಪಿ ಕಾರ್ಯಕರ್ತರು ನೆರವೇರಿಸಿದ್ದು, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಅವರೂ ಭಾಗವಹಿಸಿ ಮಾನವೀಯತೆ ಮೆರೆದಿದ್ದಾರೆ. 

ಕೆಲವು ದಿನಗಳ ಹಿಂದೆ ಸೋಂಕಿನಿಂದ ಮುಕ್ತವಾದ ಬಳಿಕ ಮೃತಪಟ್ಟಿದ್ದ ಸಂತೇಮರಹಳ್ಳಿ ನಿವಾಸಿಯ ಅಂತ್ಯಕ್ರಿಯೆಯಲ್ಲೂ ಅವರು ಭಾಗವಹಿಸಿದ್ದರು. 

ನಾಗಶ್ರೀ ಅವರೊಂದಿಗೆ ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ರಾಜೇಶ್‌ ನಾಯಕ್‌, ಯುವ ಮೋರ್ಚಾ ಉಪಾಧ್ಯಕ್ಷ ಶಿವು, ಒಬಿಸಿ ಮೋರ್ಚಾದ ಮಹೇಶ್‌, ಆಸ್ಪತ್ರೆ ಸಿಬ್ಬಂದಿ ಮಹದೇವಸ್ವಾಮಿ ಅವರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. 

ಹಿಂದೂ ಧಾರ್ಮಿಕ ವಿಧಿವಿಧಾನಗಳ ರೀತಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. 

ಆಯುಷ್‌ ಅಧಿಕಾರಿಯಾಗಿದ್ದ ಡಾ.ರಾಚಯ್ಯ ಸಾವು

ಜಿಲ್ಲಾ ಆಯುಷ್‌ ಅಧಿಕಾರಿಯಾಗಿದ್ದ ಡಾ.ಆರ್.ರಾಚಯ್ಯ ಅವರು ಮೈಸೂರಿನಲ್ಲಿ ಕೋವಿಡ್‌ನಿಂದಾಗಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಜುಲೈ 31ರಂದು ಅವರ ಸೇವಾ ನಿವೃತ್ತಿ ದಿನವಾಗಿತ್ತು.

ಜುಲೈ 27ರಂದು ಅವರಲ್ಲಿ ಸೋಂಕು ದೃಢಪಟ್ಟಿತ್ತು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದ್ದು, ಶನಿವಾರ ಉಸಿರಾಟದ ಸಮಸ್ಯೆ ಬಿಗಡಾಯಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು