ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಆನೆ ನೆನಪಿಸುವ ಘಟನೆ: ಆಹಾರದಲ್ಲಿದ್ದ ಬಾಂಬ್‌ ಸ್ಫೋಟಿಸಿ ಹಸು, ಎಮ್ಮೆ ಸಾವು

ಮಲೆಮಹದೇಶ್ವರ ವನ್ಯಧಾಮದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ: ವನ್ಯಪ್ರಾಣಿಗಳ ಬೇಟೆಗಾಗಿ ನಡೆಸಿದ ಕೃತ್ಯದ ಶಂಕೆ
Last Updated 20 ಡಿಸೆಂಬರ್ 2020, 12:16 IST
ಅಕ್ಷರ ಗಾತ್ರ

ಚಾಮರಾಜನಗರ/ಹನೂರು: ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಕಾಡಂಚಿನ ಪ್ರದೇಶಗಳಲ್ಲಿ ಸ್ಫೋಟಕ/ಸಿಡಿಮದ್ದು ಹುದುಗಿಸಿಟ್ಟಿದ್ದ ಆಹಾರವನ್ನು ಸೇವಿಸಿದ ಎಮ್ಮೆ ಹಾಗೂ ಹಸುವಿನ ಮುಖಗಳು ಸ್ಫೋಟದಿಂದಾಗಿ ಛಿದ್ರಗೊಂಡು ಎರಡೂ ಜಾನುವಾರುಗಳು ಮೃತಪಟ್ಟಿರುವ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ. ಈ ಘಟನೆಯು, ಕೇರಳದಲ್ಲಿ ಆಹಾರದಲ್ಲಿದ್ದ ಬಾಂಬ್‌ ತಿಂದು ಮೃತಪಟ್ಟ ಗರ್ಭಿಣಿಆನೆಯ ಪ್ರಕರಣವನ್ನು ನೆನಪಿಸಿದೆ.

ಒಂದು ಪ್ರಕರಣ ಅಕ್ಟೋಬರ್‌ 22ರಂದು ವಡಕೆಹಳ್ಳದ ಎಳಚಿಗೆರೆ ಬಳಿ ನಡೆದಿದ್ದರೆ, ಇನ್ನೊಂದು ಮಹದೇಶ್ವರ ಬೆಟ್ಟದ ಬಳಿಕ ತೋಕರೆ ಗ್ರಾಮದಲ್ಲಿ ಡಿಸೆಂಬರ್‌ 9ರಂದುನಡೆದಿದೆ.

ವನ್ಯಜೀವಿಗಳ ಬೇಟೆಯಾಡಲು ಆಹಾರದಲ್ಲಿ ಸ್ಫೋಟಕ ಇಡಲಾಗಿತ್ತೇ ಅಥವಾ ಬೆಳೆಗಳ ರಕ್ಷಣೆಗಾಗಿ ಸ್ಥಳೀಯರೇ ಸಿಡಿಮದ್ದನ್ನು ಮೇವಿನಲ್ಲಿ ಹುದುಗಿಸಿಟ್ಟಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.

ಅರಣ್ಯ ಇಲಾಖೆಯ ಸಿಬ್ಬಂದಿಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಸ್ಥಳೀಯರೂ ದೂರು ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಎಳಚಿಗೆರೆಯಲ್ಲಿ ಜೋಳದ ಹಿಟ್ಟಿನ ಉಂಡೆಯಲ್ಲಿ ಸ್ಫೋಟಕವನ್ನು ಇರಿಸಲಾಗಿತ್ತು.ಆಹಾರ ಎಂದುಕೊಂಡು ಎಮ್ಮೆ ಅದಕ್ಕೆ ಬಾಯಿ ಹಾಕಿದಾಗ ಸ್ಫೋಟಗೊಂಡಿದೆ. ಎಮ್ಮೆಯ ಬಾಯಿ ಸಂಪೂರ್ಣವಾಗಿ ಛಿದ್ರವಾಗಿದೆ. ಕೆಲವು ದಿನಗಳ ನಂತರ ಮೃತಪಟ್ಟಿದೆ.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಮ್ಮೆ ಮಾಲೀಕ ಮಹದೇವಸ್ವಾಮಿ ಅವರು, ‘ಅಕ್ಟೋಬರ್‌ 22ರಂದು ಎಮ್ಮೆ ಕೊಟ್ಟಿಗೆಯಿಂದ ಹೊರ ಹೋಗಿತ್ತು. 23ರಂದು ಅದು ವಾಪಸ್‌ ಆದಾಗ ಬಾಯಿ ಛಿದ್ರಗೊಂಡು ರಕ್ತಸ್ರಾವವಾಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅರಣ್ಯದಂಚಿನ ಡಿ. ಲೈನ್ ನಲ್ಲಿ ಸಿಡಿಮದ್ದು ಇಟ್ಟಿರುವುದು ಕಂಡು ಬಂದಿದೆ. ಆರು ತಿಂಗಳ ಹಿಂದೆ ಇದೇ ರೀತಿ ಮನೆ ಮುಂಭಾಗ ಇಟ್ಟಿದ್ದ ಸಿಡಿಮದ್ದು ಕಚ್ಚಿದ ಪರಿಣಾಮ ನಾಯಿಯೊಂದು ಮೃತಪಟ್ಟಿತ್ತು’ ಎಂದು ಹೇಳಿದರು.

ತೋಕರೆಯಲ್ಲಿ ನಡೆದ ಪ್ರಕರಣದಲ್ಲಿ ಮಾದಯ್ಯ ಎಂಬುವವರಿಗೆ ಸೇರಿದ ಬರಗೂರು ತಳಿಯ ಹಸು ಮೇಯುತ್ತಿದ್ದ ಸಂದರ್ಭದಲ್ಲಿ ಹುಲ್ಲಿನ ಕಟ್ಟಿನಲ್ಲಿ ಅಡಗಿಸಿಟ್ಟಿದ್ದ ಸಿಡಿಮದ್ದು ಸ್ಫೋಟಿಸಿದ್ದರಿಂದ ಮುಖ ಛಿದ್ರಗೊಂಡಿದೆ. ಕೆಲ ದಿನಗಳ ನಂತರ ಅದು ಕೂಡ ಮೃತಪಟ್ಟಿದೆ.

ಕಳ್ಳಬೇಟೆಗಾರರು ವನ್ಯಪ್ರಾಣಿಗಳನ್ನು ಬೇಟೆಯಾಡಲು ನಡೆಸಿರುವ ಯತ್ನ ಇದಾಗಿರಬಹುದು ಎಂದು ಶಂಕಿಸಲಾಗಿದೆ. ಎರಡು ಮೂರು ಪ್ರಕರಣಗಳು ನಡೆದಿರುವುದರಿಂದ ಸ್ಫೋಟಕ ಬಳಸಿ ಪ್ರಾಣಿಗಳನ್ನು ಬೇಟೆಯಾಡುವ ಜಾಲ ವನ್ಯಧಾಮದ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಅನುಮಾನವೂ ವ್ಯಕ್ತವಾಗಿದೆ.

ವನ್ಯಧಾಮದ ವ್ಯಾಪ್ತಿಯ ಕಾಡಂಚಿನ ಪ್ರದೇಶದಲ್ಲಿ ಕೃಷಿ ಜಮೀನುಗಳೂ ಇರುವುದರಿಂದ ಬೆಳೆ ರಕ್ಷಣೆಯ ಉದ್ದೇಶದಿಂದ ಸ್ಥಳೀಯರೇ ಸ್ಫೋಟಕವನ್ನು ಇರಿಸಿರುವ ಸಾಧ್ಯತೆಯೂ ಇದೆ ಎಂದು ಅರಣ್ಯ ಅಧಿಕಾರಿಗಳು ಊಹಿಸಿದ್ದಾರೆ.

ಸ್ಫೋಟಕ ಇರಿಸುವುದು ಕಾನೂನು ಬಾಹಿರ: ಡಿಸಿಎಫ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ಘಟನೆ ನಡೆದು ಹಲವು ದಿನಗಳು ಕಳೆದಿವೆ. ನಮ್ಮಲ್ಲಿ ಈವರೆಗೆ ಇಂತಹ ಪ್ರಕರಣಗಳು ವರದಿಯಾಗಿರಲಿಲ್ಲ. ಯಾವ ಉದ್ದೇಶಕ್ಕಾಗಿ ಆಹಾರದಲ್ಲಿ ಸ್ಫೋಟಕ ಇಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ. ತಕ್ಷಣವೇ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಕೃಷಿ ಜಮೀನುಗಳಿಗೆ ಅಥವಾ ಕಂದಾಯ ಜಮೀನಿಗೆ ವನ್ಯಜೀವಿಗಳು ಬಂದರೆ ಗ್ರಾಮಸ್ಥರು ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಸ್ಫೋಟಕ ಅಥವಾ ಸಿಡಿಮದ್ದನ್ನು ತಯಾರಿಸಿ ಅರಣ್ಯದ ಅಂಚಿನಲ್ಲಿ ಇಡುವುದು ಕಾನೂನು ಬಾಹಿರ. ಘಟನೆ ನಡೆದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಯಾರಾದರೂ ಸಿಡಿಮದ್ದು ತಯಾರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಿ, ಯಾರಾದರೂ ಇದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT