ಮಂಗಳವಾರ, ಮಾರ್ಚ್ 28, 2023
31 °C
ಹೆಚ್ಚು ಮಳೆಯಾದರು ಅನ್ನದಾತರಿಗೆ ಆಗದ ಪ್ರಯೋಜನ

ಗುಂಡ್ಲುಪೇಟೆ: ಸಕಾಲಕ್ಕೆ ಬಾರದ ಮಳೆ; ಬಾಡಿದ ಬೆಳೆ

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ವಿನ ಮಳೆಯಾಗಿದ್ದರೂ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಹಲವು ಬೆಳೆ ನಷ್ಟವಾಗಿದೆ.

ಮಳೆಯನ್ನೇ ನಂಬಿದ್ದ ರೈತರು ಸೂರ್ಯಕಾಂತಿ, ಕಡಲೆ, ಜೊಳ, ಹಲಸಂದೆ ಮತ್ತು ಹತ್ತಿ ಬೆಳೆಯುವ ಸಲುವಾಗಿ ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಏಪ್ರಿಲ್ ಮೇ ತಿಂಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಅನೇಕ ರೈತರ ಬೆಳೆ ನಾಶವಾಗಿದೆ.

ಹಂಗಳ ಮತ್ತು ತೆರಕಣಾಂಬಿ ಹೋಬಳಿಯಲ್ಲಿ ಮಳೆಯನ್ನು ನಂಬಿ ಕೆಲ ರೈತರು ಆಲೂಗಡ್ಡೆ ಹಾಗೂ ಈರುಳ್ಳಿ ಬಿತ್ತನೆ ಮಾಡಿದ್ದರು. ಕೆಲ ರೈತರ ಬೆಳೆ ಸಕಾಲದಲ್ಲಿ ಮಳೆಯಾಗದೆ ನಾಶವಾಯಿತು. ಇನ್ನೂ ಕೆಲವರ ಬೆಳೆ ಉಳಿದರೂ ಕಟಾವಿನ ಸ‌ಮಯದಲ್ಲಿ ಬಂದ ಮಲೆಯಿಂದಾಗಿ ನಷ್ಟ ಅನುಭವಿಸುವಂತಾಯಿತು.

ಲಾಕ್‌ ಡೌನ್‌ ಹೊಡೆತ: ಮುಂಗಾರು ಪೂರ್ವ ಅವಧಿಯಲ್ಲಿ ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಿ ಕೃಷಿ ಚಟುವಟಿಕೆ ತಯಾರಿ ಮಾಡೊಕೊಂಡಿದ್ದರು. ಆದರೆ ಕೋವಿಡ್‌ 2ನೇ ಅಲೆ ತಡೆಗಾಗಿ ಹೇರಲಾದ ಲಾಕ್‌ಡೌನ್‌ ಕಾರಣದಿಂದ ಹಲವು ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕೃಷಿ ಪರಿಕರಗಳು, ರಸಗೊಬ್ಬರಗಳು ಸಕಾಲದಲ್ಲಿ ದೊರೆಯದೆ ಬಿತ್ತನೆ ತಡವಾಯಿತು. ಸರಿಯಾದ ಸಮಯಕ್ಕೆ ಮಳೆಯಾಗದೆ ಸೂರ್ಯಕಾಂತಿ ಮತ್ತು ನೆಲಗಡಲೆ ಕೈ ಸೇರಲಿಲ್ಲ ಎಂದು ಕರಕಲಮಾದಳ್ಳಿ ಗ್ರಾಮದ ನಂಜುಂಡ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಲ್ಲೂಕಿನಲ್ಲಿ ಜನವರಿಯಿಂದ ಆಗಸ್ಟ್‌ 17ರವರೆಗಿನ ಅವಧಿಯಲ್ಲಿ  36.4 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ. ಈ ಬಾರಿ 38.1 ಸೆ.ಮೀ ಮಳೆಯಾಗಿದೆ. ನೈರುತ್ಯ ಮುಂಗಾರು ಅವಧಿಯಲ್ಲಿ ಜೂನ್‌ 1ರಿಂದ ಆಗಸ್ಟ್‌ 17ರವರೆಗೆ ಸಾಮಾನ್ಯವಾಗಿ 12.82 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 20.5 ಸೆಂ.ಮೀ ಮಳೆ ಸುರಿಯುವ ಮೂಲಕ ಶೇ 61ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. 

ಮಳೆ ಏನೋ ಚೆನ್ನಾಗಿ ಆಗಿದೆ. ಆದರೆ, ಅಗತ್ಯವಿರುವಾಗ ಬಿದ್ದಿಲ್ಲ ಎಂಬುದು ರೈತರ ಅಳಲು. ಮಳೆ ನೀರಿನಿಂದ ಕೆರೆ ಕಟ್ಟೆಗಳು ತುಂಬಿಲ್ಲ. ಬಹುತೇಕ ಎಲ್ಲ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಶೇ 93ರಷ್ಟು ಬಿತ್ತನೆ: ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿಯೇ ಹೆಚ್ಚು ಬಿತ್ತನೆಯಾಗಿದೆ. 42,356 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು, ಈ ಪೈಕಿ 39,467 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಶೇ 93.18ರಷ್ಟು ಸಾಧನೆಯಾಗಿದೆ. ಈ ತಿಂಗಳ ಅಂತ್ಯದಲ್ಲಿ ಗುರಿ ಮೀರಿ ಸಾಧನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

ಬರ ಪೀಡಿತ ಎಂದು ಘೋಷಿಸಿ

‘ತಾಲ್ಲೂಕಿಗೆ ಈ ವರ್ಷ ಮತ್ತು ಕಳೆದ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ, ಮಳೆ ನಂಬಿ ಕೃಷಿ ಮಾಡಿದ್ದ ಹಲವಾರು ರೈತರು ಸಾಲಗಾರರು ಆಗಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಗಿ ತದನಂತರ ಮಳೆ ಕೈ ಕೊಡುತ್ತಿದೆ.  ಇದರಿಂದಾಗಿ ಬೆಜ್ಜಲು ಭೂಮಿಯಲ್ಲಿ ಬೆಳೆದ ಬೆಳೆಗಳಲ್ಲ ನಾಶವಾಗಿವೆ. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಕುಂಠಿತ ಎಂದು ವರದಿ ನೀಡಿದ್ದಾರೆ. ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು’ ಎಂದು ರೈತ ಮಹದೇವಪ್ಪ ಅವರು ಒತ್ತಾಯಿಸಿದರು.

‘ಹಂಗಳ ಹೋಬಳಿಯಲ್ಲಿ ಅನೇಕ ರೈತರು ಆಲೂಗಡ್ಡೆ, ಹಾಗಲಕಾಯಿ, ಶುಂಠಿ, ಮತ್ತು ಬೆಳ್ಳುಳ್ಳಿ ಬೆಳೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕಳೆದ ಬಾರಿ ಆಲೂಗೆಡ್ಡೆ, ಬೆಳ್ಳುಳ್ಳಿ ಮತ್ತು ಹಾಗಲಕಾಯಿಗೆ ಉತ್ತಮ ಬೆಲೆ ಸಿಕ್ಕಿದ್ದ ಕಾರಣ ಅನೇಕರು ಈ ಬೆಳೆಗಳ ಮೊರೆ ಹೋಗಿದ್ದಾರೆ. ಈ ಬೆಳೆಗಳು ಹೆಚ್ಚಾಗಿ ತಮಿಳುನಾಡು ಮತ್ತು ಕೇರಳಕ್ಕೆ ರಪ್ತು ಆಗುತ್ತದೆ’ ಎಂದು ರೈತ ಉಮೇಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು