ಚಾಮರಾಜನಗರ: ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ರಾಸುಗಳ ಜತೆಗೆ ಕರುಗಳ ಪಾಲನೆ ಪೋಷಣೆ ಮಾಡಿದರೆ ಉತ್ತಮ ಹಸುಗಳನ್ನು ಹೊಂದುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಸಲಹೆ ನೀಡಿದರು.
ತಾಲ್ಲೂಕಿನ ಪಣ್ಯದಹುಂಡಿಯಲ್ಲಿ ಜಿಲ್ಲಾ ಹಾಲು ಒಕ್ಕೂಟ, ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಿಶ್ರ ತಳಿ ಕರುಗಳ ಪ್ರದರ್ಶನ ಮತ್ತು ಉತ್ತಮ ಕರುಗಳಿಗೆ ಬಹುಮಾನ ವಿತರಸಿ ಮಾತನಾಡಿದರು.
ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು ಹಸುಗಳನ್ನು ವೈಜ್ಞಾನಿಕವಾಗಿ ಪಾಲನೆ ಪೋಷಣೆ ಮಾಡುವ ಮೂಲಕ ಗುಣಮಟ್ಟದ ಹಾಲು ಪಡೆಯಬಹುದು. ಕರು ಹುಟ್ಟಿದ ದಿನದಂದಲೇ ಪೋಷಣೆ ಮಾಡಿದರೆ ಉತ್ತಮ ರಾಸು ಪಡೆಬಹುದು. ಈ ಬಗ್ಗೆ ಜಾಗೃತಿ ಮೂಡಿಸಲು ಚಾಮುಲ್ ವತಿಯಿಂದ ಉತ್ತಮ ಕರುಗಳು ಪ್ರದರ್ಶನ ಹಾಗೂ ನಗದು ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ಪರ್ಧೆಯಲ್ಲಿ 90 ಕರುಗಳು ಭಾಗವಹಿಸಿದ್ದು ಎಲ್ಲ ಕರುಗಳು ಉತ್ತಮ ಪೋಷಣೆ ಮಾಡಲಾಗಿದ್ದು ಅವುಗಳಲ್ಲಿ ಅತ್ಯುತ್ತಮವಾದ ಕರುಗಳನ್ನು ತಜ್ಞ ವೈದ್ಯರ ತಂಡ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.
ಚಾಮೂಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ಕರುಗಳು ರೈತನ ಜೀವನಕ್ಕೆ ಆರ್ಥಿಕವಾಗಿ ಆಧಾರವಾಗುತ್ತವೆ. ಕರು ಹುಟ್ಟಿದ ತಕ್ಷಣ ಗಿಣ್ಣು ಹಾಲು ಕುಡಿಸಬೇಕು. ಜಂತು ಹುಳು ಮಾತ್ರೆಗಳನ್ನು ನೀಡಬೇಕು, ಖನಿಜ ಮಿಶ್ರಣಗಳನ್ನು ಹಸುವಿನ ಜೊತೆಗೆ ಕರುವಿಗೂ ಕಾಲಕಾಲಕ್ಕೆ ನೀಡುವ ಮೂಲಕ ಆರೋಗ್ಯಯುತ ರಾಸುಗಳನ್ನು ಹೊಂದಬಹುದು ಎಂದರು.
10 ಕರುಗಳಿಗೆ ನಗದು ಬಹುಮಾನ: ಎರಡು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಂದರಿಂದ ಆರು ತಿಂಗಳು ಹಾಗೂ ಆರರಿಂದ ಹನ್ನೆರಡು ತಿಂಗಳ ಕರುಗಳು ಭಾಗವಹಿಸಿದ್ದವು. ಅವರುಗಳಲ್ಲಿ 10 ಕರುಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.
ಆರು ತಿಂಗಳ ವಿಭಾಗದಲ್ಲಿ ನಂಜೇದೇವನಪುರದ ಸಂತೋಷ ಅವರ ಕರು ಪ್ರಥಮ, ಕರಿನಂಜನಪುರದ ಸಿದ್ದರಾಜು ಅವರ ಕರು ದ್ವಿತೀಯ, 1 ವರ್ಷದೊಳಗಿನ ವಿಭಾಗದಲ್ಲಿ ಕರಿಯನಕಟ್ಟೆ ರಾಘವೇಂದ್ರ ಅವರ ಕರು ಪ್ರಥಮ ಹಾಗೂ ಉಮ್ಮತ್ತೂರು ಪುಟ್ಟಣ್ಣಅವರ ಕರು ದ್ವೀತಿಯ ಪ್ರಶಸ್ತಿ ಪಡೆದುಕೊಂಡಿತು. ಎರಡೂ ವಿಭಾಗಗಳಲ್ಲಿ ಕ್ರಮವಾಗಿ ₹ 12,000 ಪ್ರಥಮ ಹಾಗೂ 8,000 ದ್ವಿತೀಯ ಬಹುಮಾನ ನೀಡಲಾಯಿತು.
ಸಮಾಧಾನಕರ ಬಹುಮಾನವಾಗಿ ಪುಣ್ಯದಹುಂಡಿ ಮಹೇಂದ್ರ, ಕರಿನಂಜನಪುರ ಶಾಂತಮೂರ್ತಿ, ನಲ್ಲೂರು ಶಿವಯ್ಯ, ನಾಗವಳ್ಳಿ ಸಿದ್ದಶೆಟ್ಟಿ, ಪುಟ್ಟನಪುರ ಮಹೇಶ್, ಬುದಂಬಳ್ಳಿ ಮಹೇಶ್ ಅವರ ಕರುಗಳಿಗೆ ತಲಾ ₹ 2,000 ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜಕುಮಾರ್, ಶೇಖರಣ ಮತ್ತು ಪರಿಕರಣೆ ವಿಭಾಗದ ವ್ಯವಸ್ಥಾಪಕ ಶರತ್‌ಕುಮಾರ್, ಸಹಾಯಕ ವ್ಯವಸ್ಥಾಪಕರಾದ ಡಾ. ಎನ್. ಅಮರ್, ಡಾ. ನವೀನ್, ತಾಲೂಕಿನ ಮಾರ್ಗ ವಿಸ್ತರಣಾಧಿಕಾರಿಗಳು ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.