ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನೂರು | ಸ್ತ್ರೀಯಾದ ಪುರುಷ: ಮನಸೂರೆಗೊಂಡ ‘ಮೋಡಿ ಆಟ’

ಆಯುಧಪೂಜೆಯಲ್ಲಿ ವಿಶಿಷ್ಟ ಆಚರಣೆ
Last Updated 27 ಅಕ್ಟೋಬರ್ 2020, 16:03 IST
ಅಕ್ಷರ ಗಾತ್ರ

ಯಳಂದೂರು: ಹಿತಮಿತವಾದ ಸಂಗೀತಕ್ಕೆ ಹೆಜ್ಜೆ ಹಾಕುವ ಪುರುಷ ವೇಷಧಾರಿಗಳು. ರಂಗದಲ್ಲಿ ಇಟ್ಟ ಮೊಟ್ಟೆ, ಕಾಯಿ, ಹೂ, ಹಣ್ಣು ಕಸಿಯಲು ಬರುವ ಆಗಂತುಕರು. ಇವರನ್ನು ಓಡಿಸಲು ಚಾಮುಂಡೇಶ್ವರಿ ವರವ ಬೇಡುವ ಗ್ರಾಮೀಣರು… ಹೀಗೆ ಮನರಂಜನೆ ನೀಡುತ್ತಾ ಸುತ್ತಮುತ್ತಲ ಗ್ರಾಮೀಣರನ್ನುಆಕರ್ಷಿಸುವ ವಿಶಿಷ್ಟ ಆಚರಣೆಯನ್ನು ಹೊನ್ನೂರು ಗ್ರಾಮದಲ್ಲಿ ದಸರಾ ಸಂದರ್ಭದಲ್ಲಿ ಕಾಣಬಹುದು.

ತಾಲ್ಲೂಕಿನ ಹೊನ್ನೂರಿನಲ್ಲಿ ನವರಾತ್ರಿಯ ಅಂತಿಮ ದಿನದಂದು ಚಾಮುಂಡೇಶ್ವರಿಗೆ ವಿಶೇಷವಾಗಿ ಅಲಂಕರಿಸಲಾಗುತ್ತದೆ. ದೇವಿಯನ್ನು ಸಂತುಷ್ಟಗೊಳಿಸಲು ಪುರುಷರು, ಸ್ತ್ರೀ ಪಾತ್ರ ಸೇರಿದಂತೆ ಹತ್ತಾರು ವೈವಿಧ್ಯಮಯ ಉಡುಪು, ಅಲಂಕಾರ ಮಾಡಿಕೊಂಡು ಸಾಗುತ್ತಾರೆ. ರಂಗೋಲಿಯಿಂದ ಅಲಂಕರಿಸಿದ ರಂಗದ ಬಳಿ ಮನರಂಜನೆ ನೀಡುತ್ತಾರೆ.

ಎಂಟು ಜನರ ತಂಡವು ಸ್ತ್ರೀ, ಕೋಣಿಕೆ ರಂಗ ಹಾಗೂ ಹಲವು ಪಾತ್ರಗಳಾಗಿ ಗಮನ ಸೆಳೆಯುತ್ತದೆ. ತಂಡದ ಸದಸ್ಯರು ನೆರೆದ ಜನರನ್ನು ರಂಜಿಸುತ್ತಾರೆ. ಈ ಸಮಯದಲ್ಲಿ ಪಾತ್ರಧಾರಿಗಳು ರಂಗದಲ್ಲಿ ಇಟ್ಟಿರುವ ಒಂದೊಂದೇ ವಸ್ತುವನ್ನು ಕೈ ಸ್ಪರ್ಶಿಸದೆ ಬಾಯಿ ಮೂಲಕ ಮೇಲೆ ತರುತ್ತಾರೆ. ಸಮೀಪದ ಊರುಗಳ ಜನರು ಭಕ್ತಿ ಭಾವದಿಂದ ದೇವಿಯ ಗುಣಗಾನ ಮಾಡುತ್ತಾರೆ. ಇದರಿಂದ ಉತ್ತೇಜಿತರಾದ ಪಾತ್ರಧಾರಿಗಳು ನೃತ್ಯ ಮಾಡುತ್ತಾ ಗ್ರಾಮಸ್ಥರ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಈ ಸಂದರ್ಭದಲ್ಲಿ ಭಕ್ತರು ದೇವರ ಹೆಸರಲ್ಲಿ ಹಣ ನೀಡುವುದು ಉಂಟು ಎನ್ನುತ್ತಾರೆ ಸ್ತ್ರೀ ಪಾತ್ರಧಾರಿ ಸಿದ್ದು.

ದಸರಾ ದಿನದಂದು ಕುಣಿತಕ್ಕೆ ಬೇಕಾದ ಡೋಲಿನ ಶಬ್ದ ಹೊರಡಿಸುತ್ತಿದ್ದಂತೆ, ಸೋಗಿನಿಂದ ಹೆಣೆದ ಪೀಪಿಯ ಸದ್ದನ್ನು ಮೊಳಗಿಸಲಾಗುತ್ತದೆ. ಮೈ-ಕೈಗೆ ಎಣ್ಣೆ ತುಂಬಿ, ಬಣ್ಣ ಬಳಿದುಕೊಂಡ ಮಾಯಕಾರನ ಆಗಮನ ಆಗುತ್ತದೆ. ಹಳದಿ ಬಣ್ಣದ ಸೀರೆ ತೊಟ್ಟು ಲಲನೆಯ ಪ್ರವೇಶವಾಗುತ್ತದೆ. ಎಲ್ಲರೂ ರಂಗದ ಸುತ್ತ ಪ್ರದಕ್ಷಿಣೆ ಹಾಕಿ, ನವದುರ್ಗೆಯರನ್ನು ಸ್ತುತಿಸುತ್ತಾರೆ. ಜನರ ಹರ್ಷೋದ್ಗಾರದ ನಡುವೆ ಮೋಡಿ ಆಟ ಆರಂಭ ಆಗುತ್ತದೆ.

‘ಮಾಟ, ಮಂತ್ರ ನಿಗ್ರಹಿಸುವ ದೇವಿ’

ದಸರಾ ಆಚರಣೆಯಂದು ಶ್ರೀದೇವಿ ದುಷ್ಟ ಶಕ್ತಿ ನಿಗ್ರಹ ಮಾಡುತ್ತಾಳೆ. ಮೋಸ, ವಂಚನೆ ಮತ್ತು ಮಾಯ, ಮಂತ್ರವಾದಿಗಳ ತಂತ್ರ ಫಲಿಸದಂತೆ ದುರ್ಗಾಂಬೆ ಶಾಪ ನೀಡುತ್ತಾಳೆ. ಅಗಸ, ಗಾಣಿಗ ಮತ್ತು ಸವಿತ ಸಮಾಜದ ಜನರು ಇಂತಹ ಜನಪದ ನೃತ್ಯಗಳ ಮೂಲಕ ಹಬ್ಬದ ಸಂಭ್ರಮ ಕಳೆಗಟ್ಟಿಸುತ್ತಾರೆ. ಗ್ರಾಮದಲ್ಲಿ ಗಾಡಿಗರ ಆಟದ ಪದ್ಧತಿ ಹಿಂದಿನಿಂದಲೂ ಇದೆ. ಸಂಪ್ರದಾಯ ಪಾಲನೆ ಮಾಡಲಾಗುತ್ತದೆ ಎಂದು ಐದು ವರ್ಷಗಳಿಂದ ಮೋಡಿ ಆಟಕ್ಕೆ ವೇಷ ಕಟ್ಟುತ್ತಿರುವ ರಾಜಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT