ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಗೃಹಲಕ್ಷ್ಮಿ ಯೋಜನೆ: ಸಿದ್ಧತೆಗೆ ಡಿ.ಸಿ ಸೂಚನೆ

Published 16 ಜುಲೈ 2023, 15:38 IST
Last Updated 16 ಜುಲೈ 2023, 15:38 IST
ಅಕ್ಷರ ಗಾತ್ರ

ಚಾಮರಾಜನಗರ: ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಎಲ್ಲ ಸಿದ್ದತೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಿ.ಟಿ. ಅಧಿಕಾರಿಗಳಿಗೆ ಶನಿವಾರ ಸೂಚಿಸಿದರು.

ಯೋಜನೆ ಜಾರಿ ಸಂಬಂಧ ಗೂಗಲ್ ಮೀಟ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಯೋಜನೆಗೆ ಆಗಸ್ಟ್ 19ರಂದು ರಾಜ್ಯ ಮಟ್ಟದಲ್ಲಿ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲೂ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ, ಮಂಜೂರಾತಿ ಪತ್ರ ನೀಡುವ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಲು ಸಿದ್ಧತೆ ಕೈಗೊಳ್ಳಬೇಕು’ ಎಂದರು. 

‘ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಮನೆಯ ಯಜಮಾನಿ ಯೋಜನೆಯ ಫಲಾನುಭವಿಯಾಗಲಿದ್ದಾರೆ. ನೋಂದಣಿಗಾಗಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅವಕಾಶವಿದೆ. ಹೀಗಾಗಿ ಈ ಕೇಂದ್ರಗಳಲ್ಲಿ ನೋಂದಣಿ ಕಾರ್ಯಕ್ಕೆ ತಾಂತ್ರಿಕ ತೊಂದರೆ ಬಾರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ ಎಂದು  ತಿಳಿಸಿದರು.

‘ನೋಂದಣಿಯಾಗುವ ಪ್ರತಿ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳ ನೇಮಕವಾಗಬೇಕು. ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ತುರ್ತಾಗಿ ತರಬೇತಿ ನೀಡಬೇಕು. ಸಿಬ್ಬಂದಿಗೆ ಎಲ್ಲ ಮಾರ್ಗದರ್ಶನ ಮಾಡಬೇಕು. ನೋಂದಣಿ ಪ್ರಕ್ರಿಯೆ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇರಬೇಕು’ ಎಂದರು.

‘ನೋಂದಣಿ ಕೇಂದ್ರಗಳು, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗ್ರಾಮ ಪಂಚಾಯಿತಿ ಕಚೇರಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಪ್ರಚಾರ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ಫಲಾನುಭವಿಗಳು ನೋಂದಣಿಗೆ ಯಾವುದೇ ಹಣ ನೀಡುವಂತಿಲ್ಲ. ಮಧ್ಯವರ್ತಿಗಳು ಇದರ ದುರುಪಯೋಗಪಡಿಸಿಕೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದರು.

‘ಅರ್ಹರೆಲ್ಲರಿಗೂ ಯೋಜನೆ ಪ್ರಯೋಜನ ತಲುಪಬೇಕು. ಈ ನಿಟ್ಟಿನಲ್ಲಿ ಯಾವುದೇ ತೊಂದರೆಯಾಗದಂತೆ ಫಲಾನುಭವಿಗಳಿಗೆ ಸೌಲಭ್ಯ ಸಿಗಲು ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಶಿಲ್ಪಾ ನಾಗ್ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT