ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹಿಷ್ಕಾರ ಎಚ್ಚರಿಕೆ: ಗ್ರಾಮಸ್ಥರನ್ನು ಭೇಟಿಯಾಡಿದ ಡಿ.ಸಿ. ಎಸ್‌ಪಿ

Published 25 ಮಾರ್ಚ್ 2024, 16:24 IST
Last Updated 25 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮೂಲಸೌಕರ್ಯ ಕಲ್ಪಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿ ಪ್ರತಿಭಟನೆ ನಡೆಸುತ್ತಿರುವ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ, ತುಳಸಿಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಸೋಮವಾರ ಇಂಡಿಗನತ್ತದಲ್ಲಿ ಭೇಟಿ ಮಾಡಿ ಮನವೊಲಿಸಲು ಯತ್ನಿಸಿದರು.   

ಗ್ರಾಮಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಅವರು ನೀಡಿದರು. ಆದರೆ, ತಕ್ಷಣವೇ ಕಾಮಗಾರಿ ಆರಂಭಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಗ್ರಾಮಸ್ಥರು ಮಾತನಾಡಿ, ‘ಸ್ವಾತಂತ್ರ ಬಂದು 76 ವರ್ಷಗಳು ಕಳೆದರೂ ನಮ್ಮ ಗ್ರಾಮಗಳು ಕುಗ್ರಾಮಗಳಾಗಿವೆ. ರಸ್ತೆ, ವಿದ್ಯುತ್‌ನಂತಹ ಕನಿಷ್ಠ ಮೂಲ ಸೌಕರ್ಯಗಳಿಂದ ನಾವಬು ವಂಚಿತರಾಗಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಬದುಕು ದುಸ್ತರವಾಗಿದೆ’ ಎಂದು ಅಳಲು ತೋಡಿಕೊಂಡರು. 

‘ಸುಮಾರು 150 ಕುಟುಂಬಗಳು ವಾಸವಾಗಿದ್ದು, ಇಂದಿಗೂ ದೀಪದ ಬೆಳಕಿನಲ್ಲೇ ಕಾಲ ಕಳೆಯಬೇಕು. ಪಡಿತರ ಪಡೆಯಬೇಕಾದರೆ 9 ಕಿ.ಮೀ ದೂರದಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ತೆರಳಬೇಕಾದ ಸ್ಥಿತಿ ಇದೆ. ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿಗರ್ಭಿಣಿಯನ್ನು ಹದಗೆಟ್ಟ ರಸ್ತೆಯಲ್ಲಿ ಕರೆದುಕೊಂಡು ಹೋಗಬೇಕು. ಮಾರ್ಗ ಮಧ್ಯದಲ್ಲೇ ಹೆರಿಗೆಯಾದ ಸಂದರ್ಭಗಳೂ ಇವೆ. ಶಾಲಾ ಮಕ್ಕಳು ಕೆಲವು ಬಾರಿ ಕಾಲ್ನಡಿಗೆಯಲ್ಲೇ ತೆರಳಬೇಕು’ ಎಂದು ದೂರಿದರು. 

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರತಿಕ್ರಿಯಿಸಿ, ‘ನಿಮ್ಮ ನೋವು ನನಗೆ ತಿಳಿದಿದೆ. ಸೌಲಭ್ಯ ಕೊಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಅರಣ್ಯ ವ್ಯಾಪ್ತಿಯಲ್ಲಿ ಗ್ರಾಮಗಳಿರುವುದರಿಂದ ಏಕಾಏಕಿ ರಸ್ತೆ, ವಿದ್ಯುತ್‌ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದರು. 

ಮತದಾನ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಡಿ. ಕುಡಿಯುವ ನೀರಿನ ಸೌಲಭ್ಯವನ್ನು ಆದಷ್ಟು ಬೇಗ ಕಲ್ಪಿಸಿಕೊಡಲಾಗುವುದು. ಈಗಾಗಲೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಯ ರೂಪು ರೇಷೆಗಳನ್ನು ಸಿದ್ದಪಡಿಸಲಾಗುವುದು’ ಎಂದರು.  ‌‌

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅರಣ್ಯದೊಳಗೆ ಚಾರಣ ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಆದರೆ, ಸ್ಥಳೀಯರಿಗೆ ತಿರುಗಾಡಲು ಅಡ್ಡಿ ಇಲ್ಲ. ಜನ ವನ ಸೇತುವೆ ಸಾರಿಗೆಯನ್ನು ಪ್ರಾಧಿಕಾರದ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಶಾಲಾ ಮಕ್ಕಳಿಗೆ ಹೆಚ್ಚುವರಿ ಸಂಚಾರ ಮಾಡಲು ಸೂಚಿಸಲಾಗುವುದು. ಹಂತ ಹಂತವಾಗಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು. 

ಮಹದೇಶ್ವರ ಬೆಟ್ಟದ ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಹನೂರು ತಹಶೀಲ್ದಾರ್ ಗುರುಪ್ರಸಾದ್, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಲಾಗಿದೆ ಪ್ರತಿಭಟನೆಯನ್ನು ಕೈ ಬಿಡುವಂತೆ ಸೂಚಿಸಿದರು,

ಇದಕ್ಕೆ ಒಪ್ಪದ ಗ್ರಾಮಸ್ಥರು, ‘ಸೌಕರ್ಯ ಕಲ್ಪಿಸುವ ಕಾಮಗಾರಿ ಕಾರ್ಯಾರಂಭ ಶುರು ಮಾಡಿದರೆ ನಾವು ಪ್ರತಿಭಟನೆ ಕೈಬಿಡುತ್ತದೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮತ್ತೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದ ಗ್ರಾಮಸ್ಥರು ಸೋಮವಾರದ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.

ಪೊಲೀಸ್ ಇನ್‌ಸ್ಪೆಕ್ಟರ್‌ ಜಗದೀಶ್, ಹೆಚ್ಚುವರಿ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ವಲಯ ಅರಣ್ಯಾಧಿಕಾರಿ ಭಾರತಿ ನಂದಿಹಳ್ಳ, ರಾಜಸ್ವ ನಿರಿಕ್ಷಕ ಶಿವಕುಮಾರ್, ಪಿಡಿಒ ಕಿರಣ್ ಕುಮಾರ್ ಇತರರು ಇದ್ದರು. 

ಶೀಘ್ರ ವ್ಯವಸ್ಥೆ

ಡಿಸಿಎಫ್‌ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಕುಮಾರ್‌ ಮಾತನಾಡಿ ‘ಹಲವಾರು ಇಲಾಖೆಗಳ ಜೊತೆಗೂಡಿ ಕಾಮಗಾರಿ ನಡೆಸಬೇಕಾಗಿರುವುದರಿಂದ ಕೊಂಚ ವಿಳಂಬವಾಗಿದೆ. ಕಳೆದ ವಾರವಷ್ಟೆ ನನಗೆ ತಮ್ಮ ಗ್ರಾಮದ ಅರ್ಜಿ ದೊರೆತಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಅರ್ಜಿಯನ್ನು ಆದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಇಂಡಿಗನತ್ತ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲು ವ್ಯವಸ್ಥೆಯನ್ನು ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT