ಮಂಗಳವಾರ, ಮೇ 17, 2022
26 °C
ತಾಲ್ಲೂಕು ಆಡಳಿತದಿಂದ ಸಿದ್ಧತೆ, ಬೆಳಿಗ್ಗೆಯಿಂದ ಸಂಜೆಯವರೆಗೂ ಜನರ ಅಹವಾಲು ಸ್ವೀಕಾರ

ಹೊಸ ಮಾಲಂಗಿಯಲ್ಲಿ ವಾಸ್ತವ್ಯ ಹೂಡಲಿರುವ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಕೊಳ್ಳೇಗಾಲ: ಕಂದಾಯ ಇಲಾಖೆ ರೂಪಿಸಿರುವ ತಿಂಗಳ ಪ್ರತಿ ಮೂರನೇ ಶನಿವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಶನಿವಾರ ತಾಲ್ಲೂಕಿನ ಹೊಸ ಮಾಲಂಗಿ ಗ್ರಾಮಕ್ಕೆ ಭೇಟಿ ನೀಡಲಿದ್ದು, ತಾಲ್ಲೂಕು ಆಡಳಿತ ಎಲ್ಲ ಸಿದ್ಧತೆಗಳನ್ನು ನಡೆಸಿದೆ. 

ಬೆಳಿಗ್ಗೆ 10.30ಕ್ಕೆ ಗ್ರಾಮಕ್ಕೆ ಭೇಟಿ ನೀಡಲಿರುವ ಜಿಲ್ಲಾಧಿಕಾರಿ ಅವರು ಸಂಜೆಯವರೆಗೂ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದ ರೂಪುರೇಷೆ ಪ್ರಕಾರ ಜಿಲ್ಲಾಧಿಕಾರಿ ಅವರು ರಾತ್ರಿ ಗ್ರಾಮದಲ್ಲೇ ವಾಸ್ತವ್ಯ ಹೂಡಬೇಕು. ಡಾ.ಎಂ.ಆರ್.ರವಿ ಅವರು ರಾತ್ರಿ ಅಲ್ಲಿಯೇ ತಂಗಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ತಾಲ್ಲೂಕು ಆಡಳಿತವು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಾಸ್ತವ್ಯಕ್ಕೂ ಸಿದ್ಧತೆ ನಡೆಸಿದೆ.

ಗಡಿ ಗ್ರಾಮ: ಟಗರುಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಹೊಸ ಮಾಲಂಗಿ ಗ್ರಾಮ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿಗೆ ಹೊಂದಿಕೊಂಡಂತೆ ಇದೆ. 1,800 ಜನರು ಗ್ರಾಮದಲ್ಲಿ ನೆಲೆಸಿದ್ದಾರೆ. 

ಶನಿವಾರ ಬೆಳಿ‌ಗ್ಗೆ 10.30ಕ್ಕೆ ಗ್ರಾಮಕ್ಕೆ ಭೇಟಿ ನೀಡುವ ಜಿಲ್ಲಾಧಿಕಾರಿ ಅವರು ಮೊದಲಿಗೆ ಎಲ್ಲ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಶಾಲೆಯ ಆವಣರದಲ್ಲಿ ಗ್ರಾಮಸ್ಥರೊಂದಿಗೆ ಕುಂದುಕೊರತೆ ಸಭೆ ನಡೆಸಲಿದ್ದರೆ. ಮಧ್ಯಾಹ್ನ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಏರ್ಪಡಿಸಲಾಗಿದೆ. ಸಂಜೆ ಗ್ರಾಮಸ್ಥರಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಿರೀಶ್‌ ದಿಲೀಪ್‌ ಬದೋಲೆ ಹಾಗೂ ತಹಶೀಲ್ದಾರ್‌ ಕೆ.ಕುನಾಲ್‌ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿ ಅವರೊಂದಿಗೆ ಇರಲಿದ್ದಾರೆ.  

ಸಭೆ: ಗ್ರಾಮ ವಾಸ್ತವ್ಯಕ್ಕೂ ಪೂರ್ವಭಾವಿಯಾಗಿ ತಹಶೀಲ್ದಾರ್‌ ಕೆ.ಕುನಾಲ್‌ ಅವರು ಗ್ರಾಮಸ್ಥರೊಂದಿಗೆ ಎರಡು ಬಾರಿ ಸಭೆಗಳನ್ನು ನಡೆಸಿದ್ದಾರೆ. ಡಿವೈಎಸ್‌ಪಿ ನಾಗರಾಜು ಅವರು ಕೂಡ ಸಭೆ ನಡೆಸಿ ಚರ್ಚಿಸಿದ್ದಾರೆ. 

ತಹಶೀಲ್ದಾರ್‌ಗಳ ವಾಸ್ತವ್ಯ

ಜಿಲ್ಲಾಧಿಕಾರಿ ಅವರು ಮಾತ್ರವಲ್ಲದೇ, ಆಯಾ ತಾಲ್ಲೂಕಿನ ತಹಶೀಲ್ದಾರ್‌ ಅವರು ಕೂಡ ಒಂದೊಂದು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಕಸಬಾ ಹೋಬಳಿಯ ಬದನಗುಪ್ಪೆ, ಗುಂಡ್ಲಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಬೆಟ್ಟಹಳ್ಳಿ ಗ್ರಾಮ, ಯಳಂದೂರು ತಾಲ್ಲೂಕಿನ ಅಗರ ಹೋಬಳಿಯ ಕೆಸ್ತೂರು ಗ್ರಾಮ, ಹನೂರು ತಾಲ್ಲೂಕಿನ ಕಸಬಾ ಹೋಬಳಿಯ ಬೈರನತ್ತ ಗ್ರಾಮದಲ್ಲಿ ತಹಶಿಲ್ದಾರಾರು ಅಹವಾಲುಗಳನ್ನು ಆಲಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು