
ಸಫಾರಿ ಹೆಸರಿನಲ್ಲಿ ಪ್ರವಾಸಿಗರನ್ನು ಕಾಡಿನೊಳಗೆ ಕರೆದೊಯ್ದು ವನ್ಯ ಜೀವಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಮಾದರಿಯಲ್ಲೇ ರೈತರ ಹೊಲಗಳಿಗೂ ಪ್ರವಾಸಿಗರು ಬರುವಂತಹ ವಾತಾವರಣ ನಿರ್ಮಿಸಬೇಕು. ಸಾವಯವ ಕೃಷಿ, ವಿಷಮುಕ್ತ ಆಹಾರ ಸೇವನೆಯ ಅಗತ್ಯತೆ, ಸ್ಥಳೀಯ ಆಹಾರ ಪದ್ಧತಿ ಹಾಗೂ ನೆಲಮೂಲದ ಸಂಸ್ಕೃತಿ ಅರಿಯುವಂತಹ ಪ್ರಮುಖ ವಿಚಾರಗಳು ಕೃಷಿ ಪ್ರವಾಸೋದ್ಯಮ ನೀತಿಯ ಪ್ರಮುಖ ಭಾಗವಾಗಬೇಕು ಎಂದು ಅಭಿಪ್ರಾಯಪಡುತ್ತಾರೆ.ಪ್ರಗತಿಪರ ರೈತ, ದಯಾನಂದ್.
ನೂತನ ಕೃಷಿ ಪ್ರವಾಸೋದ್ಯಮ ನೀತಿಗೆ ಒತ್ತು ನೀಡಿದರೆ ರೈತರ ಬದುಕು ಹಸನಾಗಲಿದೆ, ಸಾಂಪ್ರದಾಯಿಕ ಕೃಷಿಯ ಜೊತೆಗೆ ಪರ್ಯಾಯ ಆದಾಯ ಕೈಸೇರಲಿದೆ. ಬೆಳೆಗೂ ಉತ್ತಮ ಬೆಲೆ ಸಿಗಲಿದೆ, ಕೃಷಿ ಕ್ಷೇತ್ರದಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶಗಳು ಸೃಷ್ಟಿಯಾಗಲಿದ್ದು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಹುಲಿ, ಸಿಂಹಗಳನ್ನು ನೋಡಲು ಪ್ರವಾಸಿಗರು ಅರಣ್ಯದೊಳಗೇ ಬರಬೇಕಿಲ್ಲ, ಮೃಗಾಲಯಗಳಲ್ಲೂ ಪ್ರಾಣಿಗಳನ್ನು ವೀಕ್ಷಿಸಬಹುದು. ಸಫಾರಿ ಹೆಸರಿನಲ್ಲಿ ಪ್ರಾಣಿಗಳ ಆವಾಸಸ್ಥಾನದೊಳಗೆ ನುಗ್ಗಿ ಭಯ ಹುಟ್ಟುಹಾಕುವ, ಸಹಜ ಜೀವನಕ್ಕೆ ಅಡ್ಡಿಪಡಿಸಿದರೆ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತದೆ. ಇಂತಹ ಸಮಸ್ಯೆಗಳಿಗೆ ಕೃಷಿ ಪ್ರವಾಸೋದ್ಯಮ ಪರಿಹಾರದಂತೆ ಕಾಣುತ್ತಿದೆ ಎನ್ನುತ್ತಾರೆ.ರೈತ ಶ್ರೀವತ್ಸ.
ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆವಾಸ ಸ್ಥಾನ ಕ್ಷೀಣವಾಗುತ್ತಿದೆ. ಕೋರ್ ವಲಯದಲ್ಲಿ ಸಫಾರಿ ವಾಹನಗಳು ಸಂಚರಿಸುವುದರಿಂದ ಹುಲಿಗಳು ಸ್ವಚ್ಚಂದವಾಗಿ ಓಡಾಡಲು ಸಾಧ್ಯವಾಗದೆ ನಾಡಿನತ್ತ ನುಗ್ಗಿ ಬೆಳೆ ನಾಶ ಮಾಡಿ ಜನ ಜಾನುವಾರಗಳ ಮೇಲೆ ದಾಳಿ ಮಾಡುತ್ತಿವೆ. ದಾಳಿ ಭೀತಿಯಿಂದ ರೈತರು ಉದ್ಯಮಿಗಳಿಗೆ ಭೂಮಿ ಮಾರಾಟ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ, ಹಸಿರುಸೇನೆಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್.

‘ಮಣ್ಣಿನೊಂದಿಗೆ ಬೆಸೆಯುವ ಬಾಂಧವ್ಯ’ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ಪ್ರಾಯೋಗಿಕವಾಗಿ ಕೃಷಿ ಪ್ರವಾಸೋದ್ಯಮ ಆರಂಭಿಸಲಾಗಿದೆ. ದೈನದಿಂನ ಕೆಲಸ ಕಾರ್ಯಗಳ ಒತ್ತಡದಲ್ಲಿ ಬೇಸತ್ತಿರುವ ನಗರವಾಸಿಗಳು ಹಳ್ಳಿಯ ಸೊಗಡು ಸವಿಯಲು ದಿನದ ಮಟ್ಟಿಗೆ ರೈತರಾಗಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಸ್ವತಃ ಜಮೀನಿಗಿಳಿದು ಕೃಷಿ ಮಾಡುತ್ತಾರೆ ಮಣ್ಣಿನ ಜೊತೆಗೆ ಸಾಂಗತ್ಯ ಬೆಳೆಸುತ್ತಾರೆ ಮಕ್ಕಳು ಹಣ್ಣು ಸೊಪ್ಪು ತರಕಾರಿ ಕಿತ್ತು ಸಂಭ್ರಮಿಸುತ್ತಾರೆ ದಣಿದ ಮನಸ್ಸುಗಳಿಗೆ ಶುದ್ಧ ಹಳ್ಳಿ ಭೋಜನ ಸವಿ ಉಣಬಡಿಸಲಾಗುತ್ತಿದೆ.–ಶೇಷ ಕುಮಾರ್ ಕೊಟೆಕೆರೆ ಫಾರ್ಮ್ ಮಾಲೀಕ
‘ಹೊಲಗಳು ಕೃಷಿ ಪಾಠಶಾಲೆಗಳಾಗಲಿ’ ಹಾಲು ಡೇರಿಯಲ್ಲಿ ಉತ್ಪಾದನೆಯಾಗುತ್ತದೆ ಆಹಾರ ಧಾನ್ಯಗಳು ಕಾರ್ಖಾನೆಯಲ್ಲಿ ತಯಾರಾಗುತ್ತವೆ ಎಂದೇ ಇಂದಿನ ಮಕ್ಕಳು ನಂಬಿದ್ದಾರೆ. ಪ್ರಸ್ತುತ ಕೃಷಿ ವಿಶ್ವವಿದ್ಯಾಲಯಗಳಿಗಿಂತ ರೈತರ ಹೊಲಗಳು ಯುವ ಸಮುದಾಯಕ್ಕೆ ಪ್ರಾಯೋಗಿಕ ಕಾರ್ಯಕ್ಷೇತ್ರವಾಗಬೇಕು. ಸಾವಯವ ಸೊಪ್ಪು ತರಕಾರಿಗಳ ಮಹತ್ವ ತಿಳಿಯಬೇಕು. ಜಮೀನಿನಲ್ಲಿ ಕೃಷಿ ತರಬೇತಿ ಕೇಂದ್ರಗಳು ಹಾಗೂ ಕೃಷಿ ಪಾಠಶಾಲೆಗಳ ಸ್ಥಾಪನೆಗೆ ಅನುಮತಿ ನೀಡಬೇಕು.ಹೊನ್ನೂರು ಪ್ರಕಾಶ್ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.