ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಂದರೆ: ರಸ್ತೆ, ನೀರು, ಕೂಲಿ ನೀಡಲು ಆಗ್ರಹ

ಇಂಡಿಗನತ್ತ ಪ್ರಕರಣ: ಸೋಲಿಗ ಅಭಿವೃದ್ಧಿ ಸಂಘ, ಪುನರ್ಚಿತ್‌ ಪಿಯುಸಿಎಲ್‌ನಿಂದ ಸತ್ಯ ಶೋಧನಾ ವರದಿ
Published 17 ಮೇ 2024, 4:13 IST
Last Updated 17 ಮೇ 2024, 4:13 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಹದೇಶ್ವರ ಬೆಟ್ಟದ ವ್ಯಾಪ್ತಿಗೆ ಬರುವ ಮೆಂದರೆ ಗ್ರಾಮದಲ್ಲಿ ಸೋಲಿಗ ಸಮುದಾಯದವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ತಕ್ಷಣವೇ ಜಿಲ್ಲಾಡಳಿತ, ರಾಜ್ಯ ಸರ್ಕಾರ ರಸ್ತೆ, ಕುಡಿಯುವ ನೀರು ಮತ್ತು ಕೂಲಿ ವ್ಯವಸ್ಥೆ ಮಾಡಬೇಕು. ಇಲ್ಲವೇ ಅವರಿಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಪಿಯುಸಿಎಲ್‌ ಜಿಲ್ಲಾ ಕಾರ್ಯದರ್ಶಿ ಕೆ.ವೆಂಕಟರಾಜು ಗುರುವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ಮತದಾನ ನಡೆದ ಏಪ್ರಿಲ್‌ 26ರಂದು ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಮತಗಟ್ಟೆಯಲ್ಲಿ  ಘರ್ಷಣೆ ನಡೆದ ಬಳಿಕ ಅಲ್ಲಿನ ಸ್ಥಿತಿಗತಿ ಅರಿಯಲು ಮೇ 9ರಂದು ಸೋಲಿಗ ಅಭಿವೃದ್ಧಿ ಸಂಘ, ಪುನರ್ಚಿತ್‌, ಪಿಯುಸಿಎಲ್‌ ಸಂಸ್ಥೆಗಳ ಆಶ್ರಯದಲ್ಲಿ ಏಳು ಮಂದಿ ಇಂಡಿಗನತ್ತ, ಮೆಂದರೆ ಎರಡೂ ಗ್ರಾಮಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದೇವೆ. ನಂತರ ಸತ್ಯ ಶೋಧನಾ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಯವರಿಗೂ ಸಲ್ಲಿಸಿದ್ದೇವೆ’ ಎಂದು ಹೇಳಿದರು. 

‘ಇಂಡಿಗನತ್ತ ಗ್ರಾಮವೂ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಅಲ್ಲಿನ ನಿವಾಸಿಗಳಿಗೆ ಜಮೀನು ಇದೆ. ಕೃಷಿಯನ್ನೂ ಮಾಡುತ್ತಾರೆ. ಶಾಲೆ, ಅಂಗನವಾಡಿ ಇದೆ.  ಆದರೆ, ಅಲ್ಲಿಂದ ಎರಡು ಕಿ.ಮೀ ದೂರದಲ್ಲಿರುವ ಮಂದರೆ ಗ್ರಾಮ ಹಾಗೂ ಅಲ್ಲಿ ಬದುಕುತ್ತಿರುವ ಸೋಲಿಗರ ಪರಿಸ್ಥಿತಿ ಶೋಚನೀಯವಾಗಿದೆ. 83 ಕುಟುಂಬಗಳು ಇಲ್ಲಿದ್ದು, 400ರಷ್ಟು ಜನಸಂಖ್ಯೆ ಇದೆ. ಅವರಿಗೆ ಜಮೀನು ಇಲ್ಲ, ಶಿಕ್ಷಣವನ್ನೂ ಪಡೆದಿಲ್ಲ. ಸರ್ಕಾರದ ಯಾವುದೇ ಸೌಲಭ್ಯ ಇಲ್ಲ. ಘರ್ಷಣೆ ಪ್ರಕರಣ ನಡೆಯುವವರೆಗೂ ಇಂಡಿಗನತ್ತ ಗ್ರಾಮಸ್ಥರ ಜಮೀನಿನಲ್ಲಿ ಪುರುಷರು ₹200, ಮಹಿಳೆಯರು ₹100 ಕೂಲಿಗೆ ದುಡಿಯುತ್ತಿದ್ದರು. ಈಗ ಆ ಕೂಲಿಗೂ ಕಲ್ಲು ಬಿದ್ದಿದೆ’ ಎಂದರು. 

‘ಜೀವ ಭಯದಿಂದ ಅವರು ಬದುಕುತ್ತಿದ್ದಾರೆ. ಇಂಡಿಗನತ್ತದವರೆಗೆ ಅಧಿಕಾರಿಗಳು ಬರುತ್ತಾರೆ. ಆದರೆ, ಮೆಂದರೆಗೆ ಹೋಗುವುದಿಲ್ಲ. ಪಡಿತರ, ಪೌಷ್ಟಿಕ ಆಹಾರ ಮಾತ್ರ ಅವರಿಗೆ ಲಭಿಸುತ್ತಿದೆ. ಅರಣ್ಯ ಸಂರಕ್ಷಣೆ ಕಾಯ್ದೆ ಮುಂದಿಟ್ಟುಕೊಂಡು ಅವರಿಗೆ ರಸ್ತೆ, ನೀರು, ವಿದ್ಯುತ್‌ ಮುಂತಾದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ಮೆಂದರೆ ಮಾತ್ರವಲ್ಲ ಬೆಟ್ಟ ವ್ಯಾಪ್ತಿಯ 20 ಗ್ರಾಮಗಳಲ್ಲೂ ಮೂಲಸೌಕರ್ಯಗಳಿಲ್ಲ. ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮತಿ ಪಡೆಯುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಅಧಿಕಾರಿಗಳಿಗೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ವೆಂಕಟರಾಜು ದೂರಿದರು. 

ರಾಜ್ಯ ಮೂಲ ಆದಿವಾಸಿ ವೇದಿಕೆಯ ಸಿ.ಮುತ್ತಯ್ಯ ಮಾತನಾಡಿ, ‘ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಕೋಟ್ಯಂತರ ರೂಪಾಯಿ ಆದಾಯ ಬರುತ್ತಾರೆ. ಈ ಭಾಗದಲ್ಲಿ ವಾಸವಿರುವ ಬೇಡಗಂಪಣರು ಮತ್ತು ಸೋಲಿಗರು ಮಹದೇಶ್ವರ ಸ್ವಾಮಿಯನ್ನೇ ಆರಾಧಿಸುತ್ತಾರೆ. ಬೆಟ್ಟಕ್ಕೆ ಬರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ಈ ಭಾಗದವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಬಳಸಬೇಕು’ ಎಂದರು. 

‘ಇಂಡಿಗನತ್ತದಲ್ಲಿ ನಡೆದ ಘರ್ಷಣೆಗೆ ಆದಿವಾಸಿಗಳೇ ಕಾರಣ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಲು ಬಂದಾಗ ಈ ಘಟನೆ ನಡೆದಿದೆ’ ಎಂದರು. 

ಪುನರ್ಚಿತ್‌ ಸಂಸ್ಥೆಯ ವೀರಭದ್ರನಾಯಕ್‌, ಪಿಯುಸಿಎಲ್‌ನ ಅಬ್ರಹಾಂ ಡಿ ಸಿಲ್ವಾ ಮಾತನಾಡಿದರು. ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಸಾಮಾಜಿಕ ಕಾರ್ಯಕರ್ತ ಬ್ರುಜೇಶ್‌ ಒಲಿವೆರಾ ಭಾಗವಹಿಸಿದ್ದರು. 

‘ಸೌಹಾರ್ದತೆ ಬೆಸೆಯಬೇಕು’

‘ನಾವು ಸಿದ್ಧಪಡಿಸಿದ ವರದಿಯನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರಿಗೆ ಸಲ್ಲಿಸಿದ್ದೇವೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ನೀಡಿದ್ದೇವೆ. ಜಿಲ್ಲಾಧಿಕಾರಿಯವರು ನಮ್ಮೊಂದಿಗೆ ಈ ವಿಚಾರವಾಗಿ ಮಾತನಾಡಿದ್ದಾರೆ. ಕ್ರಮ ಕೈಗೊಳ್ಳುವ ಬದ್ಧತೆಯನ್ನೂ ಪ್ರದರ್ಶಿಸಿದ್ದಾರೆ.  ಮೆಂದರೆ ಪೋಡಿನ ಗಿರಿಜನರು ನಮಗೆ ಜೀವಿಸಲು ನಮ್ಮ ಸಮುದಾಯಗಳಿರುವ ಕಡೆ ಸ್ಥಳ ನೀಡಿ ಪುನರ್ವಸತಿ ಕಲ್ಪಿಸಬೇಕು ಎಂದು ಕೇಳಿದ್ದಾರೆ. ಇಂಡಿಗನತ್ತದ ಗ್ರಾಮಸ್ಥರು ಕೂಡ ಮೂಲ ಸೌಲಭ್ಯಗಳನ್ನು ಕೇಳುತ್ತಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎರಡು ಗ್ರಾಮಗಳಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಎರಡು ಗ್ರಾಮಗಳ ಜನರ ನಡುವೆ ಸೌಹಾರ್ದತೆ ಬೆಸೆಯಬೇಕು. ಮೆಂದರೆ ಪೋಡಿನವರಿಗೆ ರಕ್ಷಣೆ ಮತ್ತು ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT