ಬುಧವಾರ, ಏಪ್ರಿಲ್ 14, 2021
24 °C
ಆವರ್ತನ ನಿಧಿ ಸ್ಥಾಪನೆ, ‌ಬೆಳೆಗಾರರ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚಿಸಲು ರವಿಕುಮಾರ್ ಒತ್ತಾಯ

ಆತ್ಮನಿರ್ಭರ: ಅರಿಸಿನ ಬೆಳೆಗೆ ಕಾಯಕಲ್ಪಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆತ್ಮನಿರ್ಭರ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅರಿಸಿನಕ್ಕೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಸದಸ್ಯ ಬಿ.ಕೆ.ರವಿಕುಮಾರ್‌ ಅವರು ಒತ್ತಾಯಿಸಿದರು. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ‘ಒಂದು ಜಿಲ್ಲೆ–ಒಂದು ಉತ್ಪನ್ನ’ ಯೋಜನೆಗೆ ಅರಿಸಿನವನ್ನು ನಮ್ಮ ಜಿಲ್ಲೆಯಲ್ಲಿ ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 9,500 ಹೆಕ್ಟೇರ್‌ ಜಾಗದಲ್ಲಿ ಅರಿಸಿನ ಬೆಳೆಯಲಾಗುತ್ತಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 2,700 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ 2 ಲಕ್ಷ ಕ್ವಿಂಟಲ್‌ಗಳಷ್ಟು ಅರಿಸಿನ ಮಾರಾಟವಾಗುತ್ತಿದೆ. ಇದು ವಾಣಿಜ್ಯ ಬೆಳೆಯಾಗಿದ್ದರೂ, ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಿರುವುದರಿಂದ ರೈತರಿಗೆ ಹೆಚ್ಚು ಲಾಭವಾಗುತ್ತಿಲ್ಲ’ ಎಂದು ಅವರು ಹೇಳಿದರು.

‘ಅರಿಸಿನಕ್ಕೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲಿ ಸದ್ಯ ಐದು ರೈತ ಉತ್ಪಾದಕ ಸಂಸ್ಥೆಗಳಿದ್ದು, ಅವುಗಳನ್ನು ಇನ್ನಷ್ಟು ಹೆಚ್ಚಿಸಬೇಕು. ಅರಿಸಿನ ಸಂಸ್ಕರಣಾ ಘಟಕಗಳನ್ನು ಹೆಚ್ಚು ಸ್ಥಾಪಿಸಬೇಕು. ಚಾಮರಾಜನಗರ ಎಪಿಎಂಸಿಯಲ್ಲಿ ಒಂದು ಘಟಕವನ್ನು ನಿರ್ಮಿಸಲಾಗಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ. ಸಂ‌ಸ್ಕರಣಾ ಘಟಕಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸುವುದರಿಂದ ಬೆಳೆಗಾರರಿಗೆ ಅನುಕೂಲವಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ’ ಎಂದರು.   

‘ಜಿಲ್ಲೆಯಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಅವಕಾಶ ಇದೆ. ಅರಿಸಿನ ಉಪ ಉಪಉತ್ಪನ್ನಗಳ ತಯಾರಿಸುವ ಉದ್ದಿಮೆಗಳು ಬಂದರೆ ಜಿಲ್ಲೆಯ ಬೆಳೆಗಾರರಿಗೆ ಅನುಕೂಲವಾಗಲಿದೆ. ಉದ್ದಿಮೆ ಸ್ಥಾಪಿಸಲು ಮುಂದೆ ಬರುವವರಿಗೆ ಆತ್ಮ ನಿರ್ಭರ ಯೋಜನೆಯ ಅಡಿಯಲ್ಲಿ ನೆರವು ನೀಡಬೇಕು’ ಅವರು ಒತ್ತಾಯಿಸಿದರು. 

ಆವರ್ತನಿಧಿ ಸ್ಥಾಪಿಸಿ: ‘ಒಂದು ಎಕರೆ ಪ್ರದೇಶದಲ್ಲಿ ಅರಿಸಿನ ಬೆಳೆಯಲು ₹1 ಲಕ್ಷ ಖರ್ಚಾಗುತ್ತದೆ. ಕ್ಚಿಂಟಲ್‌ಗೆ ಸಾಮಾನ್ಯವಾಗಿ ₹6,000. ಒಂದು ಎಕರೆ ಪ್ರದೇಶದಲ್ಲಿ 20ರಿಂದ 30 ಕ್ವಿಂಟಲ್‌ ಬೆಳೆ ಬರುತ್ತದೆ. ಗರಿಷ್ಠ ಎಂದರೆ ₹1.8 ಲಕ್ಷ ಆದಾಯ ಬರಬಹುದು. ರೈತ ಒಂದು ವರ್ಷ ಕಾದಿದ್ದಕ್ಕೆ ಅವನಿಗೆ ಕೇವಲ ₹80 ಸಾವಿರ ಸಿಗುತ್ತದೆ. ಬೆಲೆ ಕುಸಿದರೆ ಅಷ್ಟೂ ಸಿಗುವುದಿಲ್ಲ. ಹಾಗಾಗಿ, ಬೆಲೆ ಕುಸಿದ ಸಂದರ್ಭದಲ್ಲಿ ಬೆಂಬಲ ಬೆಲೆ ನಿಗದಿ ಪಡಿಸಿ ಸರ್ಕಾರ ಅರಿಸಿನ ಖರೀದಿಸಿಬೇಕು. ಇದಕ್ಕಾಗಿ ಆವರ್ತ ನಿಧಿಯನ್ನು ಸ್ಥಾಪಿಸಬೇಕು. ಕನಿಷ್ಠ ₹500 ಕೋಟಿಯನ್ನು ಅದಕ್ಕೆ ಹಂಚಿಕೆ ಮಾಡಬೇಕು. ಅರಿಸಿನ ಬೆಳೆಗಾರರ ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒಂದು ಅಧ್ಯಯನ ಸಮಿತಿಯನ್ನೂ ಸರ್ಕಾರ ರಚಿಸಬೇಕು’ ಎಂದು ರವಿಕುಮಾರ್‌ ಒತ್ತಾಯಿಸಿದರು. 

ಹರದನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ರಮೇಶ್, ಸೌಹಾರ್ದ ರೈತ ಆಸಕ್ತ ಕಂಪನಿಯ ಅಧ್ಯಕ್ಷ ಎಚ್‌.ಎಂ.ಗಿರೀಶ್‌, ಮುಖಂಡರಾದ ನಂಜುಂಡಸ್ವಾಮಿ, ಪುರುಷೋತ್ತಮ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು