ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಸಿ ಸಾಧಕರು | ಜಾಗೃತಿ ಜಾಥಗಳಿಗೆ ಜೀವ ತುಂಬುವ ಕಲಾವಿದ

ಸರ್ಕಾರದ ಯೋಜನೆಗಳಿಗೆ ಘೋಷವಾಕ್ಯ ಮೊಳಗಿಸುವ ಕೆಸ್ತೂರು ಬಿ.ನಾಗರಾಜು
ನಾ.ಮಂಜುನಾಥಸ್ವಾಮಿ
Published : 11 ಸೆಪ್ಟೆಂಬರ್ 2024, 5:24 IST
Last Updated : 11 ಸೆಪ್ಟೆಂಬರ್ 2024, 5:24 IST
ಫಾಲೋ ಮಾಡಿ
Comments

ಯಳಂದೂರು: ‘ಇಂದಿನ ಮಕ್ಕಳು ಮುಂದಿನ ಭವಿಷ್ಯ’ ‘ವ್ಯವಸ್ಥೆ ಬದಲಾಗಲಿ..ಹವಾಮಾನವಲ್ಲ’. ಅಕ್ಷರ ಕಲಿರವ್ವ;ಮನೆ ಬೆಳಗಿರವ್ವ’, ‘ಬಟ್ಟೆ ಚೀಲ ಹಿಡಿಯಿರಿ, ಶುದ್ಧ ಅನ್ನ ನೀರು ಹೊಯ್ಯಿರಿ’, ‘ಈ ಭೂಮಿ, ಗಾಳಿ, ಜಲ ನಮ್ಮದು;ಸಂರಕ್ಷಣೆಯ ಹೊಣೆ ಎಲ್ಲರದ್ದು’ ಎಂಬ ಘೋಷ ವಾಕ್ಯಗಳನ್ನು ಕೂಗುತ್ತ, ಸಂಗೀತ, ನೃತ್ಯ, ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಾರೆ ಕೃಷಿಧಾರೆಯ ಕೆಸ್ತೂರು ಬಿ.ನಾಗರಾಜು.

ತಾಲ್ಲೂಕಿನ ಕೆಸ್ತೂರು ಗ್ರಾಮದ ನಾಗರಾಜು ಕಲಿತಿದ್ದು ಕಡಿಮೆ. ಆದರೆ, ಕಲಾ ತಂಡಗಳ ಜೊತೆ ಸೇರಿ ಹಾಡಿದ ಅನುಭವ ದೊಡ್ಡದು. ತಿರುಗಾಟದ ಮೂಲಕ ನಾಟಕ, ಕುಣಿತ, ತಮಟೆ ಬಾರಿಸಿ  ಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಗ್ರಾಮೀಣ ಭಾಗಗಳಲ್ಲಿ ಹಲವು ಪಾತ್ರಗಳಿಗೆ ಬಣ್ಣ ಹಚ್ಚಿ ಅಭಿನಯಿಸಿದ್ದಾರೆ.

ಸರ್ಕಾರದ ಯೋಜನೆಗಳ ಮಹತ್ವವನ್ನು ಜನರಿಗೆ ಮುಟ್ಟಿಸಿ, ಶಾಲಾ ಕಾಲೇಜುಗಳ ಮಕ್ಕಳಿಗೂ ಜನಪದ, ನಾಟಕದ ಮೂಲಕ ಗುರುತಾಗಿದ್ದಾರೆ ನಾಗರಾಜು.

ತಂದೆ ತಾಯಿ ಭಜನೆ ಮಾಡುತ್ತಿದ್ದರಿಂದ ಸಹಜವಾಗಿ ಹಾಡು, ಕಥೆ ಆಲಿಸುವ ಅಭ್ಯಾಸ ಒಲಿಯಿತು. ಮೂವತ್ತು ವರ್ಷಗಳಿಂದ ಹಿರಿಯ ಕಲಾವಿದರ ಜೊತೆ ಸೇರಿ ವೇದಿಕೆ ಕಾರ್ಯಕ್ರಮ ನೀಡುತ್ತ ಬೆಳೆದಿದ್ದೇನೆ. ಮೂಢನಂಬಿಕೆ, ಬಾಲ್ಯವಿವಾಹ, ಸಾಕ್ಷರತೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸಾವಿರಾರು ವೇದಿಕೆಗಳಲ್ಲಿ ನನ್ನ ಸಾಂಗತ್ಯ ಇರುತ್ತಿತ್ತು. ಜನ ಸಮುದಾಯ ಸೇರಿಸಲು ತಾಳ ವಾದ್ಯ ಬಾರಿಸುತ್ತ, ಡ್ರಂ ಬಡಿಯುತ್ತ ಘೋಷಣೆ ಕೂಗುವ ಹವ್ಯಾಸ ಸಹಜವಾಗಿ ಒಲಿಯಿತು ಎನ್ನುತ್ತಾರೆ ನಾಗರಾಜು.

ಸರ್ಕಾರ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಇದರ ಸದುದ್ಧೇಶವನ್ನು ನಾಗರಿಕರಿಗೆ ಮುಟ್ಟಿಸುವಲ್ಲಿ ರಂಗಕಲೆ, ನೃತ್ಯ ರೂಪಕ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ. ಅರಣ್ಯ ರಕ್ಷಣೆ, ವಾಯುಮಾಲಿನ್ಯ, ಜನಸಂಖ್ಯಾ ಸ್ಪೋಟ ಮತ್ತು ಎದೆಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಸುತ್ತಾಡಿದ್ದೇನೆ ಎನ್ನುತ್ತಾರೆ ಅವರು.

10ನೇ ತರಗತಿ ಕಲಿತಿರುವ ನಾಗರಾಜು 50ನೇ ವಯಸ್ಸಿನಲ್ಲೂ ಜನರೊಟ್ಟಿಗೆ ಬೆರೆತು ಮನರಂಜನೆ ನೀಡುತ್ತಾರೆ. ಕ್ಲಿಷ್ಟ ಪಾಠಗಳಿಗೆ ಸರಳ ಮಟ್ಟುಗಳನ್ನು ಹಾಕಿ ಕಲಿಸುವ ಕಲೆಗಾರಿಕೆ  ಅವರಿಗೆ ಸಿದ್ಧಿಸಿದೆ. ಜನಪದ ಹಾಡು ಹಾಗೂ ಸರಳ ಪರಿಕರಗಳ ಮೂಲಕ ಸಾಮಾಜಿಕ ಬದಲಾವಣೆಯ ಗೀತೆಗಳನ್ನು ಹಾಡಿದ್ದಾರೆ.

ಬದುಕಿಗೆ ಸಣ್ಣಪುಟ್ಟ ಕಾಯಕ ಮಾಡಿಕೊಂಡಿರುವ ನಾಗರಜು ಕೃಷಿಧಾರೆ ಯೋಜನೆಯಲ್ಲೂ ದುಡಿದಿದ್ದಾರೆ. ದಸರಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಸಾಂಸ್ಕೃತಿಕ ವೇದಿಕೆ ಹಾಗೂ ಸಾವಿರಾರು ಊರುಗಳಲ್ಲಿ ಜಾಗೃತಿ ಮೂಡಿಸಿದ್ದು, ಹಲವು ಇಲಾಖೆಗಳಿಂದ ಸನ್ಮಾನಗಳು ಸಂದಿವೆ.

ಜನರನ್ನು ಒಗ್ಗೂಡಿಸಲು ಕಲಾವಿದರು ಬೇಕು:

ಬೀದಿ ನಾಟಕ ಮತ್ತು ಕಲೆ ಎಲ್ಲ ಸ್ತರದ ಜನರನ್ನು ತಲುಪಲು ಇರುವ ಮಾಧ್ಯಮ. ಆರೋಗ್ಯ ಅಭಿಯಾನ, ಬಾ ಮಗಳೆ ಶಾಲೆಗೆ, ಶಾಲೆ ಬಿಟ್ಟ ಮಕ್ಕಳನ್ನು ಕಲಿಕೆಗೆ ಹಚ್ಚಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಮತ ಮಾತಾಡಲಿ,  ಮೊದಲಾದ ರೂಪಗಳನ್ನು ನಾಗರಾಜ್‌ ಪ್ರಸ್ತುತಪಡಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಸಂಯೋಜಿಸಿದ್ದಾರೆ.

ಕೆಸ್ತೂರು ನಾಗರಾಜು
ಕೆಸ್ತೂರು ನಾಗರಾಜು

ಕ್ಲಿಷ್ಟ ಪಾಠಗಳಿಗೆ ಸರಳ ಮಟ್ಟುಹಾಕುವ ಕಲಾವಿದ ಜಾಗೃತಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದ ನಾಗರಾಜ್ ಮಕ್ಕಳಲ್ಲಿ ಜನಪದ, ರಂಗಭೂಮಿ ಆಸಕ್ತಿ ಮೊಳೆಸುವ ಕಲಾವಿದ

‘ಜನರ ಮುಟ್ಟುವ ಅಭಿನಯ ಬೇಕು’

‘ಕಡಿಮೆ ಸಮಯದಲ್ಲಿ ಜನರನ್ನು ಮುಟ್ಟುವಂತೆ ನಟರ ಅಭಿನಯ ಇರಬೇಕು. ಮೇಕಪ್ಪು ಧಿರಿಸು ಬಳಸುವ ಕಲೆ ತಿಳಿದಿರಬೇಕು. ಶುಶ್ರಾವ್ಯ ಕಂಠದ ಮೂಲಕ ಗ್ರಾಮಸ್ಥರಿಗೆ ವಿಷಯ ದಾಟಿಸಬೇಕು. ಅನಕ್ಷರಸ್ಥರಲ್ಲೂ ಆಸಕ್ತಿ ಹುಟ್ಟಿಸುವಂತೆ ಜಾಗೃತಿ ಜಾಥಾಗಳನ್ನು ರೂಪಿಸುವ ನೈಪುಣ್ಯತೆ ತಿರುಗಾಟದಲ್ಲಿ ಇರಬೇಕು ಎನ್ನುತ್ತಾರೆ ನಾಗರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT