ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಬಳ್ಳಿ | 7,900 ಪುಸ್ತಕಗಳ ಭಂಡಾರ: ಕುಳಿತಲ್ಲೇ ಜಗತ್ತು ಕಾಣಿಸುವ ಹೊತ್ತಗೆ!

Published 5 ಡಿಸೆಂಬರ್ 2023, 6:12 IST
Last Updated 5 ಡಿಸೆಂಬರ್ 2023, 6:12 IST
ಅಕ್ಷರ ಗಾತ್ರ

ನಾ.ಮಂಜುನಾಥಸ್ವಾಮಿ

ಯಳಂದೂರು: ವ್ಯಕ್ತಿ ಅಥವಾ ವಿದ್ಯಾರ್ಥಿ ಪುಸ್ತಕ ಹಿಡಿದರೆ ಜಗತ್ತು ಅವನ ಸುತ್ತ ತಿರುಗುತ್ತದೆ ಎಂಬುದನ್ನು ಹಲವು ಸಾಧಕರು ಸಾಬೀತು ಪಡಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲೇ ಜನರಿಗೆ ಗ್ರಂಥಾಲಯ ಸೌಲಭ್ಯ ಸಿಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲೇ ಗ್ರಂಥಾಲಯಗಳಿಗೆ ಹೊಸ ರೂಪ ನೀಡುತ್ತಿದೆ.

ಜಿಲ್ಲಾ ಪಂಚಾಯಿತಿಯ ಮೇಲುಸ್ತುವಾರಿಯಲ್ಲಿ ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲೂ ಗ್ರಂಥ ಭಂಡಾರಕ್ಕೆ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ. ಮಾಂಬಳ್ಳಿ ಗ್ರಾಮದಲ್ಲಿನ ಗ್ರಂಥಾಲಯವು ಡಿಜಿಟಲೀಕರಣಗೊಂಡು ಈಗ ಹೆಚ್ಚು ಮಕ್ಕಳು, ಮಹಿಳೆಯರನ್ನು ತನ್ನತ್ತ ಸೆಳೆಯುತ್ತಿದೆ.

ಪ್ರತಿದಿನ ನೂರಾರು ಓದುಗರು ಹಾಗೂ ಮಕ್ಕಳು ಪತ್ರಿಕೆ, ಪುಸ್ತಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಮಾಹಿತಿ ಸಂಗ್ರಹಿಸಲು ಗ್ರಂಥಾಲಯದತ್ತ ಮುಖ ಮಾಡುತ್ತಿದ್ದಾರೆ.

ಸ್ತ್ರೀಯರು ಓದುಗರು: ‘ಪ್ರತಿದಿನ ಸ್ವ ಸಹಾಯ ಸಂಘದ ಸದಸ್ಯರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಪತ್ರಿಕೆ ಮತ್ತು ಪುಸ್ತಕಗಳನ್ನು ಓದುತ್ತಾರೆ. ರಜಾ ದಿನಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಬಾಲಕಿಯರು ಪಠ್ಯ ಕೇಂದ್ರಿತ ವಿಷಯಗಳನ್ನು ಗೂಗಲ್‌ನಲ್ಲಿ ಹಡುಕುತ್ತಾರೆ. ಕೆಲವರು ಬರೆದುಕೊಂಡು, ಕಲಿಕೆಗೆ ಬಳಸಿಕೊಳ್ಳುತ್ತಾರೆ. ವಿಜ್ಞಾನ, ಕಲೆ, ಕವಿ, ಕಲಾವಿದ ಮತ್ತು ಪರಿಸರದ ಬಗ್ಗೆ ಅಧ್ಯಯನ ಮಾಡುವವರಿಗೆ  ಗ್ರಂಥಾಲಯ ನೆರವಾಗಿದೆ’ ಎಂದು ಗ್ರಂಥಪಾಲಕಿ ಮಂಜುಳ ಹೇಳುತ್ತಾರೆ.

‘ನಮಗೆ ಉತ್ತಮ ವ್ಯಕ್ತಿತ್ವ ಕಟ್ಟಿಕೊಡುವ ನಿಟ್ಟಿನಲ್ಲಿ ಹಾಗೂ ದೇಶದ ನಾಗರಿಕರನ್ನಾಗಿ ರೂಪಿಸುವ ಹಾದಿಯಲ್ಲಿ ಗ್ರಂಥಗಳು, ಕೃತಿಗಳು ಸಹಕಾರಿಯಾಗಿವೆ. ಮಹಾತ್ಮರ ಘೋಷ ವಾಕ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿ ಮತ್ತು ಸಾರ್ವಜನಿಕರನ್ನು ಪುಸ್ತಕಗಳನ್ನು ಓದಲು ಪ್ರೇರೇಪಿಸುವ ಕೆಲಸವೂ ನಡೆದಿದೆ’ ಎಂದು ಅವರು ಹೇಳಿದರು.

‘ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಿಗೆ ಓದುವ ಹವ್ಯಾಸ ಬೆಳಸಬೇಕು. ಸಮಯದ ಸದ್ಭಳಕೆ ಮಾಡಿಕೊಂಡು,  ಕಲಿಕೆ ಜೊತೆ ನಮ್ಮ ಸಂಸ್ಕೃತಿ, ವೈಚಾರಿಕತೆ ತಿಳಿಸಬೇಕು. ದಿನ ಪತ್ರಿಕೆಗಳ ಮಹತ್ವ ಮನಗಾಣಿಸಬೇಕು. ಕನ್ನಡ ಭಾಷೆ ಮತ್ತು ನುಡಿಯನ್ನು ಸ್ಪಷ್ಟವಾಗಿ ಬಳಸಲು ಕಂಪ್ಯೂಟರ್ ಆಧಾರಿತ ಧ್ವನಿ ಗ್ರಹಣ ವ್ಯವಸ್ಥೆಯೂ ಈ ಗ್ರಂಥಾಲಯದಲ್ಲಿದೆ’ ಎಂದು ಸ್ತ್ರೀ ಶಕ್ತಿ ಸಂಘದ ಸದಸ್ಯೆ ಸೌಭಾಗ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

7900 ಪುಸ್ತಕಗಳ ಸಂಗ್ರಹ
₹10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. 5400 ಗ್ರಂಥಗಳು 2500 ಪುಸ್ತಕಗಳ ಸಂಗ್ರಹ ಇಲ್ಲಿದೆ. 'ಗ್ರಾಮ ಪಂಚಾಯಿತಿಯು ಮೂರು ಕಂಪ್ಯೂಟರ್ ಹಾಗೂ ಶಿಕ್ಷಣ ಫೌಂಡೇಷನ್ ಎರಡು ಟ್ಯಾಬ್ ಮತ್ತು ಒಂದು ಕಂಪ್ಯೂಟರ್‌ ಪೂರೈಸಿದೆ. 15ನೇ ಹಣಕಾಸು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನಗಳು ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಸಹಾಯಧನವೂ ಗ್ರಂಥಾಲಯದ ಅಭಿವೃದ್ಧಿಗೆ ನೆರವಾಗಿದೆ’ ಎಂದು ಪಿಡಿಒ ರಮೇಶ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT