ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ಇಳಿಕೆ: ಹಗುರವಾಗಿ ತೆಗೆದುಕೊಳ್ಳದಿರಿ: ಸಚಿವ ಸುರೇಶ್‌ ಕುಮಾರ್‌ ಕಿವಿಮಾತು

ಕೋವಿಡ್‌ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ
Last Updated 19 ಜೂನ್ 2021, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. 503 ಗ್ರಾಮಗಳ ಪೈಕಿ 300ಕ್ಕೂ ಹೆಚ್ಚು ಗ್ರಾಮಗಳು ಸೋಂಕು ಮುಕ್ತವಾಗಿವೆ. ಲಸಿಕೆ ನೀಡಿಕೆಯಲ್ಲಿ ಹೆಚ್ಚಿನ ಪ್ರಗತಿಯಾಗಬೇಕಿದ್ದು, ಕೋವಿಡ್‌ ಮುಕ್ತ ಗ್ರಾಮಗಳಂತೆ ಶೇ 100ರಷ್ಟು ಲಸಿಕೆ ಪಡೆದ ಗ್ರಾಮಗಳು ಹೆಚ್ಚಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಹೇಳಿದರು.

ಜಿಲ್ಲಾ ಕೋವಿಡ್‌ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಧೃಢ ಪ್ರಕರಣಗಳ ಸಂಖ್ಯೆ, ಮರಣ ಪ್ರಮಾಣ ಸಂಖ್ಯೆ ಕಡಿಮೆಯಾಗಿದೆಯಾದರೂ ಹಗುರವಾಗಿ ಪರಿಗಣಿಸದೇ ಮುಂದೆಯೂ ಸೋಂಕು ತಡೆಯಲು ಅವಶ್ಯಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸತತ ಕ್ರಮಗಳ ಮೂಲಕ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಸುಧಾರಿಸಲು ನಿರಂತರ ನಿಗಾ ಕ್ರಮಗಳು ಇರಬೇಕು’ ಎಂದು ಸಚಿವರು ತಿಳಿಸಿದರು.

‘ಕೋವಿಡ್ ತಡೆಯುವ ಉದ್ದೇಶದಿಂದ ಕ್ರಮಿಸಿದ ಹಾದಿಯಲ್ಲಿ ಎದುರಾದ ಅಡೆ ತಡೆಗಳು, ತೆಗೆದುಕೊಂಡ ತೀರ್ಮಾನಗಳು ಇನ್ನಿತರ ಪ್ರಮುಖ ಅಂಶಗಳು ಮುಂದಿನ ಪರಿಸ್ಥಿತಿಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಬಲ ತಂದುಕೊಟ್ಟಿದೆ. ಈ ಎಲ್ಲ ಅನುಭವಗಳು ಮುಂದೆ ಎದುರಾಗುವ ಸವಾಲನ್ನು ಸಮರ್ಥವಾಗಿ ಎದುರಿಸಲು ಪಾಠವಾಗಿವೆ. ಎಲ್ಲರ ಅವಿರತ ಪರಿಶ್ರಮ ಸಕ್ರಿಯ ತೊಡಗುವಿಕೆಯಿಂದ ಅಂದಿನ ದುಗುಡ ಪರಿಸ್ಥಿತಿ ಇಂದು ತಿಳಿಯಾಗಿದೆ’ ಎಂದು ಸಚಿವರು ಹೇಳಿದರು.

ಸಂಭಾವ್ಯ ಕೋವಿಡ್ ಮೂರನೇ ಅಲೆ, ಆಸ್ಪತ್ರೆಗಳಲ್ಲಿ ಸೋಂಕಿತರ ಆರೈಕೆ, ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣೆ ಸೇರಿದಂತೆ ಕೋವಿಡ್ ಸಂಬಂಧಿ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೊಯರ್ ನಾರಾಯಣ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್, ಜಿಲ್ಲಾ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಮಹೇಶ್, ಮಕ್ಕಳ ತಜ್ಞರಾದ ಡಾ. ಸುಗುಣ, ಜಿಲ್ಲ ಸರ್ವೆಲೆನ್ಸ್ ಅಧಿಕಾರಿ ಡಾ.ಅಂಕಪ್ಪ, ಆರ್.ಸಿ.ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ನೋಡೆಲ್ ಏಡುಕೊಂಡಲು, ಡಾ.ಸಂತೋಷ್ ಕುಮಾರ್ ಇದ್ದರು.

ಲಸಿಕೆ ಕಾರ್ಯಕ್ಕೆ ಚುರುಕು: ಶಾಸಕರ ಸಲಹೆ

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನ ಕುಮಾರ್ ಅವರು ಮಾತನಾಡಿ, ‘ಕೋವಿಡ್ ಯಾವುದೇ ಅಲೆಯನ್ನು ಯಶಸ್ವಿಯಾಗಿ ತಡೆಯಲು ಲಸಿಕೆಯೊಂದೇ ಮಾರ್ಗ. ಹಾಗಾಗಿ, ಲಸಿಕೆ ನೀಡುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲಸಿಕೆ ನೀಡುವ ಕೆಲಸವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಿದೆ. ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT