ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಲೆಕೋಸು ಬೆಳಗಾರನಿಗೆ ನೆರವಾದ ‘ಟ್ವಿಟರ್‌’

ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರಿಂದ 30 ಟನ್‌ಗಳಷ್ಟು‌ ಖರೀದಿ
Last Updated 24 ಏಪ್ರಿಲ್ 2020, 15:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಮೀನಿನಲ್ಲಿ ಬೆಳೆದ ಎಲೆಕೋಸನ್ನು (ಕ್ಯಾಬೇಜ್‌) ಲಾಕ್‌ಡೌನ್ ಕಾರಣಕ್ಕೆ ಮಾರಾಟ ಮಾಡಲು ಸಾಧ್ಯವಾಗದೇ ತೊಂದರೆಗೆ ಸಿಲುಕಿದ್ದ ತಾಲ್ಲೂಕಿನ ರೈತರೊಬ್ಬರು, ಟ್ವಿಟರ್‌ ಅನ್ನೇ ವೇದಿಕೆಯನ್ನಾಗಿ ಬಳಸಿಕೊಂಡು ಸ್ವಲ್ಪ ಬೆಳೆಯನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಗಡಿ ಗ್ರಾಮ ವಡ್ಡರಹಳ್ಳಿಯ ಕೃಷಿಕ ಕಣ್ಣೈಯನ್‌ ಸುಬ್ರಮಣಿಯಂ ರೈತ ಮುಖಂಡರೂ ಹೌದು. ತಮಿಳುನಾಡಿನಲ್ಲಿ ವಾಸವಾಗಿರುವ ಅವರ ಜಮೀನು ಇರುವುದು ಕರ್ನಾಟಕದಲ್ಲಿ. ಮೂರೂವರೆ ಎಕರೆ ಪ್ರದೇಶದಲ್ಲಿ ₹4 ಲಕ್ಷ ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. 80 ಟನ್‌ಗಳಷ್ಟು ಇಳುವರಿ ಬಂದಿತ್ತು.

ಲಾಕ್‌ಡೌನ್‌ ಕಾರಣಕ್ಕೆ ಕಟಾವು ಮಾಡಲು ಸಾಧ್ಯವಾಗಿರಲಿಲ್ಲ. ಏಪ್ರಿಲ್‌ 18ರಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿ ಟ್ವೀಟ್‌ ಮಾಡಿದ್ದ ಅವರು, ಅದನ್ನು ಉದ್ಯಮಿಗಳಾದ ಆನಂದ್‌ ಮಹೀಂದ್ರಾ ಹಾಗೂ ರತನ್‌ ಟಾಟಾ ಅವರಿಗೆ ಟ್ಯಾಗ್‌ ಮಾಡಿದ್ದರು.

ಇದನ್ನು ಗಮನಿಸಿ, ಹಲವರು ಕಣ್ಣೈಯನ್‌ ಅವರನ್ನು ಸಂಪರ್ಕಿಸಿದ್ದಾರೆ. ಅವರ ಮೂಲಕ 30 ಟನ್‌ಗಳಷ್ಟು ಎಲೆಕೋಸನ್ನು ಮಾರಾಟ ಮಾಡಿದ್ದಾರೆ. ಇನ್ನೂ ಅವರ ಬಳಿ 50 ಟನ್‌ ಬೆಳೆ ಇದ್ದು, ಮಾರಾಟಕ್ಕೆ ವ್ಯವಸ್ಥೆ ಆಗಿಲ್ಲ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ 12 ಟನ್‌ ಖರೀದಿಸಿ, ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಬಡವರಿಗೆ ಹಂಚಿದ್ದಾರೆ. ಕೊಯಮತ್ತೂರಿನ ಕುಮಾರ ಗುರು ಎಜುಕೇಷನ್‌ ಸೊಸೈಟಿಯವರು ಮೂರು ಟನ್‌, ಆದಿತ್ಯ ಠಾಕೂರ್‌ ಎಂಬುವವರು 4 ಟನ್‌, ವೇ ಕೂಲ್‌ ಎಂಬ ಸಂಸ್ಥೆ 8 ಟನ್‌ ಖರೀದಿಸಿದೆ.

‘ಆನಂದ್‌ ಮಹೀಂದ್ರಾ ಹಾಗೂ ರತನ್‌ ಟಾಟಾ ಅವರನ್ನು ಟ್ಯಾಗ್‌ ಮಾಡಿದ್ದ ಟ್ವೀಟ್‌ ಅನ್ನು ಗಮನಿಸಿದ ಕೆಲವರು, ಅದಕ್ಕೆ ಪ್ರತಿಕ್ರಿಯಿಸಿ ಸಂಸದ ತೇಜಸ್ವಿ ಸೂರ್ಯ ಅವರ ಗಮನ ಸೆಳೆದಿದ್ದರು. ಅವರು ಕೆ.ಜಿ.ಗೆ ₹3.5ರಂತೆ ಖರೀದಿಸಿ ಬಡವರಿಗೆ ಹಂಚಿದ್ದಾರೆ. ಆದಿತ್ಯ ಠಾಕೂರ್‌ ಎಂಬುವವರು ₹10 ಸಾವಿರ ಕಳುಹಿಸಿದ್ದರು. ಅಷ್ಟು ಮೌಲ್ಯದ ಎಲೆಕೋಸನ್ನು ಸ್ಥಳೀಯ ಯುವಕ ಸಂಘದ ಸಹಕಾರದಿಂದ ಗ್ರಾಮೀಣ ಭಾಗದಲ್ಲಿ ಹಂಚಲಾಗಿದೆ’ ಎಂದುಕಣ್ಣೈಯನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘30 ಟನ್‌ಗಳಷ್ಟು ಬೆಳೆಯನ್ನು ಸರಾಸರಿ ಕೆ.ಜಿ.ಗೆ ₹2.5 ದರಕ್ಕೆ ಮಾರಾಟ ಮಾಡಿದ್ದೇನೆ. ಇದರಲ್ಲಿ, ಮಾಡಿದ ಖರ್ಚು ಕೂಡ ಸಿಗುವುದಿಲ್ಲ. ರೈತ ಮುಖಂಡನಾಗಿ ಬೆಳೆದಿದ್ದನ್ನು ಹಾಳು ಮಾಡಬಾರದು ಎಂಬ ಉದ್ದೇಶದಿಂದ ಟ್ವಿಟರ್‌ ಅನ್ನು ವೇದಿಕೆಯಾಗಿ ಮಾಡಿಕೊಂಡೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಗೊತ್ತಿರುವ ಯುವಕರು, ಅವುಗಳ ಪರಿಣಾಮಕಾರಿ ಬಳಕೆಯ ಬಗ್ಗೆ ರೈತರಿಗೆ ತಿಳಿಸಿಕೊಡಬೇಕು. ಇದರಿಂದ ಬೆಳೆಗಾರರಿಗೆ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

ಸರ್ಕಾರವೇ ಖರೀ‌ದಿಸಿ ಹಂಚಲಿ
‘ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ತೋಟಗಾರಿಕೆ ಇಲಾಖೆಯ ಮೂಲಕ ರೈತರ ಉತ್ಪನ್ನಗಳನ್ನು ಖರೀದಿಸಿ, ಜನರಿಗೆ ವಿತರಿಸಲು ಅವಕಾಶ ಇದೆ. ಉತ್ಪನ್ನಗಳ ಸಾಗಣೆ ಕಷ್ಟವೇನಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಸುಮ್ಮನೆ ನಿಂತಿವೆ. ಅವುಗಳ ಆಸನಗಳನ್ನು ತೆಗೆದು, ಅದರಲ್ಲೇ ಬೆಳೆಗಳನ್ನು ಸಾಗಣೆ ಮಾಡಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡಬಹುದು ಅಥವಾ ಉಚಿತವಾಗಿ ಹಂಚಬಹುದು. ಪ್ರತಿಯೊಂದು ಜಿಲ್ಲೆಯಲ್ಲೂ ಇದೇ ರೀತಿ ಮಾಡಿದ್ದರೆ, ರೈತರಿಗೆ ಅನುಕೂಲವಾಗುತ್ತಿತ್ತು’ ಎಂದು ಕಣ್ಣೈಯನ್‌ ಸುಬ್ರಮಣಿಯಂ‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT